
ಬೆಂಗಳೂರು, 17 ಅಕ್ಟೋಬರ್ (ಹಿ.ಸ.):
ಬೆಂಗಳೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾರತದ ಪತ್ರಿಕಾ ನೋಂದಣಿಯ ಪ್ರಧಾನ ಮಹಾನಿರ್ದೇಶಕ ಯೋಗೇಶ ಕುಮಾರ ಬವೇಜಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ನೋಂದಣಿ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ಹಲವಾರು ಮಹತ್ವದ ಬದಲಾವಣೆಗಳನ್ನು ತರುವ ಮೂಲಕ ಸುಮಾರು 150 ವರ್ಷದಷ್ಟು ಹಳೆಯ ಕಾಯ್ದೆಯನ್ನು ಮಾಧ್ಯಮದವರ ಅನುಕೂಲಕ್ಕಾಗಿ ಡಿಜಿಟಲೀಕರಣದೊಂದಿಗೆ ಸರಳೀಕರಣಗೊಳಿಸುವ ಮೂಲಕ ಮಾಧ್ಯಮ ಕ್ಷೇತ್ರವನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಯೋಗೇಶ್ ಕುಮಾರ್ ಬವೇಜಾ ಅವರು ತಿಳಿಸಿದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಾರ್ತಾ ಶಾಖೆ ಬೆಂಗಳೂರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ವಾರ್ತಾಸೌಧದ ಮಹಾತ್ಮ ಗಾಂಧೀ ಮಾಧ್ಯಮ ಕೇಂದ್ರದ ಸಭಾಂಗಣದಲ್ಲಿ ಇಂದು ಪತ್ರಿಕಾ ಮತ್ತು ನಿಯತಕಾಲಿಕೆಗಳ ನೋಂದಣೆ ಕಾಯ್ದೆ 2023 ಮತ್ತು ಪ್ರೆಸ್ ಸೇವಾ ಪೋರ್ಟಲ್ ಗೆ ಸಂಬಂಧಿಸಿದ ಕುಂದುಕೊರತೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ದಿನಪತ್ರಿಕೆಗಳ ಮಾಲೀಕರು, ಸಂಪಾದಕರು, ಮುದ್ರಕರು ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಹೊಸ ಪತ್ರಿಕೆ ಆರಂಭಿಸಬೇಕಾದರೆ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಅರ್ಜಿ ಸಲ್ಲಿಸಿ ದೆಹಲಿಗೆ ಕಳುಹಿಸಬೇಕಾಗಿತ್ತು. ಇದರಿಂದ ತಿಂಗಳುಗಳು ಹಾಗೂ ವರ್ಷಗಳೇ ಕಳೆಯುತ್ತಿದ್ದವು. ಆದರೆ ಈಗ 2023 ರ ಹೊಸ ಖಾಯ್ದೆ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು 'ಪ್ರೆಸ್ ಸೇವಾ ಪೋರ್ಟಲ್' ಮೂಲಕ ಆನ್ಲೈನ್ನಲ್ಲಿ ನಡೆಯಲಿರುವುದರಿಂದ ಭೌತಿಕ ದಾಖಲೆಗಳ ಸಲ್ಲಿಕೆಗೆ ಅವಕಾಶವಿರುವುದಿಲ್ಲ. ಹಾಗಾಗಿ ನೋಂದಣಿ ಪ್ರಕ್ರಿಯೆಯು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ನೆರವೇರಲಿದೆ. ಯಾವುದೇ ದಾಖಲೆಗಳು ಕಳೆದುಹೋಗುವ ಅಥವಾ ಕಾಗದಪತ್ರಗಳ ಅಲೆದಾಟದ ಸಮಸ್ಯೆ ಇರುವುದಿಲ್ಲ. ಆದ್ದರಿಂದ ಪತ್ರಿಕೆಗಳು, ನಿಯತಕಾಲಿಕೆಗಳ ನೋಂದಣಿ ಕಾಯ್ದೆಯ ಮಾರ್ಗಸೂಚಿಯನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸಬೇಕು ಎಂದು ತಿಳಿಸಿದರು.
ನೋಂದಣಿ ಪ್ರಕ್ರಿಯೆಯ ಕಾಲಮಿತಿಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದ್ದು, ಅರ್ಜಿ ಸಲ್ಲಿಸಿದ ಕೇವಲ 3 ತಿಂಗಳೊಳಗೆ ಹೊಸ ಪತ್ರಿಕೆಯನ್ನು ಪ್ರಾರಂಭಿಸಬಹುದು ಎಂದು ತಿಳಿಸಿದರು. ಪಿಆರ್ ಜಿಐನಿಂದ ಸಮಗ್ರ ಪರಿಶೀಲನೆ ಬಳಿಕ ಅಂತಿಮವಾಗಿ ಟೈಟಲ್ ನೀಡಿದ ಮೇಲೆ 12 ತಿಂಗಳೊಳಗೆ ಪತ್ರಿಕೆಯನ್ನು ಆರಂಭಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರದ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಹಾಗೂ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ್ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R