
ಬೆಂಗಳೂರು, 17 ಅಕ್ಟೋಬರ್ (ಹಿ.ಸ.):
ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಅಳವಡಿಸಿರುವ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮರಾಗಳ ಕಾರ್ಯವೈಖರಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ಸೀಟ್ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಬಿಎಂಟಿಸಿ ಬಸ್ಗಳಿಗೂ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಮೂರು ಪ್ರತ್ಯೇಕ ಬಿಎಂಟಿಸಿ ಬಸ್ಗಳಿಗೆ ಚಾಲಕರು ಸೀಟ್ಬೆಲ್ಟ್ ಧರಿಸಿಲ್ಲ ಎಂಬ ಕಾರಣ ನೀಡಿ ತಲಾ 500 ರೂ. ದಂಡ ವಿಧಿಸಲಾಗಿದೆ.
ವಿಧಾನಸೌಧದ ಸಮೀಪ ಸಿಗ್ನಲ್ನಲ್ಲಿ ನಿಂತಿದ್ದ ಬಸ್ ಹಾಗೂ ಹೆಣ್ಣೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಗಳಿಗೂ ದಂಡ ವಿಧಿಸಲಾಗಿದೆ.
ಸಾರ್ವಜನಿಕರಲ್ಲಿ ಅಚ್ಚರಿ, ತಾಂತ್ರಿಕ ದೋಷದ ಆರೋಪ
ಬಸ್ ಚಾಲಕರು ಸೀಟ್ಬೆಲ್ಟ್ ಧರಿಸಿಲ್ಲ ಎಂದು ದಂಡ ವಿಧಿಸಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಕಾರುಗಳ ಚಾಲಕರಿಗೆ ಅನ್ವಯಿಸುವ ಸೀಟ್ಬೆಲ್ಟ್ ನಿಯಮದಡಿ ಬಿಎಂಟಿಸಿ ಬಸ್ಗಳಿಗೆ ದಂಡ ವಿಧಿಸಿರುವುದು ಎಐ ಕ್ಯಾಮರಾಗಳ ನಿಖರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಕಾರು ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿದ ಘಟನೆ ವರದಿಯಾಗಿತ್ತು. ಮತ್ತೊಂದು ಪ್ರಕರಣದಲ್ಲಿ, ಬೈಕ್ನ ಹಿಂಭಾಗದಲ್ಲಿದ್ದ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಗುರುತಿಸಿ, ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಲಾಗಿತ್ತು ಎನ್ನಲಾಗಿದೆ.
ತಪ್ಪು ದಂಡಕ್ಕೆ ಕಡಿವಾಣ ಅಗತ್ಯ
ಸಂಚಾರ ನಿಯಮಗಳ ಉಲ್ಲಂಘನೆ ಪತ್ತೆಹಚ್ಚುವಲ್ಲಿ ತಂತ್ರಜ್ಞಾನದ ಬಳಕೆ ಸ್ವಾಗತಾರ್ಹವಾದರೂ, ಇಂತಹ ಪುನರಾವರ್ತಿತ ತಪ್ಪುಗಳು ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮೂಡಿಸುತ್ತಿವೆ.
ತಾಂತ್ರಿಕ ದೋಷಗಳಿಂದ ನಿರಪರಾಧ ವಾಹನ ಸವಾರರು ಮತ್ತು ಸಾರ್ವಜನಿಕರು ಅನಗತ್ಯವಾಗಿ ದಂಡ ಪಾವತಿಸುವ ಅಥವಾ ಅದನ್ನು ಪ್ರಶ್ನಿಸಲು ಸಮಯ ವ್ಯಯಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು.
ಎಐ ಕ್ಯಾಮರಾಗಳಿಂದ ದಾಖಲಾಗುವ ಉಲ್ಲಂಘನೆಗಳನ್ನು ಪರಿಶೀಲಿಸುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ತಪ್ಪಾಗಿ ವಿಧಿಸಲಾದ ದಂಡಗಳನ್ನು ತ್ವರಿತವಾಗಿ ರದ್ದುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R