ಉತ್ತಮ ಸಂಸದೀಯ ಪಟುವಾಗಲು ಯುವ ಸಂಸತ್ತು ಸಹಕಾರಿ: ಸಚಿವ ಕೆ. ಎಂ. ಶಿವಲಿಂಗೇಗೌಡ
ಹಾಸನ, 17 ಅಕ್ಟೋಬರ್ (ಹಿ.ಸ.): ಭವಿಷ್ಯದಲ್ಲಿ ಉತ್ತಮ ಸಂಸತ್‌ ಪಟುವಾಗಲು, ನಮ್ಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ವಿದ್ಯಾರ್ಥಿಗಳಿಗೆ ಯುವ ಸಂಸತ್ತು ಕಾರ್ಯಕ್ರಮ ಅನುಕೂಲವಾಗಲಿದೆ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅ
ಯುವ ಸಂಸತ್ತು ಸಭಾ ಕಾರ್ಯಕ್ರಮಕ್ಕೆ ಸಚಿವ ಕೆ. ಎಂ. ಶಿವಲಿಂಗೇಗೌಡ ಚಾಲನೆ ನೀಡಿದರು.


ಹಾಸನ, 17 ಅಕ್ಟೋಬರ್ (ಹಿ.ಸ.):

ಭವಿಷ್ಯದಲ್ಲಿ ಉತ್ತಮ ಸಂಸತ್‌ ಪಟುವಾಗಲು, ನಮ್ಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ವಿದ್ಯಾರ್ಥಿಗಳಿಗೆ ಯುವ ಸಂಸತ್ತು ಕಾರ್ಯಕ್ರಮ ಅನುಕೂಲವಾಗಲಿದೆ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಅರಸೀಕೆರೆ ತಾಲ್ಲೂಕಿನ ಶ್ರೀ ವೆಂಕಟೇಶ್ವರ ಕಲಾ ಭವನದಲ್ಲಿ ಇಂದು ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಸಭಾ ಕಾರ್ಯಕ್ರಮಕ್ಕೆ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು ಚಾಲನೆ ನೀಡಿದರು. ಯುವ ಸಂಸತ್ತನ್ನು ನಡೆಸುವಾಗ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯವಾಗಿರುತ್ತದೆ. ಸಾರ್ವಜನಿಕರಿಗೆ ವಿದ್ಯಾರ್ಥಿಗಳ ಚರ್ಚೆಯನ್ನು ಆಲಿಸಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಕಸ್ತೂರಬಾ ಶಿಬಿರದಲ್ಲಿ ಯುವ ಸಂಸತ್ತು ನಡೆಸುವಂತೆ ಸಲಹೆ ನೀಡಿದರು.

ಮೊದಲ ಸಭೆಯಲ್ಲಿ ಖುದ್ದಾಗಿ ಭಾಗವಹಿಸುತ್ತೇನೆ. 20 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ವಿರೋಧ ಪಕ್ಷದ ಸದಸ್ಯನಾಗಿ ಹಾಗೂ ಆಡಳಿತ ಪಕ್ಷದ ಸದಸ್ಯನಾಗಿ ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡ ಅನುಭವಗಳನ್ನು ಹಂಚಿಕೊಳ್ಳುತ್ತೇನೆ. ವಿಚಾರ ಮಂಡನೆ ವೇಳೆ ಏನೇ ತಪ್ಪುಗಳು ಸಂಭವಿಸಿದರೂ ಅದನ್ನು ತಿದ್ದುವ ಕೆಲಸವನ್ನು ಮಾಡುತ್ತೇನೆ. ಚರ್ಚೆ ನಿರ್ದಿಷ್ಟ ವಿಚಾರಗಳಿಗೆ ಮಾತ್ರ ಸೀಮಿತವಾಗಬಾರದು. ಸಾರ್ವಜನಿಕರ ಹಿತದೃಷ್ಟಿಯಿಂದ ಯಾವ ವಿಚಾರದ ಬಗ್ಗೆ ಬೇಕಿದ್ದರೂ ಪ್ರಶ್ನಿಸುವಂತಹ ಅವಕಾಶವಿರಬೇಕು. ವಿಧಾನ ಮಂಡಲ ಕಲಾಪದಲ್ಲಿಯೂ ಪ್ರಶ್ನೆ ಕೇಳುವುದಕ್ಕೆ ಮತ್ತು ಪ್ರಶ್ನೆಗೆ ಉತ್ತರಿಸುವುದಕ್ಕೆ ಸಮಯಾವಕಾಶ ಇರುತ್ತದೆ. ಅದರಂತೆ ವಿರೋಧ ಪಕ್ಷದವರು ಮೊದಲು ಪ್ರಶ್ನೆ ಸಿದ್ಧಪಡಿಸಿಕೊಡಬೇಕು, ನಂತರ ಆಡಳಿತ ಪಕ್ಷದವರು ಅದಕ್ಕೆ ಉತ್ತರ ಕೊಡಲು ಪೂರ್ವಸಿದ್ಧತೆ ನಡೆಸಲು ಸಮಯಾವಕಾಶ ನೀಡಬೇಕು ಎಂದರು.

ವಿಧಾನಸಭಾ ಅಧ್ಯಕ್ಷರ ಸ್ಥಾನವು ಅತ್ಯಂತ ಮಹತ್ವದ ಸ್ಥಾನವಾಗಿದೆ. ಸಭಾಧ್ಯಕ್ಷರಾಗಿ ಪೀಠವನ್ನು ಅಲಂಕರಿಸಬೇಕು ಎಂದರೆ ಹೆಚ್ಚು ಬುದ್ಧಿವಂತಿಕೆ ಇರಬೇಕಾಗುತ್ತದೆ. ಯುವ ಸಂಸತ್ತಿನ ಮೂಲಕ ಚರ್ಚೆಯ ಪರಿಪಾಠ ಬೆಳೆಯಬೇಕು. ಇದರಿಂದ ಮುಂದೊಂದು ದಿನ ಸಂಸತ್ತಿಗೆ ಆಗಮಿಸುವ ವೇಳೆ ಅಲ್ಲಿ ತಮ್ಮ ಕರ್ತವ್ಯ ಏನು, ಚರ್ಚೆ ಹೇಗೆ ನಡೆಸಬೇಕು, ಪದ ಬಳಕೆ ಹೇಗಿರಬೇಕು, ಆಕ್ಷೇಪಣೆ ಸಲ್ಲಿಕೆ ಹೇಗೆ, ನಿಯಮಾವಳಿಗಳು ಏನಿವೆ ಎಂಬಿತ್ಯಾದಿ ವಿಚಾರಗಳನ್ನು ಮೊದಲೇ ಅರಿತಂತಾಗುತ್ತದೆ. ಕಲಾಪಗಳಲ್ಲಿ ಭಾಗವಹಿಸಿ ಜನಸಾಮಾನ್ಯರ ಧ್ವನಿಯನ್ನು ಎತ್ತಲು ಸಾಧ್ಯವಾಗುತ್ತದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande