ಕಬ್ಬಿನ ಇಳುವರಿ ಮತ್ತು ದರ ನಿಗದಿಗೆ ಸ್ಪಷ್ಟ ಸೂತ್ರ ರೂಪಿಸಿ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, 17 ಅಕ್ಟೋಬರ್ (ಹಿ.ಸ.): ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಕಬ್ಬಿನ ಇಳುವರಿ, ತೂಕ ಹಾಗೂ ದರ ನಿಗದಿಗೆ ಸ್ಪಷ್ಟ ಸೂತ್ರ ರೂಪಿಸಬೇಕು. ಕನಿಷ್ಠ ಬೆಂಬಲ ಬೆಲೆ ಮತ್ತು ರಾಜ್ಯ ಸಲಹಾ ಬೆಲೆ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಬೊಮ್ಮಾಯಿ


ಹುಬ್ಬಳ್ಳಿ, 17 ಅಕ್ಟೋಬರ್ (ಹಿ.ಸ.):

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಕಬ್ಬಿನ ಇಳುವರಿ, ತೂಕ ಹಾಗೂ ದರ ನಿಗದಿಗೆ ಸ್ಪಷ್ಟ ಸೂತ್ರ ರೂಪಿಸಬೇಕು. ಕನಿಷ್ಠ ಬೆಂಬಲ ಬೆಲೆ ಮತ್ತು ರಾಜ್ಯ ಸಲಹಾ ಬೆಲೆ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡದೆ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರು ಸಂಕಷ್ಟದಲ್ಲಿರುವಾಗ ನೆರವಿಗೆ ಧಾವಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಬ್ಬು ಬೆಳೆಗಾರರ ಬೆಂಬಲ ಬೆಲೆ ಮತ್ತು ಹಿತರಕ್ಷಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಸಮಿತಿಯು ಸೋಮವಾರ ಸಭೆ ಸೇರಲಿದೆ. ಸಭೆಗೆ ಎಲ್ಲ ರೈತ ಮುಖಂಡರನ್ನು ಆಹ್ವಾನಿಸಿ ಚರ್ಚಿಸಲಾಗುವುದು. ಒಂದು ವಾರದೊಳಗೆ ಸೂಕ್ತ ಪರಿಹಾರ ರೂಪಿಸಲಾಗುವುದು ಎಂದು ಅವರು ತಿಳಿಸಿದರು.

ಸರ್ಕಾರದ ಜವಾಬ್ದಾರಿ ದೊಡ್ಡದು

ಮಾರಾಟ ತೆರಿಗೆ ಹಾಗೂ ಸರಕು ಮತ್ತು ಸೇವಾ ತೆರಿಗೆ ಮೂಲಕ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ರಾಜಸ್ವ ಬರುತ್ತದೆ. ಹೀಗಾಗಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರದ ಪಾತ್ರ ಮತ್ತು ಜವಾಬ್ದಾರಿ ದೊಡ್ಡದಿದೆ ಎಂದು ಬೊಮ್ಮಾಯಿ ಹೇಳಿದರು.

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರಾಜ್ಯ ಸಲಹಾ ಬೆಲೆಯನ್ನು ಶೀಘ್ರ ಜಾರಿಗೊಳಿಸಬೇಕು. ಇದರಿಂದ ಕಬ್ಬಿನ ಬೆಲೆ ಮತ್ತು ತೂಕದ ಕುರಿತ ಗೊಂದಲಗಳು ನಿವಾರಣೆಯಾಗಿ ರೈತರಿಗೆ ತಮ್ಮ ಬೆಳೆಗೆ ಸಿಗುವ ದರದ ಬಗ್ಗೆ ಸ್ಪಷ್ಟತೆ ದೊರೆಯಲಿದೆ. ಇತರ ರಾಜ್ಯಗಳಲ್ಲಿ ಅನುಸರಿಸುತ್ತಿರುವಂತೆ ಬೆಂಬಲ ಬೆಲೆ ಹಾಗೂ ಸಕ್ಕರೆ ಉತ್ಪಾದನೆಯನ್ನು ಆಧರಿಸಿ ಕರ್ನಾಟಕದಲ್ಲಿಯೂ ಬೆಂಬಲ ಬೆಲೆ ಘೋಷಿಸಲು ಕ್ರಮ ಕೈಗೊಳ್ಳಬೇಕು. ಕಳೆದ ಬಾರಿ ಸಿದ್ದರಾಮಯ್ಯ ಅವರು ಬೆಂಬಲ ಬೆಲೆ ನೀಡಿದ್ದರು ಎಂದು ಹೇಳಿದರು.

ತಾಂತ್ರಿಕ ಸಮಿತಿ ರಚನೆಗೆ ಸಲಹೆ

ಕಬ್ಬಿನ ಇಳುವರಿ, ಸಕ್ಕರೆ ಉತ್ಪಾದನೆಯ ಪ್ರಮಾಣ, ತೂಕ ಮತ್ತು ಬೆಲೆ ನಿಗದಿಗೆ ಸಂಬಂಧಿಸಿದಂತೆ ರೈತರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ಸ್ಪಷ್ಟವಾದ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಒಳಗೊಂಡ ಸಣ್ಣ ತಾಂತ್ರಿಕ ಸಮಿತಿ ರಚಿಸಬೇಕು. ಪ್ರಯೋಗಾಲಯದಲ್ಲಿ ಕಬ್ಬಿನ ಮಾದರಿಗಳನ್ನು ಸಂಗ್ರಹಿಸಿ, ರೈತರು ಮತ್ತು ಕಾರ್ಖಾನೆ ಮಾಲೀಕರ ಸಮ್ಮುಖದಲ್ಲೇ ಸಕ್ಕರೆ ಇಳುವರಿ ಪರೀಕ್ಷೆ ನಡೆಸಬೇಕು. ಇದರಿಂದ ಉಭಯ ಪಕ್ಷಗಳಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಇಳುವರಿ, ತೂಕ ಮತ್ತು ದರ ನಿಗದಿಪಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಪ್ರತಿ ವರ್ಷ ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಗೊಂದಲ ಉಂಟಾಗದಂತೆ ಸಕ್ಕರೆ ಮಾರಾಟಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಸೂತ್ರ ಹಾಗೂ ಕಬ್ಬಿನ ಬೆಲೆ ನಿರ್ಧರಿಸುವ ಪ್ರತ್ಯೇಕ ಸೂತ್ರ ರೂಪಿಸಬೇಕು. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳ ಕಬ್ಬು ಬೇರೆ ರಾಜ್ಯಗಳ ಕಾರ್ಖಾನೆಗಳಿಗೆ ಸಾಗುವುದನ್ನು ತಡೆಯಲು ರಾಜ್ಯ ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande