


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.)
ರಾಜ್ಯದಲ್ಲಿ ತಲೆದೋರಿರುವ ತೀವ್ರ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರೈತರು ಮತ್ತು ಜಾನುವಾರುಗಳು ಸಂಕಷ್ಟಕ್ಕೆ ಸಿಲುಕದಂತೆ ತಡೆಯಲು ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯಲ್ಲಿ ಮೇವಿನ ಕೊರತೆ ಎದುರಾಗದಂತೆ ನೋಡಿಕೊಳ್ಳುವುದರ ಜತೆಗೆ, ಜಾನುವಾರುಗಳ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದ್ದು, ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಜಿಲ್ಲಾಡಳಿತ ಕೈಗೊಂಡ ಪ್ರಮುಖ ಕ್ರಮಗಳು:*
ಮೇವು ಬ್ಯಾಂಕ್ಗಳ ಸ್ಥಾಪನೆ:- ಜಿಲ್ಲೆಯ ತೀವ್ರ ಬರಪೀಡಿತ ತಾಲೂಕುಗಳು ಮತ್ತು ಹೋಬಳಿ ಮಟ್ಟದಲ್ಲಿ ಅಗತ್ಯಕ್ಕೆ ತಕ್ಕಂತೆ ಅಧಿಕೃತ ಮೇವು ಬ್ಯಾಂಕ್ಗಳನ್ನು ಆರಂಭಿಸಲು ಕ್ರಮ ವಹಿಸಲಾಗುವುದು.
ಮಿನಿಕಿಟ್ಗಳ ವಿತರಣೆ:- ನೀರಾವರಿ ಸೌಲಭ್ಯವಿರುವ ರೈತರಿಗೆ ಶೀಘ್ರವಾಗಿ ಬೆಳೆಯುವ ಮೇವಿನ ಬೀಜಗಳ ಕಿಟ್ಗಳನ್ನು ಉಚಿತವಾಗಿ ವಿತರಿಸಿ, ಹಸಿರು ಮೇವು ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.
ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ:- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಗ್ರಾಮೀಣ ಭಾಗದಲ್ಲಿ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಿ, ನಿಯಮಿತವಾಗಿ ನೀರು ತುಂಬಿಸುವ ಕೆಲಸ ನಡೆಯುತ್ತಿದೆ. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು.
ಪಶು ವೈದ್ಯಕೀಯ ಶಿಬಿರಗಳು:- ಸಾಂಕ್ರಾಮಿಕ ರೋಗಗಳು ಹರಡದಂತೆ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಹಾಗೂ ತುರ್ತು ಚಿಕಿತ್ಸೆಗಾಗಿ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಸಜ್ಜುಗೊಳಿಸಲಾಗಿದೆ.
ರೈತರು ಮತ್ತು ಸಾರ್ವಜನಿಕರಿಗೆ ಜಿಲ್ಲಾಡಳಿತದ ಅಭಯ:*
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಆಡಳಿತ ಯಂತ್ರ ಸಂಪೂರ್ಣ ಸನ್ನದ್ಧವಾಗಿದೆ ಎಂದು ತಿಳಿಸಿರುವ ಜಿಲ್ಲಾಡಳಿತ, ರೈತರಿಗೆ ಅಭಯ ನೀಡಿದೆ.
ವದಂತಿಗಳಿಗೆ ಕಿವಿಗೊಡಬೇಡಿ:- ಜಿಲ್ಲೆಯಲ್ಲಿ ಮೇವು ಅಥವಾ ನೀರಿನ ತೀವ್ರ ಕೊರತೆ ಉಂಟಾಗದ0ತೆ ನಿರಂತರ ನಿಗಾ ವಹಿಸಲಾಗಿದ್ದು, ಯಾವುದೇ ಆಧಾರರಹಿತ ವದಂತಿಗಳನ್ನು ನಂಬಿ ಜಾನುವಾರುಗಳನ್ನು ಕಡಿಮೆ ಬೆಲೆಗೆ ಕಸಾಯಿಖಾನೆಗಳಿಗೆ ಅಥವಾ ದಲ್ಲಾಳಿಗಳಿಗೆ ಮಾರಾಟ ಮಾಡಬಾರದು.
ಗ್ರಾಮ ಮಟ್ಟದಲ್ಲಿ ಸಹಾಯವಾಣಿ:- ಮೇವು, ಕುಡಿಯುವ ನೀರು ಅಥವಾ ಜಾನುವಾರುಗಳ ಚಿಕಿತ್ಸೆಗೆ ಸಂಬ0ಧಿಸಿದ0ತೆ ಸಮಸ್ಯೆಗಳಿದ್ದರೆ ತಕ್ಷಣವೇ ಗ್ರಾಮ ಪಂಚಾಯಿತಿ ಪಿಡಿಒ, ತಾಲೂಕು ತಹಶೀಲ್ದಾರ್ ಕಚೇರಿ ಅಥವಾ ಪಶುಪಾಲನಾ ಇಲಾಖೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಬಳ್ಳಾರಿ ಜಿಲ್ಲೆಯಲ್ಲಿ ಮೇವಿನ ಬೀಜದ ಕಿರುಪೊಟ್ಟಣಗಳ ವಿತರಣೆ: 1,476 ರೈತರಿಗೆ ಅನುಕೂಲ:*
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಹಸಿರು ಮೇವು ಒದಗಿಸುವ ನಿಟ್ಟಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ರೈತರಿಗೆ ಮೇವಿನ ಬೀಜದ ಕಿರುಪೊಟ್ಟಣಗಳನ್ನು (ಮಿನಿಕಿಟ್) ವಿತರಿಸಲಾಗುತ್ತಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಒಟ್ಟು 8,805 ಕಿರುಪೊಟ್ಟಣಗಳು ಸ್ವೀಕೃತವಾಗಿದ್ದು, ಈ ಪೈಕಿ ಇದುವರೆಗೆ 3,334 ಪೊಟ್ಟಣಗಳನ್ನು ಒಟ್ಟು 1,476 ರೈತ ಫಲಾನುಭವಿಗಳಿಗೆ ಯಶಸ್ವಿಯಾಗಿ ವಿತರಿಸಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಬೀಜಗಳ ಸ್ವೀಕೃತಿ ವಿವರ:*
ಜಿಲ್ಲೆಗೆ ವಿವಿಧ ತಳಿಯ ಒಟ್ಟು 8,805 ಮೇವಿನ ಬೀಜದ ಕಿರುಪೊಟ್ಟಣಗಳು ಸರಬರಾಜಾಗಿವೆ.
ಹೈಬ್ರಿಡ್ ಮೇವಿನ ಜೋಳ ಸಿಎಸ್ಎಚ್-24ಎಂಪಿ(5 ಕೆ.ಜಿ): 2,894 ಕಿರುಪೊಟ್ಟಣಗಳು
ಹೈಬ್ರಿಡ್ ಮೇವಿನ ಜೋಳ ಸಿಎಸ್ಎಚ್ -43ಎಂಪಿ(5 ಕೆ.ಜಿ): 2,217 ಕಿರುಪೊಟ್ಟಣಗಳು
ಆಫ್ರಿಕಾ ಟಾಲ್ ಮೆಕ್ಕೆಜೋಳ (ಎಟಿಎಂ) (6 ಕೆ.ಜಿ): 3,694 ಕಿರುಪೊಟ್ಟಣಗಳು.
ವಿತರಣೆ ಸಾರಾಂಶ:*
ಜಿಲ್ಲೆಯಾದ್ಯಂತ ಇದುವರೆಗೆ ಹೈಬ್ರಿಡ್ ಮೇವಿನ ಜೋಳ ಸಿಎಸ್ಎಚ್-24 ಎಂಪಿ: 1,047 ಕಿರುಪೊಟ್ಟಣಗಳು, ಹೈಬ್ರಿಡ್ ಮೇವಿನ ಜೋಳ ಸಿಎಸ್ಎಚ್ -43 ಎಂಪಿ: 913 ಕಿರುಪೊಟ್ಟಣಗಳು, ಆಫ್ರಿಕಾ ಟಾಲ್ ಮೆಕ್ಕೆಜೋಳ (ಎಟಿಎಂ): 1,374 ಕಿರುಪೊಟ್ಟಣಗಳು ಹೀಗೆ ಒಟ್ಟು 3,334 ಕಿರುಪೊಟ್ಟಣಗಳನ್ನು ವಿತರಿಸಲಾಗಿದ್ದು, ಒಟ್ಟು 1,476 ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಉಳಿದ ಕಿರುಪೊಟ್ಟಣಗಳ ವಿತರಣಾ ಪ್ರಕ್ರಿಯೆಯು ಮುಂದುವರಿದಿದೆ.
ಮೇವು ಮತ್ತು ಜಾನುವಾರು ರಕ್ಷಣೆ:*
ಕುಡಿಯುವ ನೀರಿನ ಜೊತೆಗೆ ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ನೀರಿನ ಕೊರತೆ ಮತ್ತು ಮೇವಿನ ಸಮಸ್ಯೆ ಎದುರಾಗದಂತೆ ವಿಶೇಷೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಗತ್ಯವಿರುವೆಡೆ ಮೇವು ಬ್ಯಾಂಕ್ಗಳನ್ನು ತೆರೆಯಲು ಮತ್ತು ಗೋಕಟ್ಟೆ, ಕುಡಿಯುವ ನೀರಿನ ತೊಟ್ಟಿಗಳನ್ನು ನಿರಂತರವಾಗಿ ಭರ್ತಿ ಮಾಡಲು ಪಶುಸಂಗೋಪನಾ ಇಲಾಖೆಗೆ ಸೂಚನೆ ರವಾನಿಸಲಾಗಿದೆ.
ಬರ ನಿರ್ವಹಣೆಯ ಪ್ರತಿಯೊಂದು ಹಂತದಲ್ಲೂ ಸರ್ಕಾರ ಮತ್ತು ಜಿಲ್ಲಾಡಳಿತ ರೈತರ ಬೆನ್ನಿಗೆ ನಿಂತಿದ್ದು, ರೈತರು ಯಾವುದೇ ಕಾರಣಕ್ಕೂ ಧೃತಿಗೆಡದೆ ಸಹಕರಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್