
ಚಿತ್ರದುರ್ಗ, 17 ಅಕ್ಟೋಬರ್ (ಹಿ.ಸ.):
ಮುಂಬರುವ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಪಕ್ಷದ ನಾಯಕರು ಮತದಾರರಿಗೆ ಕರೆ ನೀಡಿದ್ದಾರೆ.
ನಗರದ ವಾಲ್ಮೀಕಿ ಭವನದಲ್ಲಿ ಇಂದು ನಡೆದ ಪದವೀಧರ ಮತದಾರರ ಸಭೆಯಲ್ಲಿ ಮಾತನಾಡಿದ ನಾಯಕರು, ನಾಡಿನ ಪ್ರಗತಿಶೀಲ ಭವಿಷ್ಯ ರೂಪಿಸುವಲ್ಲಿ ಶೈಕ್ಷಣಿಕ ಕ್ಷೇತ್ರ ಹಾಗೂ ಪದವೀಧರರ ಪಾತ್ರ ನಿರ್ಣಾಯಕವಾಗಿದೆ.
ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಧ್ವನಿಯಾಗಿ ವಿಧಾನ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಲು ಕೆ.ಎಂ. ಸುರೇಶ್ ಅವರನ್ನು ಗೆಲ್ಲಿಸುವುದು ಅಗತ್ಯ ಎಂದು ಹೇಳಿದರು.
ಪದವೀಧರರ ಸಬಲೀಕರಣ, ಯುವಜನರಿಗೆ ಉದ್ಯೋಗಾವಕಾಶ ಹಾಗೂ ಉದ್ಯೋಗದ ಹಕ್ಕುಗಳಿಗಾಗಿ ತಮ್ಮ ಹೋರಾಟ ನಿರಂತರವಾಗಿರಲಿದೆ. ಸಂಘಟನೆಯ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಾಯಕರು, ಸರ್ಕಾರದ ಜನವಿರೋಧಿ, ರೈತವಿರೋಧಿ ಹಾಗೂ ಅಭಿವೃದ್ಧಿ ವಿಮುಖ ನೀತಿಗಳಿಂದ ಜನರಲ್ಲಿ ಅಸಮಾಧಾನ ಮೂಡಿದೆ.
ಭ್ರಷ್ಟಾಚಾರದ ಆರೋಪಗಳೂ ಸೇರಿದಂತೆ ಸರ್ಕಾರದ ಆಡಳಿತದ ವಿರುದ್ಧ ಜನಮಾನಸದಲ್ಲಿರುವ ಆಕ್ರೋಶ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಪ್ರತಿಫಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ತಿಪ್ಪೇಸ್ವಾಮಿ, ಎಸ್.ಕೆ. ಬಸವರಾಜು, ಶಾಸಕರಾದ ಎಂ. ಚಂದ್ರಪ್ಪ, ಕೆ.ಎಸ್. ನವೀನ್, ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R