
ಹುಬ್ಬಳ್ಳಿ, 17 ಅಕ್ಟೋಬರ್ (ಹಿ.ಸ.):
ಭಾರತದ ವಿರುದ್ಧ ವಿದೇಶಿ ನಿಧಿ ಬಳಸಿ ನಡೆಯುತ್ತಿರುವ ಸಂಚುಗಳ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ದೇಶವಿರೋಧಿ ಚಟುವಟಿಕೆಗಳಿಗೆ ವಿದೇಶಿ ಮೂಲಗಳಿಂದ ಹಣ ಪಡೆಯುವುದನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ವಿರುದ್ಧ ನಡೆಯುತ್ತಿರುವ ಸಂಚುಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳಿಗೆ ವಿದೇಶಿ ಮೂಲಗಳಿಂದ ಹರಿದುಬರುತ್ತಿರುವ ನಿಧಿಯ ಕುರಿತು ಕಳವಳ ವ್ಯಕ್ತಪಡಿಸಿದರು.
ಕೆಲವು ರಾಜಕೀಯ ಪಕ್ಷಗಳು ಹಾಗೂ ದೇಶದ ವಿರುದ್ಧದ ಚಟುವಟಿಕೆಗಳಿಗೆ ವಿದೇಶಿ ಮೂಲಗಳಿಂದ ಹಣ ಪಡೆಯಲಾಗುತ್ತಿದೆ. ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗೆ ವಿದೇಶಿ ದೇಣಿಗೆ ಹರಿದುಬಂದಿರುವುದು ಸಾಬೀತಾಗಿದೆ. ವಿಶೇಷವಾಗಿ ಸೋರಸ್ ಫೌಂಡೇಶನ್ನಂತಹ ಸಂಸ್ಥೆಗಳಿಂದ ಕಳೆದ ಹತ್ತು ವರ್ಷಗಳಿಂದ ನಿಧಿ ಹರಿದುಬರುತ್ತಿದೆ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಹೇಳಿಕೆಗಳಿಗೆ ಟೀಕೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶಗಳಿಗೆ ಹೋದಾಗಲೆಲ್ಲ ಭಾರತದ ವಿರುದ್ಧ ಮಾತನಾಡುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ ಎಂದು ಬೊಮ್ಮಾಯಿ ಟೀಕಿಸಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲದಿದ್ದರೆ ರಾಹುಲ್ ಗಾಂಧಿ ಪ್ರತಿಪಕ್ಷದ ನಾಯಕರಾಗಲು ಹೇಗೆ ಸಾಧ್ಯವಾಗುತ್ತಿತ್ತು? ಅವರು ಎರಡು ರಾಜ್ಯಗಳಲ್ಲಿ ಸ್ಪರ್ಧಿಸಿರುವುದೇ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಇದರಿಂದಲೇ ತಿಳಿಯುತ್ತದೆ ಎಂದು ಹೇಳಿದರು.
ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸಾಧ್ಯವಾಗದ ಕಾಂಗ್ರೆಸ್, ಸಿಜೆಪಿಯಂತಹ ಸಂಘಟನೆಗಳ ಬೆಂಬಲದೊಂದಿಗೆ ಅಭದ್ರತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಈಗ ಎರಡೂ ಒಂದೇ ಎಂದು ಹೇಳಲಾಗುತ್ತಿದೆ. ಇಬ್ಬರೂ ವೈಯಕ್ತಿಕವಾಗಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರವು ಸ್ವಯಂಸೇವಾ ಸಂಸ್ಥೆಗಳಿಗೆ ಹರಿದುಬರುವ ವಿದೇಶಿ ನಿಧಿಯ ಮೇಲೆ ಕಠಿಣ ನಿಯಂತ್ರಣ ವಿಧಿಸಿರುವಂತೆಯೇ, ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುವ ವಿದೇಶಿ ನಿಧಿಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಹಿಳಾ ಮೀಸಲಾತಿ ಕುರಿತು ಸರ್ವಪಕ್ಷ ಸಭೆ
ಮಹಿಳಾ ಮೀಸಲಾತಿ ಜಾರಿಗೂ ಮುನ್ನ ಸರ್ವಪಕ್ಷಗಳ ಸಭೆ ಕರೆಯುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಮನವಿಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವಿಶೇಷ ಅಧಿವೇಶನ ನಡೆಯುವ ಮೊದಲು ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.