ದೊಡ್ಲ ಡೈರಿ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ: ಎಫ್ಎಸ್ಎಸ್ಎಐ
ದೊಡ್ಲ ಡೈರಿಯ ಫುಲ್ ಕ್ರೀಮ್ ಹಾಲಿನ ಮಾದರಿಯಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಪತ್ತೆಯಾಗಿದ್ದು, ಕೊಬ್ಬಿನ ಅಂಶವೂ ನಿಗದಿತ ಮಟ್ಟಕ್ಕಿಂತ ಕಡಿಮೆ ಇರುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದೊಡ್ಲ ಡೈರಿ ಸೇರಿದಂತೆ ಇತರ ಆಹಾರ ಕಂಪನಿಗಳ ವಿರುದ್ಧ ಕಾನೂನು ಕ್ರಮಕ್ಕೆ ಎಫ್ಎಸ್
Dodla-Dairy-Full-Cream-Milk-Detergent-Caustic-Soda-Found-FSSAI-Action


ಬೆಂಗಳೂರು, 17 ಅಕ್ಟೋಬರ್ (ಹಿ.ಸ.):

ಕರ್ನಾಟಕದಲ್ಲಿಯೂ ಡೇರಿ ಘಟಕ ಹೊಂದಿರುವ ದೊಡ್ಲ ಡೈರಿ ಲಿಮಿಟೆಡ್ನ ಫುಲ್ ಕ್ರೀಮ್ ಹಾಲಿನ ಮಾದರಿಯಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಪತ್ತೆಯಾಗಿದ್ದು, ಹಾಲಿನಲ್ಲಿನ ಕೊಬ್ಬಿನ ಅಂಶವೂ ನಿಗದಿತ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆ ಇರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸಂಸ್ಥೆ ಸೇರಿದಂತೆ ಸಂಬಂಧಿತ ಆಹಾರ ಉದ್ಯಮಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ.

ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಎಫ್ಎಸ್ಎಸ್ಎಐ, ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ಪ್ರಯೋಗಾಲಯ ಪರೀಕ್ಷೆಯಲ್ಲಿ ಲೋಪ ದೃಢ

ದೊಡ್ಲ ಡೈರಿ ಲಿಮಿಟೆಡ್ನ ಫುಲ್ ಕ್ರೀಮ್ ಹಾಲಿನ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದರು.

ಆರಂಭಿಕ ಪರೀಕ್ಷೆಯಲ್ಲಿ ಹಾಲಿನ ಕೊಬ್ಬಿನ ಅಂಶವು ನಿಗದಿತ ಮಾನದಂಡಕ್ಕೆ ಅನುಗುಣವಾಗಿಲ್ಲದ ಕಾರಣ, ಉತ್ಪನ್ನವನ್ನು ಕಳಪೆ ಗುಣಮಟ್ಟದ್ದೆಂದು ಗುರುತಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಸಂಬಂಧಿತ ಆಹಾರ ಉದ್ಯಮದ ಸಂಸ್ಥೆ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮಾದರಿಯನ್ನು ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಗಿತ್ತು.

ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಹಾಲಿನಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಇರುವುದನ್ನು ಪತ್ತೆಹಚ್ಚಲಾಗಿದೆ. ಜತೆಗೆ ಕೊಬ್ಬಿನ ಅಂಶವೂ ನಿಗದಿತ ಕನಿಷ್ಠ ಮಿತಿಗಿಂತ ಕಡಿಮೆ ಇರುವುದು ದೃಢಪಟ್ಟಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಪ್ರಯೋಗಾಲಯದ ವರದಿಯ ಆಧಾರದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಸುರಕ್ಷತೆಯಿಲ್ಲದ ಹಾಗೂ ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಆಹಾರಕ್ಕೆ ಸಂಬಂಧಿಸಿದ ಉಲ್ಲಂಘನೆಗಳ ಕುರಿತು ಕ್ರಮಕ್ಕೆ ಮುಂದಾಗಲಾಗಿದೆ.

ಉತ್ಪನ್ನದ ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ದೊಡ್ಲ ಡೈರಿ ಸೇರಿದಂತೆ ಇತರ ಸಂಬಂಧಿತ ಸಂಸ್ಥೆಗಳ ವಿರುದ್ಧವೂ ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಲಾಗಿದೆ.

ಇತರ ಕಂಪನಿಗಳ ವಿರುದ್ಧವೂ ಕ್ರಮ

ದೊಡ್ಲ ಡೈರಿ ಮಾತ್ರವಲ್ಲದೆ, ಪ್ರಿಯಗೋಲ್ಡ್ ಬಿಸ್ಕತ್ ತಯಾರಿಸುವ ಸೂರ್ಯ ಫುಡ್ ಆ್ಯಂಡ್ ಆಗ್ರೋ ಲಿಮಿಟೆಡ್ ಹಾಗೂ ಯುಇಐಆರ್ ಆರ್ಗ್ಯಾನಿಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧವೂ ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಆರಂಭಿಸಲಾಗಿದೆ ಎಂದು ಎಫ್ಎಸ್ಎಸ್ಎಐ ತಿಳಿಸಿದೆ.

ಇದಲ್ಲದೆ, ನರ್ಪಧಾಮ್ ಫುಡ್ಸ್, ಸನ್ ರಿಡ್ಜಸ್ ಹೆಲ್ತ್ ಕೇರ್ಸ್ ಮತ್ತು ಶಾ ಕಾಂತಿಲಾಲ್ ಜಯಂತಿಲಾಲ್ ಸಂಸ್ಥೆಗಳಿಗೆ ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ. ಆಹಾರ ಉತ್ಪನ್ನಗಳ ಗುಣಮಟ್ಟ ಹಾಗೂ ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.

ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande