

ಬಳ್ಳಾರಿ, 17 ಅಕ್ಟೋಬರ್ (ಹಿ.ಸ.)
ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್ಲಾ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಡಿವಿಬಿಸಿಡಿಸಿ ವಿಭಾಗ ಹಾಗೂ ಬ್ರೂಸ್ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕೊಳಗೇರಿ ಬಡಾವಣೆಯಲ್ಲಿ ಡೆಂಗ್ಯೂ ಜ್ವರ ತಡೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ಹಾಗೂ ಲಾರ್ವಾ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡೆಂಗ್ಯೂ ಜ್ವರವು ಈಡಿಸ್ ಸೋಂಕಿತ ಸೊಳ್ಳೆ ಕಡಿತದಿಂದ ಹರಡುವ ವೈರಲ್ ಸೋಂಕಾಗಿದೆ. ಹಠಾತ್ ಜ್ವರ, ತೀವ್ರ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಕೀಲು ಹಾಗೂ ಸ್ನಾಯು ನೋವು, ವಾಕರಿಕೆ, ವಾಂತಿ ಮತ್ತು ಚರ್ಮದ ಮೇಲೆ ಕೆಂಪು ದದ್ದುಗಳು ಕಂಡುಬರುವುದು ಇದರ ಪ್ರಮುಖ ಲಕ್ಷಣಗಳಾಗಿವೆ.
ಸಾರ್ವಜನಿಕರು ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಬೇಕು. ನೀರು ಸಂಗ್ರಹಿಸುವ ಪಾತ್ರೆಗಳಿಗೆ ಮುಚ್ಚಳ ಹಾಕಬೇಕು, ವಾರಕ್ಕೊಮ್ಮೆ ನೀರಿನ ತೊಟ್ಟಿಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಮೈತುಂಬ ಬಟ್ಟೆ ಧರಿಸುವುದು, ಸೊಳ್ಳೆ ಪರದೆಗಳನ್ನು ಬಳಸುವುದು ಹಾಗೂ ಸಂಜೆ ವೇಳೆ ಬೇವಿನ ಸೊಪ್ಪಿನ ಹೊಗೆ ಹಾಕುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬೇಕು ಎಂದು ಸಲಹೆ ನೀಡಿದರು.
ಕೀಟಶಾಸ್ತಜ್ಞರಾದ ನಂದಿನಿ ಅವರು ಮಾತನಾಡಿ, ಡೆಂಗ್ಯೂ ನಿಯಂತ್ರಣದ ಬಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಭೇಟಿ ನೀಡಿದಾಗ ನೀಡುವ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಜ್ವರವಿದ್ದರೂ ನಿರ್ಲಕ್ಷö್ಯ ಮಾಡದೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಹಗಲು ಹೊತ್ತಿನಲ್ಲಿ ಮಲಗಿದರೂ ಸೊಳ್ಳೆ ಪರದೆಯನ್ನು ಬಳಸಬೇಕು ಎಂದು ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ನೀರು ಶೇಖರಣೆಯಾಗಿರುವ ತೊಟ್ಟಿಗಳು, ಹೂವಿನ ಕುಂಡಗಳು, ಹಳೆಯ ಟೈರ್ಗಳು, ತೆಂಗಿನ ಚಿಪ್ಪುಗಳು ಹಾಗೂ ಬಿಸಾಡಿದ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ನೀರು ನಿಂತು ಸೊಳ್ಳೆ ಲಾರ್ವಾಗಳು ಉತ್ಪತ್ತಿಯಾಗಿವೆಯೇ ಎಂಬುದನ್ನು ಪರಿಶೀಲಿಸಿದರು. ಲಾರ್ವಾ ಕಂಡುಬAದ ಪರಿಕರಗಳನ್ನು ತೆರವುಗೊಳಿಸಿ, ಅಗತ್ಯವಿದ್ದ ಕಡೆಗಳಲ್ಲಿ ಔಷಧ ಸಿಂಪಡಿಸಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸಲಾಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಸುರೇಖಾ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗಣ್ಣನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ತಾಲೂಕು ಎಂ.ಟಿ.ಎಸ್. ಬಾಬುರಾವ್, ಡಿವಿಬಿಸಿಡಿಸಿ ಕಚೇರಿಯ ಆರೋಗ್ಯ ನಿರೀಕ್ಷಕರಾದ ರವೀಂದ್ರ ಹಾಗೂ ಮಹಮ್ಮದ್ ಇಸಾಕ್, ವೀರಾರೆಡ್ಡಿ, ಪ್ರಶಾಂತ್, ಮಾರುತಿ, ರುಕಯ್ಯಭಾನು, ಸ್ವಯಂ ಸೇವಕರು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್