

ಬಳ್ಳಾರಿ, 15 ಅಕ್ಟೋಬರ್ (ಹಿ.ಸ.)
ಎಸ್ಐಆರ್ ರದ್ದತಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಎಸ್ಯುಸಿಐ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದೆ.
ಎಸ್ಯುಸಿಐನ ಜಿಲ್ಲಾ ಸಮಿತಿ ಸದಸ್ಯರಾದ ಡಾ. ಪ್ರಮೋದ್. ಎನ್. ಅವರು, ದೇಶಾದ್ಯಂತ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ನೆಪದಲ್ಲಿ 13 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಎಸ್ಐಆರ್ ಪ್ರಕ್ರಿಯೆಗೆ ಮುಖ್ಯ ಚುನಾವಣಾ ಆಯ್ತುಕ್ತರು ಹೊರತುಪಡಿಸಿ, ಇಬ್ಬರು ಚುನಾವಣಾ ಆಯುಕ್ತರು 14 ಬಾರಿ ಆಕ್ಷೇಪಣೆ ವ್ಯಕ್ತಪಡಿಸಿ, ಅಸಮ್ಮತಿ ತೋರಿದ್ದಾರೆ ಎಂದು ಹೇಳಿದರು.
ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಡಿ. ನಾಗಲಕ್ಷ್ಮಿ ಅವರು, ದೇಶಾದ್ಯಂತ ಬಿಜೆಪಿ ಪಕ್ಷದ ವಿವಿಧ ಹಂತದ ನಾಯಕರು, ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಲಕ್ಷಾಂತರ ಮುದ್ರಿತ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿರುವ ವರದಿ ಇದೆ. ಮತದಾರರ ಎಲ್ಲಾ ವಿವರಗಳುಳ್ಳ ಲಕ್ಷಾಂತರ ಮುದ್ರಿತ ಫಾರ್ಮ್ 7 ಅರ್ಜಿಗಳು ಬಿಜೆಪಿಯವರಿಗೆ ಹೇಗೆ ದೊರೆಯುತ್ತಿವೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಎಸ್ಯುಸಿಐ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎ. ದೇವದಾಸ್ ಅವರು, ಬಾಂಗ್ಲಾ ನುಸುಳುಕೋರರನ್ನು ಪತ್ತೆ ಹಚ್ಚಲು ಎಸ್ಐಆರ್ ಜಾರಿಗೊಳಿಸಲಾಗಿದೆ ಎಂದು ಆರಂಭದಲ್ಲಿ ಪೊಳ್ಳು ವಾದಗಳನ್ನು ಹರಿಬಿಡಲಾಗಿತ್ತು. ಇಲ್ಲಿಯವರೆಗೂ ಚುನಾವಣಾ ಆಯೋಗ ಎಷ್ಟು ನುಸುಳುಕೋರರನ್ನು ಪತ್ತೆ ಹಚ್ಚಿದೆ, ಎನ್ನುವುದು ಎಲ್ಲೂ ಸ್ಪಷ್ಟವಾಗಿಲ್ಲ. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ ನಾಟಕಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಆರ್. ಸೋಮಶೇಖರಗೌಡ, ಎ. ಶಾಂತ, ಗೋವಿಂದ, ಹನುಮಂತಪ್ಪ, ಈಶ್ವರಿ, ಕೋಳೂರು ಪಂಪಾಪತಿ, ಬಸಣ್ಣ, ಸುರೇಶ್, ವಿಜಯಲಕ್ಷ್ಮಿ, ಗುರಳ್ಳಿರಾಜ, ಜಗದೀಶ್ ಹಾಗೂ ಇನ್ನಿತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್