
ಬೆಂಗಳೂರು, 15 ಅಕ್ಟೋಬರ್ (ಹಿ.ಸ.):
ರಾಜ್ಯದಲ್ಲಿ ಹೊಸದಾಗಿ ಒಂಬತ್ತು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಒಟ್ಟು ಬರಪೀಡಿತ ತಾಲ್ಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಿದೆ. ಬರದಿಂದ ರಾಜ್ಯಕ್ಕೆ 60 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿರುವ ಅಂದಾಜಿದ್ದು, ನಷ್ಟದ ಅಂತಿಮ ವರದಿಯನ್ನು ಮುಂದಿನ ಒಂದೆರಡು ದಿನಗಳಲ್ಲಿ ಸಿದ್ಧಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದ ಮುಂಭಾಗದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ 217 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಇದೀಗ ಹೊಸದಾಗಿ ಒಂಬತ್ತು ತಾಲ್ಲೂಕುಗಳನ್ನು ಪಟ್ಟಿಗೆ ಸೇರಿಸಲಾಗಿದೆ ಎಂದರು.
ಉಳಿದ ತಾಲ್ಲೂಕುಗಳಲ್ಲಿನ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಮೊದಲ ಹಂತದ ಮಾನದಂಡಗಳಡಿ ಅರ್ಹತೆ ಪಡೆಯುವ ತಾಲ್ಲೂಕುಗಳನ್ನು ಸ್ಥಳ ಪರಿಶೀಲನೆಗೆ ಒಳಪಡಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಅರ್ಹತೆ ದೃಢಪಟ್ಟರೆ ಮತ್ತಷ್ಟು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು. ಇಲ್ಲವಾದಲ್ಲಿ ಈಗಾಗಲೇ ಘೋಷಿಸಿರುವ 226 ತಾಲ್ಲೂಕುಗಳ ಪಟ್ಟಿಯೇ ಅಂತಿಮವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರಕ್ಕೆ ಸರ್ವಪಕ್ಷ ನಿಯೋಗ
ಬರದಿಂದ ಉಂಟಾಗಿರುವ ನಷ್ಟದ ಕುರಿತು ಅಂತಿಮ ಮನವಿಪತ್ರ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮನವಿಪತ್ರ ಸಲ್ಲಿಸಲು ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಪರಮೇಶ್ವರ ತಿಳಿಸಿದರು.
ಸರ್ವಪಕ್ಷ ನಿಯೋಗದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಪಕ್ಷಗಳು ಈಗಾಗಲೇ ತಮ್ಮ ನಿಲುವು ವ್ಯಕ್ತಪಡಿಸಿವೆ. ಆದರೂ, ಮತ್ತೊಮ್ಮೆ ಅವುಗಳನ್ನು ಸಂಪರ್ಕಿಸಿ ನಿಯೋಗದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು. ಪ್ರತಿಪಕ್ಷಗಳು ಭಾಗವಹಿಸಿದರೆ ಉತ್ತಮ. ಇಲ್ಲವಾದಲ್ಲಿ ಮುಖ್ಯಮಂತ್ರಿ, ತಾವು ಹಾಗೂ ಕೆಲವು ಸಚಿವರು ಕೇಂದ್ರಕ್ಕೆ ತೆರಳಿ ಸಂಬಂಧಪಟ್ಟ ಸಚಿವರು ಮತ್ತು ಪ್ರಧಾನಮಂತ್ರಿಯವರ ಭೇಟಿಗೆ ಸಮಯ ಕೋರಲಿದ್ದಾರೆ. ರಾಜ್ಯದ ಬರ ಪರಿಸ್ಥಿತಿ ಮತ್ತು ಪರಿಹಾರದ ಅಗತ್ಯವನ್ನು ವಿವರಿಸಿ ಅಂತಿಮ ಮನವಿಪತ್ರ ಸಲ್ಲಿಸಲಾಗುವುದು ಎಂದರು.
60ರಿಂದ 70 ಸಾವಿರ ಕೋಟಿ ರೂ. ನಷ್ಟದ ಅಂದಾಜು
ರಾಜ್ಯದಲ್ಲಿ ಬರದಿಂದ ಈಗಾಗಲೇ ಸುಮಾರು 46 ಸಾವಿರ ಕೋಟಿ ರೂ. ನಷ್ಟವಾಗಿರುವ ಅಂದಾಜು ಮಾಡಲಾಗಿದೆ. ಅಂತಿಮ ಲೆಕ್ಕಾಚಾರದ ವೇಳೆಗೆ ನಷ್ಟದ ಪ್ರಮಾಣ 60 ಸಾವಿರ ಕೋಟಿಯಿಂದ 70 ಸಾವಿರ ಕೋಟಿ ರೂ.ವರೆಗೆ ತಲುಪಬಹುದು ಎಂದು ಪ್ರಾಥಮಿಕ ಅಂದಾಜುಗಳು ತಿಳಿಸಿವೆ ಎಂದು ಹೇಳಿದರು.
ಆದರೆ, ಒಟ್ಟು ನಷ್ಟದ ಮೊತ್ತವನ್ನೇ ಕೇಂದ್ರ ಸರ್ಕಾರದಿಂದ ಪರಿಹಾರವಾಗಿ ಕೇಳಲು ಸಾಧ್ಯವಿಲ್ಲ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯ ಮಾರ್ಗಸೂಚಿಗಳ ಪ್ರಕಾರ ಪರಿಹಾರಕ್ಕೆ ಅರ್ಹವಾಗುವ ನಷ್ಟವನ್ನು ಪ್ರತ್ಯೇಕವಾಗಿ ಲೆಕ್ಕಹಾಕಬೇಕಾಗುತ್ತದೆ ಎಂದು ವಿವರಿಸಿದರು.
ಕಳೆದ ವರ್ಷ ಸುಮಾರು 49 ಸಾವಿರ ಕೋಟಿ ರೂ. ನಷ್ಟವಾಗಿದ್ದರೂ, ಮಾರ್ಗಸೂಚಿಗಳ ಪ್ರಕಾರ ಸುಮಾರು 18 ಸಾವಿರ ಕೋಟಿ ರೂ. ಪರಿಹಾರವನ್ನು ಕೇಂದ್ರಕ್ಕೆ ಕೋರಲಾಗಿತ್ತು. ಈ ಬಾರಿಯೂ ನಷ್ಟದ ಪ್ರಮಾಣ 60 ಸಾವಿರ ಕೋಟಿ ರೂ. ತಲುಪಿದರೆ, ಪ್ರಾಥಮಿಕ ಅಂದಾಜಿನ ಪ್ರಕಾರ 18 ಸಾವಿರ ಕೋಟಿಯಿಂದ 20 ಸಾವಿರ ಕೋಟಿ ರೂ.ವರೆಗೆ ಪರಿಹಾರ ಕೋರಬೇಕಾಗಬಹುದು ಎಂದರು.
ಇವು ಪ್ರಾಥಮಿಕ ಅಂದಾಜುಗಳಾಗಿದ್ದು, ಅಂತಿಮ ಮೊತ್ತವಲ್ಲ. ನಷ್ಟದ ಸಂಪೂರ್ಣ ವಿವರಗಳು ಮತ್ತು ಪರಿಹಾರದ ಅರ್ಹತೆಯ ಲೆಕ್ಕಾಚಾರ ಪೂರ್ಣಗೊಂಡ ಬಳಿಕ ಕೇಂದ್ರದಿಂದ ಕೋರಬೇಕಾದ ಪರಿಹಾರದ ಮೊತ್ತವನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.