
ಬೆಂಗಳೂರು, 15 ಅಕ್ಟೋಬರ್ (ಹಿ.ಸ.):
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರೋಪಗಳಿಗೆ ದಾಖಲೆಗಳನ್ನು ಒದಗಿಸಿದರೆ ತಪ್ಪು ಮಾಡಿರುವುದು ಸಾಬೀತಾದಲ್ಲಿ ಖಂಡಿತವಾಗಿಯೂ ಬಂಧಿಸುತ್ತೇನೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಬೆದರಿಕೆ ಹಾಕುವ ಅಥವಾ ನಮ್ಮನ್ನು ಹೆದರಿಸಬಹುದು ಎಂದು ಭಾವಿಸಿದ್ದರೆ ಅದು ಅವರ ಕಲ್ಪನೆಯಷ್ಟೇ. ಗೌರವದಿಂದ ಮಾತನಾಡಿದರೆ ಅವರ ಮಾತುಗಳನ್ನು ಆಲಿಸಲು ನಾವು ಸಿದ್ಧರಿದ್ದೇವೆ. ಆದರೆ, ಆರೋಪಗಳನ್ನು ಮಾಡುವವರು ಅದಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು ಎಂದು ಅವರು ತಿರುಗೇಟು ನೀಡಿದ್ದಾರೆ.
ಯಾರನ್ನಾದರೂ ಸುಮ್ಮನೆ ಬಂಧಿಸಲು ಸಾಧ್ಯವಿಲ್ಲ. ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲಿ. ಅವುಗಳ ಆಧಾರದಲ್ಲಿ ಅವರು ತಪ್ಪು ಮಾಡಿರುವುದು ಸಾಬೀತಾದರೆ ಖಂಡಿತವಾಗಿಯೂ ಬಂಧಿಸುತ್ತೇನೆ. ತನಿಖೆ ಹೇಗೆ ನಡೆಸಬೇಕು ಎಂಬುದನ್ನು ಕುಮಾರಸ್ವಾಮಿ ಅವರಿಂದ ಕಲಿಯುವ ಅಗತ್ಯ ನನಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಿಮ್ಮದೇ ಗೌರವಕ್ಕೆ ಧಕ್ಕೆ ತಂದುಕೊಳ್ಳುತ್ತಿದ್ದೀರಿ ಎಂದು ನಾನು ಈಗಾಗಲೇ ಹೇಳಿದ್ದೇನೆ. ತನಿಖೆಗೆ ಸಹಕರಿಸಲು ಬಯಸಿದರೆ ಸಹಕರಿಸಿ, ಇಲ್ಲದಿದ್ದರೆ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತವಿರಲಿ. ನೀವು ಏನು ಹೇಳಿದರೂ ಕೇಳಿಸಿಕೊಂಡು ಸುಮ್ಮನಿರಲು ನಾವು ಇಲ್ಲಿದ್ದೇವೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಯಾವುದೇ ಆರೋಪಗಳನ್ನು ಮಾಡುವುದಾದರೆ ಅದಕ್ಕೆ ಸಾಕ್ಷ್ಯಗಳನ್ನು ಒದಗಿಸಬೇಕು. ಪ್ರಕರಣದಲ್ಲಿ ಯಾರು, ಹೇಗೆ ಕಾರ್ಯನಿರ್ವಹಿಸಿದ್ದಾರೆ ಎಂಬುದರ ಕುರಿತು ನಮಗೂ ಕೆಲವು ಮಾಹಿತಿಗಳಿವೆ. ನೀವೇ ತನಿಖೆಗೆ ಆಗ್ರಹಿಸುತ್ತಿರುವಾಗ ತನಿಖೆ ನಡೆಯುತ್ತಿರುವುದಕ್ಕೆ ನಿಮ್ಮ ಆಕ್ಷೇಪವೇನು? ಎಂದು ಕುಮಾರಸ್ವಾಮಿ ಅವರನ್ನು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R