
ಬೆಂಗಳೂರು, 15 ಅಕ್ಟೋಬರ್ (ಹಿ.ಸ.):
ಎಐ ಕ್ಯಾಮೆರಾ ಮೂಲಕ ಗುರುತಿಸಲಾದ 1,000 ಕಸದ ಸಮಸ್ಯೆ ಹಾಗೂ ಬ್ಲ್ಯಾಕ್ಸ್ಪಾಟ್ಗಳನ್ನು 10 ದಿನಗಳೊಳಗೆ ಪರಿಹರಿಸುವಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಮಾರ್ಷಲ್ಗಳು ಮತ್ತು ಕಿರಿಯ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದ್ದಾರೆ.
ನಗರದ ಸ್ವಚ್ಛತೆ ಮತ್ತು ನಾಗರಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಚಿತ್ರಗುಪ್ತ ಅರ್ಬನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಎಐ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ.
ಒಟ್ಟು 311 ಕಿ.ಮೀ. ಉದ್ದದ ರಸ್ತೆಗಳಲ್ಲಿ ಮೊದಲ ಹಂತದಲ್ಲಿ 150 ಕಿ.ಮೀ. ವ್ಯಾಪ್ತಿಯಲ್ಲಿ ಎಐ ಕ್ಯಾಮೆರಾ ಅಳವಡಿಸಿದ ವಾಹನದ ಮೂಲಕ ಸಮೀಕ್ಷೆ ನಡೆಸಲಾಗಿದೆ. ಈ ವೇಳೆ ಕಸದ ಕಪ್ಪು ಚುಕ್ಕೆಗಳು, ರಸ್ತೆ ಗುಂಡಿಗಳು, ಫುಟ್ಪಾತ್ ಅತಿಕ್ರಮಣ, ನಿರ್ಮಾಣ ತ್ಯಾಜ್ಯ, ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ಗಳು ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳನ್ನು ತಂತ್ರಜ್ಞಾನದ ನೆರವಿನಿಂದ ಗುರುತಿಸಿ, ಪರಿಹಾರಕ್ಕಾಗಿ ಡಿಜಿಟಲ್ ಟಿಕೆಟ್ಗಳನ್ನು ಸೃಷ್ಟಿಸಲಾಗಿದೆ.
ಅನ್ವೇಷಕ್ ಆ್ಯಪ್ ಬಳಕೆಗೆ ತರಬೇತಿ
ಗುರುತಿಸಲಾದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಮಾರ್ಷಲ್ಗಳು ಮತ್ತು ಕಿರಿಯ ಆರೋಗ್ಯ ನಿರೀಕ್ಷಕರಿಗೆ ಅನ್ವೇಷಕ್ ಮೊಬೈಲ್ ಆ್ಯಪ್ ಬಳಕೆಯ ಕುರಿತು ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ಅಧಿಕಾರಿಗಳು ತಮಗೆ ಹಂಚಿಕೆಯಾದ ದೂರುಗಳ ಸ್ಥಳಕ್ಕೆ ಭೇಟಿ ನೀಡಿ, ಸ್ಥಳದಲ್ಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಬಳಿಕ ಸಮಸ್ಯೆ ಪರಿಹರಿಸಿರುವುದಕ್ಕೆ ಸಾಕ್ಷಿಯಾಗಿ, ಗುರುತಿಸಲಾದ ಸ್ಥಳದ 50 ಮೀಟರ್ ವ್ಯಾಪ್ತಿಯೊಳಗೆ ಜಿಯೋ-ಟ್ಯಾಗ್ ಮಾಡಲಾದ ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡಿ ಟಿಕೆಟ್ಗಳನ್ನು ಮುಕ್ತಾಯಗೊಳಿಸಬೇಕು ಎಂದು ಸೂಚಿಸಲಾಗಿದೆ.
30 ದಿನಕ್ಕೊಮ್ಮೆ ಮರುಸಮೀಕ್ಷೆ
ಎಐ ಆಧಾರಿತ ವ್ಯವಸ್ಥೆಯು ನಾಗರಿಕ ಕಾಮಗಾರಿಗಳ ಪ್ರಗತಿಯನ್ನು ಡಿಜಿಟಲ್ ದಾಖಲೆಗಳ ಮೂಲಕ ದಾಖಲಿಸಲು, ಅಧಿಕಾರಿಗಳ ಹೊಣೆಗಾರಿಕೆಯನ್ನು ಹೆಚ್ಚಿಸಲು ಮತ್ತು ಸಮಸ್ಯೆಗಳನ್ನು ಮುಂಚಿತವಾಗಿಯೇ ಗುರುತಿಸಲು ಸಹಕಾರಿಯಾಗಲಿದೆ. ಎಐ ಕ್ಯಾಮೆರಾ ಹೊಂದಿರುವ ವಾಹನವು ಪ್ರತಿ 30 ದಿನಗಳಿಗೊಮ್ಮೆ ಹಿಂದಿನ ಸಮಸ್ಯೆಗಳನ್ನು ಮರುಪರಿಶೀಲಿಸುವುದರ ಜೊತೆಗೆ ಹೊಸ ಸಮಸ್ಯೆಗಳನ್ನೂ ಪತ್ತೆಹಚ್ಚಲಿದೆ.
ಪ್ರಾಯೋಗಿಕ ಯೋಜನೆಯ ಯಶಸ್ಸು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಆಧರಿಸಿ, ಪಾಲಿಕೆಯ ಸಂಪೂರ್ಣ ವ್ಯಾಪ್ತಿಗೆ ಈ ಯೋಜನೆಯನ್ನು ವಿಸ್ತರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ಉಪ ಪ್ರಧಾನ ವ್ಯವಸ್ಥಾಪಕಿ ಮಂಜುಳಾ, ಘನತ್ಯಾಜ್ಯ ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಗಳು, ಕಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಮಾರ್ಷಲ್ಗಳು ಭಾಗವಹಿಸಿದ್ದರು.
ತಂತ್ರಜ್ಞಾನ ಆಧಾರಿತ ಆಡಳಿತದ ಮೂಲಕ ನಗರದ ರಸ್ತೆಗಳನ್ನು ಸ್ವಚ್ಛವಾಗಿಡುವುದು, ನಾಗರಿಕರ ದೂರುಗಳಿಗೆ ತ್ವರಿತ ಪರಿಹಾರ ಒದಗಿಸುವುದು ಮತ್ತು ಸಾರ್ವಜನಿಕ ಸ್ಥಳಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R