ಎಸ್ಐಆರ್; ಬೆಂಗಳೂರಿನಲ್ಲಿ 5.41 ಲಕ್ಷ ಅರ್ಜಿಗಳ ಸಲ್ಲಿಕೆ: ಮಹೇಶ್ವರ್ ರಾವ್
ಮಲ್ಲೇಶ್ವರಂನ 14 ಬೂತ್ಗಳಲ್ಲಿ ಬಲ್ಕ್ ಅರ್ಜಿ; 1,103 ಅರ್ಜಿಗಳು ತಿರಸ್ಕೃತ
ಎಸ್ಐಆರ್; ಬೆಂಗಳೂರಿನಲ್ಲಿ 5.41 ಲಕ್ಷ ಅರ್ಜಿಗಳ ಸಲ್ಲಿಕೆ: ಮಹೇಶ್ವರ್ ರಾವ್


ಬೆಂಗಳೂರು, 15 ಅಕ್ಟೋಬರ್ (ಹಿ.ಸ.):

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂಬಂಧ ನಗರದ ಜಿಬಿಎ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ಸುದ್ದಿಗೋಷ್ಠಿ ನಡೆಸಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ವಿವರಗಳನ್ನು ಪ್ರಕಟಿಸಿದರು.

ಬೆಂಗಳೂರಿನಲ್ಲಿ ಪ್ರಸ್ತುತ 56,99,660 ಮತದಾರರ ಹೆಸರುಗಳು ಪಟ್ಟಿಯಲ್ಲಿವೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಫಾರಂ-6 ಸಲ್ಲಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಮಹೇಶ್ವರ್ ರಾವ್ ತಿಳಿಸಿದರು.

ಎಡಿಇಒಗಳ ಪಟ್ಟಿಯಲ್ಲಿರುವವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಈವರೆಗೆ 24,01,197 ಜನರ ವಿಚಾರಣೆ ಪೂರ್ಣಗೊಂಡಿದ್ದು, 3,78,033 ಜನರ ವಿಚಾರಣೆ ಪ್ರಗತಿಯಲ್ಲಿದೆ. ಇನ್ನೂ 5,856 ನೋಟಿಸ್ಗಳಿಗೆ ಸಂಬಂಧಿಸಿದ ವಿಚಾರಣೆ ಬಾಕಿ ಇದೆ ಎಂದು ಹೇಳಿದರು.

5.41 ಲಕ್ಷ ಅರ್ಜಿಗಳ ಸಲ್ಲಿಕೆ

ಅಕ್ಟೋಬರ್ 23ರವರೆಗೆ ಫಾರಂ-7 ಅಡಿಯಲ್ಲಿ 5,549 ಅರ್ಜಿಗಳು ಸಲ್ಲಿಕೆಯಾಗಿವೆ. ಫಾರಂ-6 ಅಡಿಯಲ್ಲಿ 2,19,934 ಹಾಗೂ ಫಾರಂ-8 ಅಡಿಯಲ್ಲಿ 3,12,799 ಅರ್ಜಿಗಳು ಸ್ವೀಕೃತವಾಗಿವೆ. ಫಾರಂ-6, ಫಾರಂ-6ಎ, ಫಾರಂ-7 ಮತ್ತು ಫಾರಂ-8 ಸೇರಿದಂತೆ ಒಟ್ಟು 5,41,105 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.

ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯಲ್ಲಿ 59,18,660 ಮತದಾರರು ಇರಲಿದ್ದಾರೆ ಎಂದು ಅವರು ತಿಳಿಸಿದರು.

ಮಲ್ಲೇಶ್ವರಂನಲ್ಲಿ ಬಲ್ಕ್ ಅರ್ಜಿ ಸಲ್ಲಿಕೆ

ಮಲ್ಲೇಶ್ವರಂ ಕ್ಷೇತ್ರದ 14 ಮತಗಟ್ಟೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿರುವುದು ಗಮನಕ್ಕೆ ಬಂದಿದೆ. ಈ ವ್ಯಾಪ್ತಿಯಲ್ಲಿ ಒಟ್ಟು 1,211 ಅರ್ಜಿಗಳು ಸಲ್ಲಿಕೆಯಾಗಿದ್ದು, ಪರಿಶೀಲನೆಯ ಬಳಿಕ 1,103 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮಹೇಶ್ವರ್ ರಾವ್ ತಿಳಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ, ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande