ಅಂಬೇಡ್ಕರ್ ಅಭಿವೃದ್ಧಿ ನಿಗಮದ ₹14.95 ಕೋಟಿ ವಂಚನೆ ಪ್ರಕರಣ: ಐವರ ವಿರುದ್ಧ ಇಡಿ ಹೆಚ್ಚುವರಿ ಚಾರ್ಜ್ಶೀಟ್
ಬೆಂಗಳೂರು, 15 ಅಕ್ಟೋಬರ್ (ಹಿ.ಸ.): ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ (ಎಡಿಸಿಎಲ್) ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು, ₹14.95 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಐವರ ವಿರುದ್ಧ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಿದೆ.
ambedkar-development-corporation-rs-14-95-crore-fraud-ed-files-supplementary-chargesheet-against-five


ಬೆಂಗಳೂರು, 15 ಅಕ್ಟೋಬರ್ (ಹಿ.ಸ.):

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ (ಎಡಿಸಿಎಲ್) ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು, ₹14.95 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಐವರ ವಿರುದ್ಧ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಿದೆ.

ಅಕ್ಟೋಬರ್ 5ರಂದು ಬೆಂಗಳೂರಿನ ವಿಶೇಷ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯಕ್ಕೆ ಪೂರಕ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಆಯೂಬ್ ಸಯ್ಯದ್ ಸೇರಿದಂತೆ ಐವರನ್ನು ಹೆಸರಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ನಕಲಿ ದಾಖಲೆಗಳಿಂದ ಬ್ಯಾಂಕ್ ಖಾತೆ

ಕೇಂದ್ರೀಯ ತನಿಖಾ ದಳದ (ಸಿಬಿಐ) ಭ್ರಷ್ಟಾಚಾರ ನಿಗ್ರಹ ಘಟಕ ಬೆಂಗಳೂರಿನಲ್ಲಿ ದಾಖಲಿಸಿದ್ದ ಎಫ್ಐಆರ್ ಆಧರಿಸಿ ಇಡಿ ತನಿಖೆ ಕೈಗೊಂಡಿತ್ತು. ತನಿಖೆಯ ಪ್ರಕಾರ, ಬೆಂಗಳೂರಿನ ಹೆಚ್ಎಎಲ್ ಎರಡನೇ ಹಂತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ನಕಲಿ ಚಾಲ್ತಿ ಖಾತೆ ತೆರೆಯಲಾಗಿತ್ತು. ಇದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬೇರೊಬ್ಬರ ಗುರುತನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ಆರೋಪ.

₹5 ಕೋಟಿ ಮೊತ್ತದ ನಾಲ್ಕು ಠೇವಣಿಗಳ ದುರ್ಬಳಕೆ

ನಿಗಮಕ್ಕೆ ಸೇರಿದ ತಲಾ ₹5 ಕೋಟಿ ಮೊತ್ತದ ನಾಲ್ಕು ಸ್ಥಿರ ಠೇವಣಿಗಳನ್ನು ಅವಧಿಗೂ ಮುನ್ನವೇ ಮುಕ್ತಾಯಗೊಳಿಸಿ ಹಣ ವರ್ಗಾಯಿಸಲಾಗಿದೆ ಎಂದು ಇಡಿ ಆರೋಪಿಸಿದೆ. ನಕಲಿ ಟಿಡಿಆರ್/ಎಫ್ಡಿಆರ್ ದಾಖಲೆಗಳು ಹಾಗೂ ಸೃಷ್ಟಿಸಿದ ಠೇವಣಿ ಮುಕ್ತಾಯ ಪತ್ರಗಳನ್ನು ಬಳಸಿ ಈ ವಹಿವಾಟು ನಡೆಸಲಾಗಿದೆ ಎನ್ನಲಾಗಿದೆ. ಈ ಪ್ರಕ್ರಿಯೆಯ ಮೂಲಕ ಸುಮಾರು ₹14.95 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದ್ದು, ಅದನ್ನು ಅಪರಾಧದಿಂದ ಗಳಿಸಿದ ಹಣವೆಂದು ಇಡಿ ಪರಿಗಣಿಸಿದೆ.

ಹಲವು ಖಾತೆಗಳ ಮೂಲಕ ಹಣ ವರ್ಗಾವಣೆ

ವರ್ಗಾಯಿಸಲಾದ ಹಣವನ್ನು ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳ ಬ್ಯಾಂಕ್ ಖಾತೆಗಳ ಮೂಲಕ ರವಾನಿಸಿ, ಬಳಿಕ ನಗದು ರೂಪದಲ್ಲಿ ಹಿಂಪಡೆಯಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಹಣದ ಮೂಲವನ್ನು ಮರೆಮಾಚುವ ಉದ್ದೇಶದಿಂದ ಇಂತಹ ವಹಿವಾಟು ನಡೆಸಲಾಗಿದೆ ಎಂಬುದು ಇಡಿ ಆರೋಪವಾಗಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಲಾದ ಹೇಳಿಕೆಗಳಲ್ಲಿಯೂ ಹಣ ಸ್ವೀಕರಿಸುವುದು, ವರ್ಗಾಯಿಸುವುದು ಮತ್ತು ಹಿಂಪಡೆಯುವ ಪ್ರಕ್ರಿಯೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಭಾಗಿಯಾಗಿರುವ ಕುರಿತು ಮಾಹಿತಿ ಲಭಿಸಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande