
ಬೆಂಗಳೂರು, 15 ಅಕ್ಟೋಬರ್ (ಹಿ.ಸ.):
ತಮ್ಮ ವಿರುದ್ಧದ ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ತಪ್ಪು ಮಾಹಿತಿ ಮಂಡಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಸತ್ಯಾಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಅಕ್ರಮಗಳ ತನಿಖೆಗಾಗಿ ಕರ್ನಾಟಕ ಹೈಕೋರ್ಟ್ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತ್ತು. ಆದರೆ, ಈ ನೇಮಕವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಅಕ್ಟೋಬರ್ 1ರಂದು ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಅಲೋಕ್ ಕುಮಾರ್ ವಿರುದ್ಧದ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಬಾಕಿ ಇದೆ ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ.
ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಲೋಕ್ ಕುಮಾರ್, ಅಕ್ಟೋಬರ್ 5ರಂದು ಬರೆದ ಪತ್ರದಲ್ಲಿ ತಮ್ಮ ವಿರುದ್ಧ ಯಾವುದೇ ಸಿಬಿಐ ತನಿಖೆ ಅಥವಾ ಇಲಾಖಾ ವಿಚಾರಣೆ ಬಾಕಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ವಾದವು ಅಧಿಕೃತ ದಾಖಲೆಗಳಲ್ಲಿರುವ ವಾಸ್ತವಾಂಶಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಸಿಬಿಐ ಬಿ-ವರದಿ ನ್ಯಾಯಾಲಯದಿಂದ ಅಂಗೀಕಾರ
ತಾವು ಬೆಂಗಳೂರಿನ ಪೊಲೀಸ್ ಆಯುಕ್ತರಾಗಿದ್ದ ಅವಧಿಯ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಸಿಬಿಐ ತನಿಖೆ ಈಗಾಗಲೇ ಪೂರ್ಣಗೊಂಡಿದೆ. ಸಿಬಿಐ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು 2024ರ ಫೆಬ್ರುವರಿ 13ರಂದು ವಿಶೇಷ ನ್ಯಾಯಾಲಯ ಅಂಗೀಕರಿಸಿದೆ. ಅಲ್ಲದೆ, ಪ್ರಕರಣದ ದೂರುದಾರರು ಕೂಡ ವರದಿಗೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದು ಅಲೋಕ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು 2023ರ ಮೇ ತಿಂಗಳಲ್ಲೇ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಬಳಿಕ ತಮ್ಮ ವಿರುದ್ಧ 2025ರ ಮೇ 9ರಂದು ಹೊರಡಿಸಿದ್ದ ಶೋಕಾಸ್ ನೋಟಿಸ್ ಮತ್ತು ಆರೋಪಪಟ್ಟಿಯನ್ನು ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಮೊರೆ ಹೋಗಿದ್ದೆ. ನ್ಯಾಯಮಂಡಳಿಯ ಅಧ್ಯಕ್ಷರು 2025ರ ಅಕ್ಟೋಬರ್ 14ರಂದು ಅವುಗಳನ್ನು ರದ್ದುಗೊಳಿಸಿದ್ದರು ಎಂದು ತಿಳಿಸಿದ್ದಾರೆ.
ಈ ಆದೇಶವನ್ನು ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರೂ, ನ್ಯಾಯಮಂಡಳಿಯ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ನಲ್ಲಿ ಉಲ್ಲೇಖಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಯಾವುದೇ ಸಿಬಿಐ ಅಥವಾ ಇಲಾಖಾ ವಿಚಾರಣೆ ಬಾಕಿ ಇಲ್ಲ ಎಂಬುದು ಅಲೋಕ್ ಕುಮಾರ್ ಅವರ ವಾದವಾಗಿದೆ.
ವೃತ್ತಿಪರ ಗೌರವಕ್ಕೆ ಧಕ್ಕೆ: ಅಲೋಕ್ ಕುಮಾರ್
ಎಸ್ಐಟಿ ಮುಖ್ಯಸ್ಥರಾಗಬೇಕೆಂದು ತಾವು ಹೈಕೋರ್ಟ್ಗೆ ಮನವಿ ಮಾಡಿರಲಿಲ್ಲ ಅಥವಾ ಆ ಹುದ್ದೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿರಲಿಲ್ಲ. ಹೈಕೋರ್ಟ್ ತನ್ನ ವಿವೇಚನೆಯಿಂದ ತಮ್ಮನ್ನು ನೇಮಕ ಮಾಡಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ತಮ್ಮ ವಿರುದ್ಧದ ಪ್ರಕರಣದ ಕುರಿತು ತಪ್ಪು ಅಥವಾ ಪರಿಶೀಲಿಸದ ಮಾಹಿತಿಯನ್ನು ಮಂಡಿಸಿರುವುದರಿಂದ ತಮ್ಮ ವೃತ್ತಿಪರ ಪ್ರಾಮಾಣಿಕತೆ ಮತ್ತು ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಲೋಕ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿರುವ ಅಫಿಡವಿಟ್ನಲ್ಲಿ ಸಂಬಂಧಿತ ನ್ಯಾಯಾಲಯದ ಆದೇಶಗಳು ಹಾಗೂ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿ ಸರಿಯಾದ ಮಾಹಿತಿ ನೀಡಬೇಕು. ತಮ್ಮ ವಿರುದ್ಧ ಯಾವುದೇ ತಪ್ಪು ಅಥವಾ ದೃಢೀಕರಿಸದ ಆರೋಪಗಳನ್ನು ಸೇರಿಸಬಾರದು ಎಂದು ಮುಖ್ಯ ಕಾರ್ಯದರ್ಶಿಯನ್ನು ಅವರು ಕೋರಿದ್ದಾರೆ.
ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ತನಿಖೆಗೆ ಸಂಬಂಧಿಸಿದ ಎಸ್ಐಟಿ ನೇಮಕದ ವಿವಾದದ ನಡುವೆ ಅಲೋಕ್ ಕುಮಾರ್ ಬರೆದಿರುವ ಈ ಪತ್ರ ಮಹತ್ವ ಪಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R