


ಬಳ್ಳಾರಿ, 15 ಅಕ್ಟೋಬರ್ (ಹಿ.ಸ.)
ಎಐ ಯುಗದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಕೇವಲ ತಿಳಿದುಕೊಂಡರೆ ಸಾಲದು ಅದನ್ನು ನಮ್ಮ ಸ್ವಜ್ಞಾನಕ್ಕೆ ಅನುಗುಣವಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಹೊಂದಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಹೇಳಿದರು.
ವಿಶ್ರೀಕೃ ವಿಶ್ವವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಹಾಗೂ ವಿಶನ್ ಡಿಜಿಟಲ್ ಇಂಡಿಯಾ, ಗ್ಲೋಬಲ್ ಡಿಜಿಟಲ್ ಯುನಿವರ್ಸಿಟಿ ಹಾಗೂ ಗ್ಲೋಬಲ್ ಎಐ ಸೊಸೈಟಿ ಜಂಟಿ ಸಹಭಾಗಿತ್ವದಲ್ಲಿ ಗುರುವಾರದಿಂದ ಆರಂಭವಾಗಿರುವ ‘ಶೈಕ್ಷಣಿಕ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ; ಬಹುಶೀಸ್ತೀಯ ಶಿಕ್ಷಣ, ಸಂಶೋಧನೆ ಮತ್ತು ನಾವಿನ್ಯತೆ’ ಎಂಬ ಎರಡು ದಿನಗಳ ಅಂತರಾಷ್ಟಿಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಎಐ ಎನ್ನುವುದು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಹರಡಿಕೊಂಡಿದೆ. ಎಐ ಕುರಿತು ಸಮರ್ಪಕವಾಗಿ ಅರಿತುಕೊಂಡು ಅದನ್ನು ನಮ್ಮ ಅಗತ್ಯತೆಗೆ ತಕ್ಕಂತೆ ಬಳಸಿಕೊಂಡಲ್ಲಿ ಅನುಕೂಲತೆಗಳು ಹೆಚ್ಚು ಎಂದು ಅಭಿಪ್ರಾಯಪಟ್ಟರು.
ವಿಜಯನಗರ ಸಂಸ್ಥಾನದ ದೊರೆ ಕೃಷ್ಣದೇವರಾಯರು ತಮ್ಮ ಆಸ್ಥಾನದಲ್ಲಿ ಅಷ್ಟ ದಿಗ್ಗಜ ಜ್ಞಾನಗಣವನ್ನು ಹೊಂದಿದ್ದರು. ಅದರಂತೆಯೇ ಇಂದು ಹಲವಾರು ಎಐ ಸಾಧನಗಳು ನಮ್ಮ ದೈನಂದಿನ ಜೀವನದಲ್ಲಿ ಅಷ್ಟ ದಿಕ್ಕುಗಳಂತೆ ಕೆಲಸ ಮಾಡುತ್ತಿವೆ ಎಂದರು.
ಬಳ್ಳಾರಿಯಲ್ಲಿ ಕಳೆದ 2 ವರ್ಷ ಅವಧಿಯಲ್ಲಿ 48 ಬಾಣಂತಿಯರ ಸಾವು ಸಂಭವಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಆತಂಕ ಮೂಡಿಸಿತ್ತು. ಇದನ್ನು ತಡೆಗಟ್ಟಲು ಜಿಲ್ಲಾಡಳಿತವು ಕೃತಕ ಬುದ್ಧಿಮತ್ತೆ ಸಹಾಯದಿಂದ ಪೋಷಕಾಂಶಗಳ ಕೊರತೆಯಿಂದ ಬಳಲುವ ಗರ್ಭಿಣಿ ಸ್ತಿಯರನ್ನು ಗುರುತಿಸಿ ಅವರಿಗೆ ಪ್ರಸವದ ನಂತರ ಒದಗಬಹುದಾದ ಆಪತ್ತುಗಳನ್ನು ಎಐ ಟ್ರಾಕರ್ ಮೂಲಕ ನಿಭಾಯಿಸಿದೆವು. ಇದರಿಂದ ಈ ವರ್ಷ ಬಾಣಂತಿಯರ ಸಾವಿನ ಪ್ರಮಾಣ 4 ಕ್ಕೆ ಇಳಿದಿದೆ ಎಂದು ವಿವರಿಸಿದರು.
ಎಐ ಮೂಲಕ ಶೈಕ್ಷಣಿಕ ವಲಯ ಮಾತ್ರವಲ್ಲದೆ ಕೃಷಿ ಕ್ಷೇತ್ರದಲ್ಲಿ ಸಹ ಒಳ್ಳೆಯ ಬೆಳೆ ಬೆಳೆಯಲು ಸಾಧ್ಯವಿದೆ. ಆರ್ಟಿಫಿಷಿಯಲ್ ಇಂಟೆಲಿಜನ್ಸ್, ಮಷಿನ್ ಲರ್ನಿಂಗ್, ಪ್ರೋಗ್ರಾಮಿಂಗ್ಗಳ ಕಲಿಕೆಯಿಂದ ಎಐ ಬಳಕೆ ಮತ್ತಷ್ಟು ಹತ್ತಿರವಾಗುತ್ತವೆ. ಸ್ವಂತ ಮತ್ತು ಸೃಜನಾತ್ಮಕ ಆಲೋಚನೆಗಳಿಗೆ ಎಐ ಸಹಾಯದಿಂದ ಯೋಜನೆ ರೂಪಿಸಿದಲ್ಲಿ ಸಾಮಾಜಿಕ ಅಭಿವೃದ್ಧಿಯನ್ನು ಮಾಡಬಹುದು ಎಂದರು.
ಪ್ರಸ್ತುತ ದಿನಮಾನದಲ್ಲಿ ಎಐ ಆಧಾರಿತ ಕಾರ್ಯಾಚರಣೆಗಳನ್ನು ಸರ್ಕಾರವು ಎಲ್ಲ ಕ್ಷೇತ್ರಗಳಲ್ಲಿ ಆರಂಭಿಸಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ವಿಚಾರ ಸಂಕಿರಣವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಆಶಿಸಿದರು.
ವಿಶನ್ ಡಿಜಿಟಲ್ ಇಂಡಿಯಾ ಸ್ಥಾಪಕ ಡಾ.ಹರಿ ಕೃಷ್ಣ ಮಾರನ್ ಮಾತನಾಡಿ, ಎಐ ಎಂದಿಗೂ ಸಹ ಮಾನವನ ಕೆಲಸವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ವೈದ್ಯಕೀಯ, ಶಿಕ್ಷಣ, ಪ್ರವಾಸೋದ್ಯಮ, ಉದ್ಯಮ ರಂಗಗಳಲ್ಲಿ ಎಐ ತನ್ನ ವ್ಯಾಪ್ತಿ ವಿಸ್ತರಿಸಿದೆ ಆದರೆ ಅವು ಕೇವಲ ಬಳಕೆಯ ಸಾಧನಗಳಾಗಿ ಮಾತ್ರವೇ ಸೀಮಿತವಾಗಿವೆ. ಮನುಷ್ಯನ ಬುದ್ಧಿ ಶಕ್ತಿಯ ಮುಂದೆ ಕೃತಕ ಬುದ್ಧಿಮತ್ತೆ ನಿಲ್ಲಲಾರದು ಎಂದು ಹೇಳಿದರು.
ಭಾರತದಂತಹ ದೊಡ್ಡ ರಾಷ್ಟçದಲ್ಲಿ ನಳಂದಾ, ತಕ್ಷ ಶಿಲಾ ವಿಶ್ವವಿದ್ಯಾಲಯಗಳ ಜ್ಞಾನ ಪರಂಪರೆಯಿದೆ. ಅದೇ ಜ್ಞಾನ ಭಂಡಾರಕ್ಕೆ ಇಂದು ತಂತ್ರಜ್ಞಾನದ ಮಾರ್ಗ ದೊರೆತಿದೆ. ಇದನ್ನು ಅರಿತುಕೊಂಡಿರುವ ಅನೇಕ ಟೆಕ್ಕಿಗಳು ವಿಶ್ವದ ದಿಗ್ಗಜ ಐಟಿ ಕಂಪನಿಗಳ ಚುಕ್ಕಾಣಿ ಹಿಡಿದಿದ್ದಾರೆ ಎಂದರು.
ವಿಶನ್ ಡಿಜಿಟಲ್ ಇಂಡಿಯಾದ ಮುಖ್ಯ ಧ್ಯೇಯವೆಂದರೆ ಮಾನವನ ಜಾಣತನಕ್ಕೆ ತಂತ್ರಜ್ಞಾನದ ಬಲ ನೀಡುವುದು ಎಂದು ತಿಳಿಸಿದರು.
ವಿವಿಯ ಕುಲಪತಿ ಪ್ರೊ.ಎಂ ಮುನಿರಾಜು ಅವರು ಮಾತನಾಡಿ, ಎಐ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ ಮಾನವನ ಸಹಾಯವಿಲ್ಲದೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಿಗೆ ಎಐ ಜ್ಞಾನ, ಕೌಶಲ್ಯ ಅಭಿವೃದ್ಧಿ ಪಡಿಸಲು ಬರುವ ಡಿಸೆಂಬರ್ ತಿಂಗಳಲ್ಲಿ ಅಂತರಾಷ್ಟಿçÃಯ ಸಮ್ಮೇಳನವನ್ನು ಆಯೋಜನೆ ಮಾಡುತ್ತೇವೆ ಎಂದು ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಈಗಾಗಲೇ 4 ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ಗಳನ್ನು ತೆರೆಯಲಾಗಿದ್ದು, ಜಿಲ್ಲಾಡಳಿತವು ಸಹಕರಿಸಿದಲ್ಲಿ ವಿವಿಯ ಆವರಣದಲ್ಲಿ ಎಐ ಲ್ಯಾಬ್ ಆರಂಭಿಸುವ ಕನಸು ಹೊಂದಿರುವುದಾಗಿ ತಿಳಿಸಿದರು. ಇದರಿಂದ ವಿಶ್ವವಿದ್ಯಾಲಯಗಳ ಸಂಶೋಧನಾ ಗುಣಮಟ್ಟವನ್ನು ಅಂತರಾಷ್ಟಿçÃಯ ಮಟ್ಟಕ್ಕೆ ಕೊಂಡೊಯ್ಯುವ ಯೋಚನೆ ಇದೆ ಎಂದು ಹೇಳಿದರು.
ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಅಮೆರಿಕ, ಫಿನ್ಲೆಂಡ್ ದೇಶಗಳ ಎಐ ಪರಿಣಿತ ತಜ್ಞರು ತಾಂತ್ರಿಕ ಗೋಷ್ಠಿಗಳಲ್ಲಿ ತಮ್ಮ ಎಐ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.
ವಿವಿಯ ಕುಲಸಚಿವರಾದ ಪ್ರೊ ವಿ ಲೋಕೇಶ್, ಪರೀಕ್ಷಾಂಗ ಕುಲಸಚಿವರಾದ ಪ್ರೊಎನ್ ಎಂ ಸಾಲಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ ಹನುಮೇಶ ವೈದ್ಯ ವೇದಿಕೆಯಲ್ಲಿದ್ದರು.
ವಿವಿಯ ಎಲ್ಲ ನಿಕಾಯಗಳ ಡೀನರು, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ 300ಕ್ಕೂ ಅಧಿಕ ಜನ ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್