
ನವದೆಹಲಿ, 15 ಅಕ್ಟೋಬರ್ (ಹಿ.ಸ.):
ಉತ್ತರ ಪ್ರದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಗ್ರಾಮೀಣ ಕಾಲೇಜುಗಳಲ್ಲಿ ಡಿಜಿಟಲ್ ಸೌಲಭ್ಯಗಳನ್ನು ವಿಸ್ತರಿಸುವುದು ಮತ್ತು ಪರೀಕ್ಷೆಗಳನ್ನು ಪಾರದರ್ಶಕವಾಗಿ, ನಕಲುರಹಿತವಾಗಿ ನಡೆಸುವುದಕ್ಕೆ ಸರ್ಕಾರ ಆದ್ಯತೆ ನೀಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಗಣಕ ಫಲಕಗಳು ಮತ್ತು ಸ್ಮಾರ್ಟ್ಫೋನ್ಗಳನ್ನು ವಿತರಿಸುವುದರ ಜತೆಗೆ, ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡುವ ಯೋಜನೆಯನ್ನೂ ಸರ್ಕಾರ ರೂಪಿಸುತ್ತಿದೆ ಎಂದು ಉತ್ತರ ಪ್ರದೇಶದ ಉನ್ನತ ಶಿಕ್ಷಣ ಖಾತೆ ರಾಜ್ಯ ಸಚಿವೆ ಹಾಗೂ ಹರ್ದೋಯಿ ಜಿಲ್ಲೆಯ ಶಹಾಬಾದ್ ಕ್ಷೇತ್ರದ ಶಾಸಕಿ ರಜನಿ ತಿವಾರಿ ತಿಳಿಸಿದ್ದಾರೆ.
ಹಿಂದುಸ್ತಾನ್ ಸಮಾಚಾರ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗಳು, ಗ್ರಾಮೀಣ ಕಾಲೇಜುಗಳಲ್ಲಿ ಡಿಜಿಟಲ್ ತರಗತಿಗಳ ವಿಸ್ತರಣೆ, ಪರೀಕ್ಷಾ ಅಕ್ರಮಗಳಿಗೆ ಕಡಿವಾಣ, ರಾಜ್ಯದ ಅಭಿವೃದ್ಧಿ ಕಾರ್ಯಗಳು, ಮಹಿಳಾ ಮೀಸಲಾತಿ ಹಾಗೂ ಮುಂಬರುವ ರಾಜಕೀಯ ಬೆಳವಣಿಗೆಗಳ ಕುರಿತು ಸರ್ಕಾರದ ನಿಲುವನ್ನು ಹಂಚಿಕೊಂಡರು.
ಪ್ರಶ್ನೆ: ಗೃಹಿಣಿಯಿಂದ ನಾಲ್ಕು ಬಾರಿ ಶಾಸಕರಾಗಿ, ಸಚಿವ ಸ್ಥಾನಕ್ಕೇರಿದ ನಿಮ್ಮ ರಾಜಕೀಯ ಪಯಣವನ್ನು ಹೇಗೆ ನೋಡುತ್ತೀರಿ?
ರಜನಿ ತಿವಾರಿ: ಅನಿರೀಕ್ಷಿತ ಪರಿಸ್ಥಿತಿಗಳಿಂದಾಗಿ ನಾನು ರಾಜಕೀಯ ಪ್ರವೇಶಿಸಿದೆ. ಆದರೆ ರಾಜಕೀಯಕ್ಕೆ ಬಂದ ನಂತರ ಜನರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ ಎಂಬುದು ಸ್ಪಷ್ಟವಾಯಿತು. ಅವರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುವುದು ನನ್ನ ಕರ್ತವ್ಯವಾಯಿತು. ನನ್ನ ಜನರಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸಾಧ್ಯವಾದ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಜನಸೇವೆಯ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ವೇಗ ನೀಡಿದ್ದೇನೆ. ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಮತ್ತು ಅವರು ನನ್ನ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂಬ ಭಾವನೆ ನನಗಿದೆ.
ಪ್ರಶ್ನೆ: ಸತತ ನಾಲ್ಕು ಬಾರಿ ಚುನಾವಣೆಯಲ್ಲಿ ಗೆಲ್ಲಲು ಕಾರಣವಾದ ವಿಶ್ವಾಸ ಯಾವುದು?
ರಜನಿ ತಿವಾರಿ: ರಾಜಕೀಯಕ್ಕೆ ಯಾವುದೇ ಹಿನ್ನೆಲೆಯಿಂದ ಬರಬಹುದು. ಆದರೆ ರಾಜಕೀಯ ವ್ಯವಸ್ಥೆಯಲ್ಲಿ ಮುಂದುವರಿಯಲು ನಿರಂತರ ಪರಿಶ್ರಮ ಅಗತ್ಯ. ಜನರ ವಿಶ್ವಾಸ ಗಳಿಸಬೇಕು. ಅವರ ಸುಖ-ದುಃಖಗಳಲ್ಲಿ ಸದಾ ಭಾಗಿಯಾಗಿದ್ದಾಗ ಮಾತ್ರ ಜನರು ನಮ್ಮನ್ನು ನಂಬುತ್ತಾರೆ. ನಾನು ಯಾವಾಗಲೂ ಜನರ ನಡುವೆ ಇದ್ದು ಕೆಲಸ ಮಾಡಿದ್ದೇನೆ. ಕಳೆದ ಸುಮಾರು 20 ವರ್ಷಗಳಲ್ಲಿ ನಾಲ್ಕೈದು ದಿನಗಳ ಕಾಲ ನಿರಂತರವಾಗಿ ಮನೆಯಲ್ಲೇ ಉಳಿದ ಸಂದರ್ಭವೂ ಬಂದಿಲ್ಲ. ವಾರದ ಏಳು ದಿನವೂ, ದಿನದ 24 ಗಂಟೆಯೂ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಇದರಿಂದ ಜನರು ಮತ್ತು ನಮ್ಮ ನಡುವೆ ಅಚಲವಾದ ವಿಶ್ವಾಸ ಬೆಳೆದಿದೆ.
ಪ್ರಶ್ನೆ: ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ?
ರಜನಿ ತಿವಾರಿ: ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂಲ ಉದ್ದೇಶ ಶಿಕ್ಷಣವನ್ನು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳೊಂದಿಗೆ ಬೆಸೆಯುವುದು, ಆಧುನಿಕ ತಂತ್ರಜ್ಞಾನದಿಂದ ಅದನ್ನು ಸಮೃದ್ಧಗೊಳಿಸುವುದು ಹಾಗೂ ಯುವಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಇದೇ ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹೊಸದಾದ ಮತ್ತು ವ್ಯಾಪಕವಾದ ನೀತಿಯನ್ನು ಜಾರಿಗೆ ತರುವಾಗ ಅದನ್ನು ಇಡೀ ವ್ಯವಸ್ಥೆಯಲ್ಲಿ ಅಳವಡಿಸಲು ಸಹಜವಾಗಿಯೇ ಸ್ವಲ್ಪ ಸಮಯ ಬೇಕಾಗುತ್ತದೆ.
ಪ್ರಶ್ನೆ: ಗ್ರಾಮೀಣ ಪದವಿ ಕಾಲೇಜುಗಳಲ್ಲಿ ಡಿಜಿಟಲ್ ತರಗತಿಗಳು ಮತ್ತು ಪ್ರಯೋಗಾಲಯಗಳಂತಹ ಆಧುನಿಕ ಸೌಲಭ್ಯಗಳ ಕೊರತೆಗೆ ಕಾರಣವೇನು?
ರಜನಿ ತಿವಾರಿ: ಗ್ರಾಮೀಣ ಪ್ರದೇಶಗಳ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಲಾಗಿದೆ. ಆದಾಗ್ಯೂ, ಕೆಲವು ದೂರದ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಕೆಲಸಗಳೂ ಪೂರ್ಣಗೊಂಡಿಲ್ಲ ಎಂಬುದು ನಿಜ. ಗ್ರಾಮೀಣ ಹಿನ್ನೆಲೆಯ ಕಾಲೇಜುಗಳಲ್ಲಿ ಡಿಜಿಟಲ್ ಗ್ರಂಥಾಲಯಗಳು ಮತ್ತು ಡಿಜಿಟಲ್ ಉದ್ಯಾನಗಳನ್ನು ಸ್ಥಾಪಿಸಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ತಲುಪಿಸುವಂತೆ ಆಧುನಿಕ ಡಿಜಿಟಲ್ ತಂತ್ರಜ್ಞಾನವೂ ತಲುಪಬೇಕು ಎಂಬುದು ನಮ್ಮ ಗುರಿ. ಯುವಜನರ ಭವಿಷ್ಯವನ್ನು ರೂಪಿಸುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ. ಗ್ರಾಮೀಣ ಕಾಲೇಜುಗಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನಿರಂತರವಾಗಿ ಬಜೆಟ್ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸುತ್ತಿದೆ.
ಪ್ರಶ್ನೆ: ಪರೀಕ್ಷೆಗಳಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಶೈಕ್ಷಣಿಕ ವೇಳಾಪಟ್ಟಿಯ ಪಾಲನೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?
ರಜನಿ ತಿವಾರಿ: ಹಿಂದಿನ ಸರ್ಕಾರಗಳ ಅವಧಿಯಲ್ಲಿ ವೇದಿಕೆಗಳಿಂದಲೇ, 'ನಮಗೆ ಮತ ನೀಡಿ, ನಿಮಗೆ ಪರೀಕ್ಷೆಗಳಲ್ಲಿ ನಕಲು ಮಾಡಲು ಅವಕಾಶ ನೀಡುತ್ತೇವೆ' ಎಂದು ಹೇಳುತ್ತಿದ್ದ ಕಾಲವನ್ನೂ ರಾಜ್ಯ ಕಂಡಿದೆ. ಅಂದಿನ ವ್ಯವಸ್ಥೆಯು ಯುವಜನರ ಭವಿಷ್ಯವನ್ನು ಕತ್ತಲೆಗೆ ತಳ್ಳಿತ್ತು.
ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಪರೀಕ್ಷೆ ಮತ್ತು ಶೈಕ್ಷಣಿಕ ಅವಧಿಯ ನಿರ್ವಹಣೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ನಕಲುರಹಿತಗೊಳಿಸಲಾಗಿದೆ. ಯುವಜನರಿಗೆ ಕೇವಲ ಪದವಿ ನೀಡುವುದಷ್ಟೇ ನಮ್ಮ ನೀತಿಯ ಉದ್ದೇಶವಲ್ಲ. ಅವರನ್ನು ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಸಮರ್ಥರನ್ನಾಗಿ ರೂಪಿಸುವುದು ನಮ್ಮ ಗುರಿ. ಪರೀಕ್ಷೆಗಳು ಮತ್ತು ಶೈಕ್ಷಣಿಕ ಅವಧಿಗಳು ನಿಗದಿತ ಸಮಯದಲ್ಲಿ ನಡೆಯುವಂತೆ ವ್ಯವಸ್ಥೆಯನ್ನು ಹೊಣೆಗಾರಿಯುತವಾಗಿ ರೂಪಿಸಲಾಗಿದೆ. ಇದರಿಂದ ದೇಶದ ಯುವಜನರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಸಾಧ್ಯವಾಗಲಿದೆ.
ಪ್ರಶ್ನೆ: ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸುವ ಪ್ರಮಾಣವನ್ನು ತಗ್ಗಿಸಲು ಮತ್ತು ದಾಖಲಾತಿ ಹೆಚ್ಚಿಸಲು ಯಾವ ಪ್ರಯತ್ನಗಳನ್ನು ಮಾಡಲಾಗಿದೆ?
ರಜನಿ ತಿವಾರಿ: ಈ ಹಿಂದೆ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಅನೇಕ ಹೆಣ್ಣುಮಕ್ಕಳು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಿದ್ದರು. ಆದರೆ ಈಗ ಇಂತಹ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ. ರಾಜ್ಯದಲ್ಲಿ ಬಲಪಡಿಸಿರುವ ಕಾನೂನು ಮತ್ತು ಸುವ್ಯವಸ್ಥೆಯು ವಿದ್ಯಾರ್ಥಿನಿಯರಲ್ಲಿ ಸುರಕ್ಷತೆಯ ಭಾವನೆ ಮೂಡಿಸಿದೆ. ಮತ್ತೊಂದೆಡೆ, ಸರ್ಕಾರದ ಕಲ್ಯಾಣ ಯೋಜನೆಗಳು ಅವರಿಗೆ ಬೆಂಬಲ ನೀಡಿವೆ.
ವಿದ್ಯಾರ್ಥಿನಿಯರನ್ನು ತಂತ್ರಜ್ಞಾನದೊಂದಿಗೆ ಬೆಸೆಯಲು ದೊಡ್ಡ ಪ್ರಮಾಣದಲ್ಲಿ ಗಣಕ ಫಲಕಗಳು ಮತ್ತು ಸ್ಮಾರ್ಟ್ಫೋನ್ಗಳನ್ನು ವಿತರಿಸಿದ್ದೇವೆ. ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡುವ ಯೋಜನೆಯನ್ನೂ ರಾಜ್ಯ ಸರ್ಕಾರ ವೇಗವಾಗಿ ರೂಪಿಸುತ್ತಿದೆ. ಈ ಹಿಂದೆ ವಿಶ್ವವಿದ್ಯಾಲಯಗಳಿಲ್ಲದ ವಿಭಾಗಗಳಲ್ಲಿ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಹೆಣ್ಣುಮಕ್ಕಳು ಉನ್ನತ ಶಿಕ್ಷಣಕ್ಕಾಗಿ ದೂರದ ಪ್ರದೇಶಗಳಿಗೆ ತೆರಳಬೇಕಾದ ಅನಿವಾರ್ಯತೆ ತಪ್ಪಿಸಲು ಸ್ಥಳೀಯ ಮಟ್ಟದಲ್ಲೇ ಮಹಿಳಾ ಪದವಿ ಕಾಲೇಜುಗಳು ಮತ್ತು ಸರ್ಕಾರಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಯಾವುದೇ ಅಡೆತಡೆಯಿಲ್ಲದೆ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗಲಿದೆ.
ಪ್ರಶ್ನೆ: ದ್ವಿತೀಯ ಪಿಯುಸಿ ನಂತರ ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಯಾವ ಕಾರ್ಯತಂತ್ರ ಅನುಸರಿಸಲಾಗುತ್ತಿದೆ?
ರಜನಿ ತಿವಾರಿ: ಹಿಂದೆ ಮೂಲ ಶಿಕ್ಷಣದ ಹಂತದಲ್ಲೇ ಅನೇಕ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದರು. ಇದನ್ನು ತಡೆಯಲು 'ಶಾಲೆಗೆ ಬನ್ನಿ ಅಭಿಯಾನ' ಆರಂಭಿಸಿ, ಎಲ್ಲ ಮಕ್ಕಳ ದಾಖಲಾತಿ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದೇವೆ. ಈಗ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ನಡುವೆ ನೇರ ಸಮನ್ವಯ ಸಾಧಿಸಲಾಗಿದೆ.
ದ್ವಿತೀಯ ಪಿಯುಸಿ ನಂತರ ಯಾವುದೇ ವಿದ್ಯಾರ್ಥಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯದಿದ್ದರೆ ಅಥವಾ ಮೊದಲ ವರ್ಷದ ಬಳಿಕ ಇಲ್ಲವೇ ಮೊದಲ ಸೆಮಿಸ್ಟರ್ನ ನಂತರ ಶಿಕ್ಷಣ ತೊರೆದರೆ, ಅದಕ್ಕೆ ಕಾರಣವೇನು ಎಂಬುದನ್ನು ಇಲಾಖೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುವುದನ್ನು ತಡೆಯಲು ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂದು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸಮಾನವಾಗಿ ಮುನ್ನಡೆಯುತ್ತಿದ್ದಾರೆ. ಶಿಕ್ಷಣದ ಗುಣಮಟ್ಟವನ್ನು ನಿರಂತರವಾಗಿ ಸುಧಾರಿಸಲು ಸರ್ಕಾರ ಬದ್ಧವಾಗಿದೆ.
ಪ್ರಶ್ನೆ: ಮಹಿಳಾ ಮೀಸಲಾತಿ ವಿಚಾರದಲ್ಲಿ ವಿರೋಧ ಪಕ್ಷಗಳ ಪಾತ್ರವನ್ನು ಹೇಗೆ ನೋಡುತ್ತೀರಿ?
ರಜನಿ ತಿವಾರಿ: ದೇಶದ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ದ್ವಿಮುಖ ನಿಲುವನ್ನು ಇಡೀ ದೇಶ ನೋಡಿದೆ. ಐತಿಹಾಸಿಕ 'ನಾರಿ ಶಕ್ತಿ ವಂದನ ಅಧಿನಿಯಮ'ವನ್ನು ಸಂಸತ್ತಿನಲ್ಲಿ ಮಂಡಿಸಿದಾಗ, ಶಾಸನ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುವುದನ್ನು ತಡೆಯಲು ವಿರೋಧ ಪಕ್ಷಗಳು ಹೇಗೆ ಪ್ರಯತ್ನಿಸಿದವು ಎಂಬುದು ಎಲ್ಲರಿಗೂ ತಿಳಿದಿದೆ.
ವಿರೋಧ ಪಕ್ಷಗಳ ನಾಯಕರು ವೇದಿಕೆಗಳಲ್ಲಿ ನಿಂತು ಮಹಿಳೆಯರ ಹಿತೈಷಿಗಳಂತೆ ವರ್ತಿಸುತ್ತಾರೆ. ಆದರೆ ಮಹಿಳೆಯರಿಗೆ ಹಕ್ಕುಗಳನ್ನು ನೀಡುವ ಮತ್ತು ನೀತಿಗಳನ್ನು ರೂಪಿಸುವ ಸಮಯ ಬಂದಾಗ ವಿರೋಧಕ್ಕೆ ನಿಲ್ಲುತ್ತಾರೆ. ಅವರು ಕೇವಲ ಮತಬ್ಯಾಂಕ್ಗಾಗಿ ಮಹಿಳೆಯರ ಪರ ಮಾತನಾಡುತ್ತಾರೆ. ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭ ಬಂದಾಗ ಹಿಂದೆ ಸರಿಯುತ್ತಾರೆ. ವಿರೋಧ ಪಕ್ಷಗಳ ಈ ಅವಕಾಶವಾದಿ ಮತ್ತು ದ್ವಿಮುಖ ನಿಲುವನ್ನು ದೇಶದ ಮಹಿಳೆಯರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ.
ಪ್ರಶ್ನೆ: ಸಮಾಜವಾದಿ ಪಕ್ಷದ 'ಪಿಡಿಎ' ಸೂತ್ರವನ್ನು ಎದುರಿಸಲು ನಿಮ್ಮ ಕಾರ್ಯತಂತ್ರವೇನು?
ರಜನಿ ತಿವಾರಿ: ವಿರೋಧ ಪಕ್ಷಗಳು ತಮ್ಮ ಘೋಷಣೆಗಳ ವಿಚಾರದಲ್ಲೇ ಗೊಂದಲದಲ್ಲಿವೆ. ಕೆಲವೊಮ್ಮೆ 'ಪಿ' ಎಂದರೆ ಹಿಂದುಳಿದವರು ಎಂದು ಹೇಳುತ್ತಾರೆ. ಮತ್ತೊಮ್ಮೆ ಪಂಡಿತರು ಎಂದು ಹೇಳುತ್ತಾರೆ. ಹೀಗೆ ಸಂದರ್ಭಕ್ಕೆ ತಕ್ಕಂತೆ ಅರ್ಥಗಳನ್ನು ಬದಲಾಯಿಸುತ್ತಾರೆ. ಅವರಿಗೆ ಸ್ಪಷ್ಟವಾದ ಸಿದ್ಧಾಂತವಾಗಲಿ, ನೀತಿಯಾಗಲಿ, ದೂರದೃಷ್ಟಿಯಾಗಲಿ ಇಲ್ಲ.
ಭಾರತೀಯ ಜನತಾ ಪಕ್ಷವು ಎಲ್ಲ ಸಮಾಜವರ್ಗಗಳನ್ನೂ ಒಳಗೊಂಡ ಪಕ್ಷವಾಗಿದೆ. ಯಾವುದೇ ತುಷ್ಟೀಕರಣವಿಲ್ಲದೆ ಪ್ರತಿಯೊಂದು ವರ್ಗದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದೆ. ಜನರು ಬಹಳ ಜಾಗೃತರಾಗಿದ್ದಾರೆ. ಒಮ್ಮೆ ಜನರನ್ನು ದಾರಿ ತಪ್ಪಿಸಬಹುದು, ಆದರೆ ಪದೇಪದೇ ಸಾಧ್ಯವಿಲ್ಲ. ಮರದ ಮಡಕೆಯನ್ನು ಪದೇಪದೇ ಒಲೆಯ ಮೇಲಿಡಲು ಸಾಧ್ಯವಿಲ್ಲ ಎಂಬ ಗಾದೆಯಂತೆ, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಅವರ ಅಭಿವೃದ್ಧಿ ಕಾರ್ಯಗಳ ಎದುರು ವಿರೋಧ ಪಕ್ಷಗಳ ಬಳಿ ಯಾವುದೇ ಗಟ್ಟಿಯಾದ ಚುನಾವಣಾ ವಿಷಯ ಉಳಿದಿಲ್ಲ.
ಪ್ರಶ್ನೆ: ಅಧಿಕಾರ ಮತ್ತು ಪಕ್ಷದ ಸಂಘಟನೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಬಲಪಡಿಸಲು ಸರ್ಕಾರ ಏನು ಮಾಡುತ್ತಿದೆ?
ರಜನಿ ತಿವಾರಿ: ಭಾರತೀಯ ಜನತಾ ಪಕ್ಷದಲ್ಲಿ ಮಹಿಳಾ ಶಕ್ತಿಯ ಗೌರವಕ್ಕೆ ಅತ್ಯುನ್ನತ ಸ್ಥಾನವಿದೆ. ಸಮಾಜ ಮತ್ತು ರಾಷ್ಟ್ರದ ಸಮಗ್ರ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಮಹಿಳೆಯರ ಸಕ್ರಿಯ ಹಾಗೂ ಸಮಾನ ಪಾಲ್ಗೊಳ್ಳುವಿಕೆ ಅಗತ್ಯ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಖಚಿತಪಡಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಐತಿಹಾಸಿಕ ದಿಕ್ಕು ನೀಡಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಸ್ವಸಹಾಯ ಗುಂಪುಗಳು ಮತ್ತು ವಿವಿಧ ಯೋಜನೆಗಳ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ.
ಪ್ರಶ್ನೆ: ಶಹಾಬಾದ್ ಕ್ಷೇತ್ರದ ಪ್ರಮುಖ ಅಭಿವೃದ್ಧಿ ಕಾರ್ಯಗಳು ಮತ್ತು ನಿಮ್ಮ ಕನಸಿನ ಯೋಜನೆಗಳು ಯಾವುವು?
ರಜನಿ ತಿವಾರಿ: ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರು ಮುಂದಿಟ್ಟ ಬೇಡಿಕೆಗಳನ್ನು ಆದ್ಯತೆಯ ಆಧಾರದಲ್ಲಿ ಈಡೇರಿಸಿದ್ದೇವೆ. ಕ್ಷೇತ್ರದಲ್ಲಿ ಈಡೇರಿಸದೆ ಉಳಿದಿರುವ ಯಾವುದೇ ಪ್ರಮುಖ ಭರವಸೆ ಇಲ್ಲ.
ಆಂಝಿ-ಶಹಾಬಾದ್ ರೈಲ್ವೆ ಮೇಲ್ಸೇತುವೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದೇವೆ. ಶಹಾಬಾದ್-ಪಿಹಾನಿ, ಶಹಾಬಾದ್-ಸಾಂಡಿ ಮತ್ತು ಪಾಲಿ-ಅನಂಗಪುರ ಸೇರಿದಂತೆ ಹಲವು ಪ್ರಮುಖ ಸಂಪರ್ಕ ರಸ್ತೆಗಳನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ನನ್ನ ಶಾಸಕರ ನಿಧಿಯಿಂದ ಆಮ್ಲಜನಕ ಉತ್ಪಾದನಾ ಘಟಕದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದಲ್ಲಿ ಆಧುನಿಕ ರಸ್ತೆ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಮುನ್ಸಿಫ್ ನ್ಯಾಯಾಲಯ ಸ್ಥಾಪನೆಗೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲಾಗಿದೆ. ಕ್ಷೇತ್ರದಲ್ಲಿ ಹೊಸ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಹೆಣ್ಣುಮಕ್ಕಳಿಗಾಗಿ ಸರ್ಕಾರಿ ಮಹಿಳಾ ಪದವಿ ಕಾಲೇಜು ನಿರ್ಮಿಸಲಾಗಿದೆ.
ಇದೀಗ ಶಹಾಬಾದ್ನಲ್ಲಿ ಅತ್ಯಾಧುನಿಕ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವುದು ನಮ್ಮ ಮುಂದಿನ ಪ್ರಮುಖ ಸಂಕಲ್ಪವಾಗಿದೆ. ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಖಂಡಿತವಾಗಿ ಈಡೇರಿಸುತ್ತೇವೆ.
ಪ್ರಶ್ನೆ: ದೀರ್ಘಕಾಲದ ಪ್ರಾತಿನಿಧ್ಯದ ಹಿನ್ನೆಲೆಯಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗುವ ಸಾಧ್ಯತೆಯನ್ನು ಹೇಗೆ ನೋಡುತ್ತೀರಿ?
ರಜನಿ ತಿವಾರಿ: ಆಡಳಿತ ವಿರೋಧಿ ಅಲೆಯ ಬಗ್ಗೆ ಮಾತನಾಡುವುದನ್ನು ಕೇಳಿದಾಗ ನನಗೆ ಆಶ್ಚರ್ಯವಾಗುತ್ತದೆ. ಸುಮಾರು ಎರಡು ದಶಕಗಳ ರಾಜಕೀಯ ಪಯಣದ ಬಳಿಕವೂ ನಮ್ಮ ಕ್ಷೇತ್ರದಲ್ಲಿ ಅಂತಹ ಯಾವುದೇ ಅಲೆ ಇಲ್ಲ. ಇದಕ್ಕೆ ನೇರ ಕಾರಣವೆಂದರೆ ನಾವು ಜನಪ್ರತಿನಿಧಿಗಳಾಗಿ ಮಾತ್ರವಲ್ಲ, ಅವರ ಕುಟುಂಬದ ಸದಸ್ಯರಂತೆ ಜನರೊಂದಿಗೆ ಬೆರೆತು ಬದುಕುತ್ತಿದ್ದೇವೆ.
ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ ಬಲಿಷ್ಠ ನಾಯಕತ್ವ ಮತ್ತು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಅವರ ಉತ್ತಮ ಆಡಳಿತ ನೀತಿ ನಮ್ಮೊಂದಿಗಿದೆ. ಜನರು ಈ ಅಭಿವೃದ್ಧಿ ನೀತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ. ನಾವೆಲ್ಲರೂ ಒಂದೇ ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ.
ಪ್ರಶ್ನೆ: ಗ್ರಾಮೀಣ ಪ್ರದೇಶದ ಜನರು ಸ್ಥಳೀಯ ಮಟ್ಟದಲ್ಲಿ ಬದಲಾವಣೆ ಬಯಸುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ರಜನಿ ತಿವಾರಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿರೋಧ ಪಕ್ಷಗಳ ಬಳಿ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ಬಿಟ್ಟರೆ ಬೇರೆ ಆಯ್ಕೆಯಿಲ್ಲ. ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಜನರು ಅವರ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಅವರ ರಾಜಕೀಯ ನೆಲೆ ಕುಸಿದಿದೆ. ಚುನಾವಣೆಯಲ್ಲಿ ಸೋತ ಬಳಿಕ ಜನರ ಮುಂದೆ ಯಾವ ನೆಪ ಹೇಳಬೇಕು ಎಂಬುದರ ಬಗ್ಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಪಕ್ಷವು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಜನಸೇವೆಯ ಕಾರ್ಯಸೂಚಿಗೆ ಬದ್ಧವಾಗಿದೆ.
ಪ್ರಶ್ನೆ: ಮುಂಬರುವ ಚುನಾವಣೆಯಲ್ಲಿ ಜನರಿಗೆ ಉತ್ತರಿಸಬೇಕಾದ ಯಾವುದೇ ಭರವಸೆ ಇನ್ನೂ ಬಾಕಿ ಉಳಿದಿದೆಯೇ?
ರಜನಿ ತಿವಾರಿ: ಜನರಿಗೆ ನೀಡಿದ್ದ ಎಲ್ಲ ಪ್ರಮುಖ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಆದರೆ ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಜನರ ಅಗತ್ಯಗಳು ಎಂದಿಗೂ ಮುಗಿಯುವುದಿಲ್ಲ. ನಾವು ನಮ್ಮ ಮನೆಯನ್ನು ನಿರಂತರವಾಗಿ ಸುಂದರಗೊಳಿಸಿ, ವ್ಯವಸ್ಥಿತವಾಗಿ ಇಟ್ಟುಕೊಳ್ಳುವಂತೆ ಇಡೀ ವಿಧಾನಸಭಾ ಕ್ಷೇತ್ರವನ್ನು ನಮ್ಮ ಕುಟುಂಬವೆಂದು ಪರಿಗಣಿಸುತ್ತೇವೆ.
ಕ್ಷೇತ್ರದಲ್ಲಿ ವ್ಯಾಪಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಆದರೂ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಸಮೃದ್ಧಗೊಳಿಸುವ ಸಂಕಲ್ಪ ಸದಾ ಇರಲಿದೆ. ಅಭಿವೃದ್ಧಿಯ ವೇಗ ಎಂದಿಗೂ ನಿಲ್ಲುವುದಿಲ್ಲ. ಬಿಜೆಪಿ ಮತ್ತು ನಾವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್' ಎಂಬ ಮೂಲಮಂತ್ರದಡಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಭೇದಭಾವವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಸಮಾಜದ ಎಲ್ಲ ವರ್ಗಗಳನ್ನೂ ಜೊತೆಯಲ್ಲಿ ಕರೆದೊಯ್ಯುತ್ತಿದ್ದೇವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.