
ಬಳ್ಳಾರಿ, 15 ಅಕ್ಟೋಬರ್ (ಹಿ.ಸ.)
ಮೇಲಧಿಕಾರಿಗಳ ಅನುಮತಿಯಿಲ್ಲದೆ ಮತ್ತು ಶಾಲೆಗೆ ಯಾವುದೇ ಮಾಹಿತಿ ನೀಡದೆ ದೀರ್ಘಕಾಲದಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿರುವ ಶಿಕ್ಷಕಿಯೊಬ್ಬರಿಗೆ ಬಳ್ಳಾರಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.
ಸಂಡೂರು ತಾಲೂಕಿನ ಯು ರಾಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಿ.ಪಿ.ಟಿ. ಶಿಕ್ಷಕಿ ಶಿಲ್ಪ.ಕೆ ಅವರು 23/06/2021 ರಿಂದ ಕರ್ತವ್ಯಕ್ಕೆ ಹಾಜರಾಗದೆ ಅನಧಿಕೃತವಾಗಿ ಗೈರುಹಾಜರಾಗಿದ್ದಾರೆ. 18/12/2021, 07/08/2023 ಹಾಗೂ 23/09/2024 ರಂದು ಅವರಿಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಿದ್ದರೂ, ಅವರು ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ.
ನೋಟಿಸ್ ಹಾಗೂ ಪ್ರಕಟಣೆಗಳ ಮೂಲಕ ಕರ್ತವ್ಯಕ್ಕೆ ಮರಳಲು ಸಾಕಷ್ಟು ಅವಕಾಶ ನೀಡಲಾಗಿದ್ದರೂ ಶಿಕ್ಷಕಿ ಗೈರುಹಾಜರಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಈ ಅಂತಿಮ ಪ್ರಕಟಣೆ ಹೊರಡಿಸಲಾಗಿದೆ. ಪ್ರಕಟಣೆ ಪ್ರಕಟವಾದ 7 ದಿನಗಳ ಒಳಗಾಗಿ ಬಳ್ಳಾರಿಯ ಶಾಲಾ ಶಿಕ್ಷಣ ಇಲಾಖೆಯ ಶಿಸ್ತುಪ್ರಾಧಿಕಾರಿ ಹಾಗೂ ಉಪನಿರ್ದೇಶಕರ (ಆಡಳಿತ) ಕಚೇರಿಗೆ ಖುದ್ದಾಗಿ ಹಾಜರಾಗಿ ರಕ್ಷಣಾ ಹೇಳಿಕೆಯನ್ನು ಸಲ್ಲಿಸಬೇಕು.
ತಪ್ಪಿದಲ್ಲಿ, ಅವರ ಹೇಳಿಕೆಯೇನೂ ಇಲ್ಲವೆಂದು ಭಾವಿಸಿ ಏಕಪಕ್ಷೀಯವಾಗಿ ಸರ್ಕಾರದ ಆದೇಶ ಹಾಗೂ ಸಿ.ಸಿ.ಎ 1957ರ ನಿಯಮಗಳ ಭಾಗ-4, ನಿಯಮ 8ರ ಉಪನಿಯಮ (8) ರನ್ವಯ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಶಿಸ್ತುಪ್ರಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್