


ಬಳ್ಳಾರಿ, 15 ಅಕ್ಟೋಬರ್ (ಹಿ.ಸ.)
ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು, ಅಕ್ರಮ ಮದ್ಯ ಮಾರಾಟ, ಮಾದಕ ದ್ರವ್ಯ ಹಾಗೂ ಅನುಮಾನಾಸ್ಪದ ರಾಸಾಯನಿಕ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
*ಗಾಂಜಾ ಪ್ರಕರಣಗಳ ಪತ್ತೆ ಹಾಗೂ ಕಾರ್ಯಾಚರಣೆ:*
ಅಬಕಾರಿ ಇಲಾಖೆಯ ವರದಿಯ ಪ್ರಕಾರ, ಜನವರಿಯಿಂದ ಈವರೆಗೆ ಎನ್ಡಿಪಿಎಸ್ ಕಾಯ್ದೆಯಡಿ 10 ಪ್ರಕರಣಗಳು ದಾಖಲಾಗಿದ್ದು, ಒಟ್ಟು 14.150 ಕೆ.ಜಿ. ಒಣ ಗಾಂಜಾ ಹಾಗೂ 5 ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲೆಯ ಸಂಡೂರು ಮತ್ತು ಬಳ್ಳಾರಿ ತಾಲೂಕುಗಳಲ್ಲಿ ಗಾಂಜಾ ಪತ್ತೆ ಪ್ರಮಾಣ ಹೆಚ್ಚಾಗಿದ್ದು, ಸಿರುಗುಪ್ಪ ಭಾಗದಲ್ಲಿ ಹಿಂದಿನ ವರ್ಷಗಳಲ್ಲಿ ಗಾಂಜಾ ಬೆಳೆ ಪತ್ತೆಯಾಗಿದ್ದರೂ, ಈ ಬಾರಿ ನಿರಂತರ ಜಾಗೃತಿಯಿಂದಾಗಿ ನಿಯಂತ್ರಣದಲ್ಲಿದೆ. ಗಾಂಜಾ ಸೇವನೆ ಮಾಡುತ್ತಿರುವವರಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ 20ರ ಆಸುಪಾಸಿನ ಯುವಕರೇ ಹೆಚ್ಚಾಗಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದರು.
*ಕಲಬೆರಕೆ ಸೇಂದಿ ಮತ್ತು ನೆರೆರಾಜ್ಯದಿಂದ ಅಕ್ರಮ ಸಾಗಾಟ:*
ಆಂಧ್ರಪ್ರದೇಶದ ಗಡಿ ಭಾಗದಿಂದ ಜಿಲ್ಲೆಗೆ ಅಕ್ರಮವಾಗಿ ಕಲಬೆರಕೆ ಸೇಂದಿ ಸರಬರಾಜಾಗುತ್ತಿದೆ. ಜಪ್ತಿ ಮಾಡಲಾದ ಸೇಂದಿ ಮಾದರಿಗಳಲ್ಲಿ ನಿಷೇಧಿತ ‘ಕ್ಲೋರಾಲ್ ಹೈಡ್ರೇಟ್’ ಅಂಶ ಇರುವುದು ಲ್ಯಾಬ್ ವರದಿಗಳಲ್ಲಿ ದೃಢಪಟ್ಟಿದೆ. ಪ್ರಸಕ್ತ ಸಾಲಿನಲ್ಲಿ 61 ಪ್ರಕರಣಗಳನ್ನು ದಾಖಲಿಸಿ, 46 ದ್ವಿಚಕ್ರ ವಾಹನಗಳು ಹಾಗೂ ಸುಮಾರು 950 ಲೀಟರ್ ಕಲಬೆರಕೆ ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದೆ. ಗಡಿಭಾಗದಲ್ಲಿ ಸೂಕ್ತ ಬೆಂಬಲ ಸಿಗದ ಕಾರಣ, ಆಂಧ್ರಪ್ರದೇಶದ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಿ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ತಿಳಿಸಿದರು.
*ಅಂಚೆ ಮತ್ತು ಪಾರ್ಸೆಲ್ ಮೂಲಕ ಮಾದಕ ವಸ್ತು ರವಾನೆಗೆ ಕಣ್ಗಾವಲು:*
ಜಿಲ್ಲಾಧಿಕಾರಿಯವರು ಮಾತನಾಡಿ, ಅಂಚೆ ಇಲಾಖೆಯ ಮೂಲಕ ಅನುಮಾನಾಸ್ಪದ ಪಾರ್ಸೆಲ್ಗಳು ರವಾನೆಯಾಗುವುದನ್ನು ತಡೆಯಲು ನಿಯಮಗಳನ್ನು ಬಿಗಿಗೊಳಿಸಬೇಕು. ಒಂದೇ ವ್ಯಕ್ತಿಗೆ ಅಥವಾ ಒಂದೇ ವಿಳಾಸಕ್ಕೆ ಪದೇಪದೇ ಬರುವ ಪಾರ್ಸೆಲ್ಗಳ ಕುರಿತು ಮಾಹಿತಿ ಕಲೆಹಾಕಲು ಸೂಚಿಸಲಾಯಿತು. ಯಾವುದೇ ಕಾರಣಕ್ಕೂ ಪಾರ್ಸೆಲ್ಗಳನ್ನು ರಸ್ತೆಬದಿಯಲ್ಲಾಗಲಿ ಅಥವಾ ಹೊರಗಡೆ ನೀಡದೆ, ಕೇವಲ ನಿಗದಿತ ವಿಳಾಸದ ಮನೆಬಾಗಿಲಿಗೆ ಮಾತ್ರ ತಲುಪಿಸಬೇಕು ಎಂದು ಸೂಚಿಸಿದರು.
ವಿದೇಶಗಳಿಂದ ಅಥವಾ ಬೇರೆ ಪ್ರದೇಶಗಳಿಂದ ಬರುವ ಅನುಮಾನಾಸ್ಪದ ಮತ್ತು ಹಾನಿಗೊಳಗಾದ ಪಾರ್ಸೆಲ್ಗಳನ್ನು ನೇರವಾಗಿ ವಿಳಾಸದಾರರ ಸಮ್ಮುಖದಲ್ಲೇ ಅಂಚೆ ಕಚೇರಿಯಲ್ಲಿ ತೆರೆಯುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಅಂಚೆ ಅಧಿಕಾರಿಗಳು ಸಭೆಗೆ ತಿಳಿಸಿದರು.
*ಅನಧಿಕೃತ ಮದ್ಯ ಮಾರಾಟ ತಡೆಗೆ ಖಡಕ್ ಸೂಚನೆ:*
ಗ್ರಾಮೀಣ ಭಾಗದ ಸಣ್ಣ ಪುಟ್ಟ ಅಂಗಡಿಗಳು, ಡಾಬಾಗಳು ಹಾಗೂ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಕುರಿತು ದೂರುಗಳು ಕೇಳಿಬಂದಿದ್ದು, ಅಬಕಾರಿ ಉಪ ನಿರೀಕ್ಷಕರು ಖುದ್ದು ಸ್ಥಳಗಳಿಗೆ ತೆರಳಿ ದಾಳಿ ನಡೆಸಿ, ಅಕ್ರಮ ತಾಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಪರವಾನಗಿ ಇಲ್ಲದ ಸ್ಥಳಗಳನ್ನು ಸೀಜ್ ಮಾಡಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದರು.
*ಬುಡಕಟ್ಟು ಸಮುದಾಯಗಳ ಪುನರ್ವಸತಿ ಮತ್ತು ಜಾಗೃತಿ:*
ಹಕ್ಕಿ-ಪಿಕ್ಕಿ, ಶಿಖಾರಿ ಸೇರಿದಂತೆ ಅಲೆಮಾರಿ ಸಮುದಾಯಗಳು ಅಕ್ರಮ ಮದ್ಯ ತಯಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗದಂತೆ ಮನವೊಲಿಸುವ ಕಾರ್ಯ ಮಾಡಬೇಕು. ಈಗಾಗಲೇ ಹಲವರನ್ನು ಇಂತಹ ಕೆಲಸಗಳಿಂದ ಮುಕ್ತಗೊಳಿಸಲು ಪ್ರಯತ್ನಿಸಲಾಗಿದ್ದು, ಅವರಿಗೆ ಪರ್ಯಾಯ ಉದ್ಯೋಗಾವಕಾಶ, ಕೃಷಿ ಭೂಮಿ ಹಂಚಿಕೆ ಹಾಗೂ ಸರ್ಕಾರಿ ಯೋಜನೆಗಳನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದರು.
*ಮೆಥನಾಲ್ ಸಾಗಣೆ ಹಾಗೂ ದುರುಪಯೋಗಕ್ಕೆ ತಡೆ:*
ಆಂಧ್ರಪ್ರದೇಶ ಗಡಿಯಿಂದ ಬರುವ ಮೆಥನಾಲ್ ದುರ್ಬಳಕೆಯಾಗದಂತೆ ಮತ್ತು ಅಕ್ರಮ ಮದ್ಯ ತಯಾರಿಕೆಗೆ ಬಳಕೆಯಾಗದಂತೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗಳು ನಿಗಾ ಇರಿಸಿವೆ. ಯಾವುದೇ ಕಾರಣಕ್ಕೂ ಈ ರಾಸಾಯನಿಕಗಳು ಹೊರಗೆ ಸೋರಿಕೆಯಾಗದಂತೆ ಎಸ್ಕಾರ್ಟ್ ಮೂಲಕ ನಿಗಾವಹಿಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
*ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ:*
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮಾತನಾಡಿ, ಶಾಲಾ-ಕಾಲೇಜುಗಳು ಹಾಗೂ ಹಾಸ್ಟೆಲ್ಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ವ್ಯಾಪಕ ಜಾಗೃತಿ ಮೂಡಿಸಲು ಕ್ಯೂಆರ್ ಕೋಡ್ ಆಧಾರಿತ ವ್ಯವಸ್ಥೆ ರೂಪಿಸಿ ಪ್ರಚಾರ ಕೈಗೊಳ್ಳಬೇಕು. ರೈಲ್ವೆ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಮತ್ತು ಬಿಎಂಸಿಆರ್ಸಿ ಆಸ್ಪತ್ರೆ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರು, ಚಾಲಕರು ಮತ್ತು ನಿರ್ವಾಹಕರಲ್ಲಿ ಜಾಗೃತಿ ಮೂಡಿಸಬೇಕು. ಮುಂಬರುವ ದಿನಗಳಲ್ಲಿ ಇಂಜಿನಿಯರಿAಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿಯೂ ಈ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿಡಿಯೋ ಸಂವಾದದ ಮೂಲಕ ಎಲ್ಲಾ ತಾಲೂಕು ತಹಶೀಲ್ದಾರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್