



ತೆಕ್ಕಲಕೋಟೆ, 15 ಅಕ್ಟೋಬರ್ (ಹಿ.ಸ.)
ಬರಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಗುರುವಾರದಿಂದ ಆರಂಭವಾಗಿವೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ, ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ಮುಖಂಡರು ನಿರ್ಧರಿಸಿ ಪಕ್ಷವನ್ನು ಸಂಘಟಿಸುವ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರ ತೆಕ್ಕಲಕೋಟೆಯ ಮನೆಯಲ್ಲಿ ನಡೆದ ಪಕ್ಷದ ಮುಖಂಡರ - ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು. ಕಣದಲ್ಲಿ ಯಾರೇ ಸ್ಪರ್ಧಿಸಲಿ ಪಕ್ಷದ ಗೆಲುವು ಮುಖ್ಯ ಎನ್ನುವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು ಮೋಕ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಪಕ್ಷದ ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ. ಸ್ಥಳೀಯ ಚುನಾವಣೆಗಳು ಕಾರ್ಯಕರ್ತರ ಚುನಾವಣೆ ಆಗಿವೆ. ಗ್ರಾಮ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಗಮನಹರಿಸುವುದು ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸುವುದು ಸ್ಥಳೀಯ ಚುನಾವಣೆಯ ಯಶಸ್ಸಿನ ರಹಸ್ಯವಾಗಿವೆ ಎಂದರು.
ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷನಿಷ್ಠ ಕಾರ್ಯಕರ್ತರನ್ನು ಕಣಕ್ಕಿಳಿಸಲಾಗುತ್ತದೆ. ಕಾರಣ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು, ರೈತ ವಿರೋಧಿ ನೀತಿಗಳು, ತುಂಗಭದ್ರ ಜಲಾಶಯದಲ್ಲಿ ನೀರಿದ್ದರೂ ಕಾಲುವೆಗಳಿಗೆ ನೀರು ಹರಿಸದೇ ಇರುವ ಕುರಿತು ಜನರಿಗೆ ಅರ್ಥ ಮಾಡಿಸಿಕೊಡುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸಿರುಗುಪ್ಪ ತಾಲೂಕಿನ 07 ಜಿಲ್ಲಾ ಪಂಚಾಯಿತಿ, 24 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಆಗ್ರಹಿಸಿದರು.
ರೈತ ಮೋರ್ಚಾ ವೀರನಗೌಡ, ಮುಖಂಡರಾದ ಮರೇಗೌಡ, ತಿಮ್ಮಪ್ಪ, ಖಾಸಾಸಾಬ್, ಗಂಗಪ್ಪ, ಶರಣಬಸವ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್