
ವಿಜಯಪುರ, 15 ಅಕ್ಟೋಬರ್ (ಹಿ.ಸ.)
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಾರ್ವಜನಿಕವಾಗಿ ತಮ್ಮನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಈ ಕುರಿತು ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ಸ್ವಂತ ಬಲದಿಂದ ದುಡಿದು ಸಂಪಾದನೆ ಮಾಡಿದ್ದು, ಬಂಗಾರ ಧರಿಸುವುದು ತಪ್ಪೇನಲ್ಲ. ಆದರೆ ತಮ್ಮನ್ನು ಉದ್ದೇಶಿಸಿ ಅತ್ಯಂತ ಕೀಳುಮಟ್ಟದ ಪದಗಳನ್ನು ಬಳಸಿ ‘ಮಟಾಶ್ ಮಾಡುವೆ’ ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಮಹಾ ನಿರೀಕ್ಷಕರಿಗೆ ಪತ್ರ ಬರೆದು, ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ತಮ್ಮ ವಿರುದ್ಧ ಇಂತಹ ಹೇಳಿಕೆ ನೀಡಿರುವುದಕ್ಕೆ ತಾವು ಶಾಸಕರ ರಾಜಕೀಯ ಹಾಗೂ ಆಡಳಿತಾತ್ಮಕ ವಿಚಾರಗಳ ಕುರಿತು ಪ್ರಶ್ನೆಗಳನ್ನು ಎತ್ತುತ್ತಿರುವುದೇ ಕಾರಣ ಎಂದು ರಜಪೂತ ಆರೋಪಿಸಿದರು. “ನಾನು ಅವರ ನಕಲಿ ಹಿಂದೂತ್ವದ ಮುಖ ಹಾಗೂ ಭ್ರಷ್ಟಾಚಾರದ ಮುಖವನ್ನು ಬಯಲು ಮಾಡುತ್ತಿರುವುದರಿಂದಲೇ ನನ್ನ ವಿರುದ್ಧ ವೈಯಕ್ತಿಕವಾಗಿ ವಾಗ್ದಾಳಿ ನಡೆಸಲಾಗುತ್ತಿದೆ” ಎಂದು ಅವರು ದೂರಿದರು.
“ಅವರೇ ಹೇಳುವಂತೆ ನನ್ನ ಹಿಂದೆ ಯಾರೂ ಇಲ್ಲ. ಹೀಗಾಗಿ ನನಗೆ ಪೊಲೀಸ್ ರಕ್ಷಣೆ ನೀಡಬೇಕು. ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ರಜಪೂತ ಒತ್ತಾಯಿಸಿದರು.
ಗೋಶಾಲೆ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ
ಶಾಸಕ ಯತ್ನಾಳ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವ ರಜಪೂತ, ಗೋಶಾಲೆ ಹಾಗೂ ಲೀಜ್ಪಾರ್ಟಿ ವಿಚಾರದಲ್ಲಿ ಹಣದ ವ್ಯವಹಾರ ನಡೆದಿದೆ ಎಂದು ದೂರಿದರು.
ಗೋಶಾಲೆ ಹೆಸರಿನಲ್ಲಿ ಹಣ ಸಂಗ್ರಹಿಸುವುದನ್ನು ತಾವು ವಿರೋಧಿಸಿದ್ದಾಗಿ ಹೇಳಿದ ಅವರು, ಈ ಕುರಿತು ಪ್ರಶ್ನಿಸಿದಾಗ ತಮ್ಮ ವಿರುದ್ಧ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಲಾಗಿತ್ತು ಎಂದು ಆರೋಪಿಸಿದರು. ಗೋಮಾತೆಯ ಹೆಸರಿನಲ್ಲಿಯೂ ಹಣದ ದುರ್ಬಳಕೆ ನಡೆದಿದೆ ಎಂಬ ಆರೋಪವನ್ನು ಅವರು ಮಾಡಿದರು.
“ತಮ್ಮನ್ನು ಸತ್ಯ ಹರಿಶ್ಚಂದ್ರ ಎಂದು ಬಿಂಬಿಸಿಕೊಳ್ಳುವವರು ಮೊದಲು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಉತ್ತರ ನೀಡಬೇಕು. ಗೋಶಾಲೆ ವಿಚಾರದಲ್ಲಿ ನಡೆದಿರುವ ಹಣಕಾಸಿನ ವ್ಯವಹಾರಗಳ ಕುರಿತು ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ” ಎಂದು ರಜಪೂತ ಹೇಳಿದರು.
ನಗರದ ಮೂಲಸೌಕರ್ಯಗಳ ಬಗ್ಗೆ ವಾಗ್ದಾಳಿ
ವಿಜಯಪುರ ನಗರದ ರಸ್ತೆಗಳು, ಕುಡಿಯುವ ನೀರು ಹಾಗೂ ಅಂಡರ್ಗ್ರೌಂಡ್ ಕೇಬಲ್ ವ್ಯವಸ್ಥೆಯ ಕುರಿತು ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದರು.
“ಒಂದೆರೆಡು ರಸ್ತೆಗಳನ್ನು ಹೊರತುಪಡಿಸಿದರೆ ನಗರದ ಅನೇಕ ರಸ್ತೆಗಳ ಸ್ಥಿತಿ ಉತ್ತಮವಾಗಿಲ್ಲ. ಆಜಾದ್ ರಸ್ತೆಯ ಪರಿಸ್ಥಿತಿಯನ್ನು ಶಾಸಕರು ಒಮ್ಮೆ ಪರಿಶೀಲಿಸಬೇಕು. ಅಂಡರ್ಗ್ರೌಂಡ್ ಕೇಬಲ್ ವ್ಯವಸ್ಥೆ ಮರೀಚಿಕೆಯಾಗಿದೆ. ಹಲವೆಡೆ ವಿದ್ಯುತ್ ಹಾಗೂ ಇತರ ಕೇಬಲ್ಗಳು ಅಸ್ತವ್ಯಸ್ತವಾಗಿ ಜೋತಾಡುತ್ತಿವೆ. ನಗರದಲ್ಲಿ ನೀರಿನ ಸಮಸ್ಯೆಯೂ ಇದೆ. ಇಂತಹ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಬದಲು ವೈಯಕ್ತಿಕ ಟೀಕೆ ಹಾಗೂ ಬೈಗುಳಗಳಲ್ಲೇ ಸಮಯ ಕಳೆಯಲಾಗುತ್ತಿದೆ” ಎಂದು ಅವರು ಟೀಕಿಸಿದರು.
ಜೆಸಿಬಿ ರಚನೆ ಕುರಿತು ಪ್ರಶ್ನೆ
ಶಾಸಕರ ರಾಜಕೀಯ ಸಂಘಟನೆ ಕುರಿತೂ ಪ್ರಶ್ನಿಸಿದ ರಜಪೂತ, ಗಣೇಶೋತ್ಸವ ಸಂದರ್ಭದಲ್ಲಿ ಹೊಸ ರಾಜಕೀಯ ವೇದಿಕೆ ಅಥವಾ ಸಂಘಟನೆ ಕುರಿತು ಘೋಷಣೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ದಸರಾ ಹಬ್ಬ ಬಂದರೂ ಆ ಕುರಿತು ಸ್ಪಷ್ಟ ಘೋಷಣೆ ಹೊರಬಂದಿಲ್ಲ ಎಂದು ಹೇಳಿದರು.
ಇನ್ನೂ ಅಧಿಕೃತವಾಗಿ ರಚನೆಯಾಗದ ಸಂಘಟನೆಗೆ ಅಭ್ಯರ್ಥಿಗಳನ್ನು ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಎಸ್ಐಟಿ ತನಿಖೆಗೆ ಆಗ್ರಹ:
ವಿಜಯಪುರದ ಎಲ್ಬಿಎಸ್ ಮಾರುಕಟ್ಟೆ ಪ್ರಾಂಗಣ ಹಾಗೂ ಜಲನಗರದಲ್ಲಿರುವ ವಾಣಿಜ್ಯ ಸಂಕೀರ್ಣಗಳ ಲೀಜ್ ನವೀಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ರಜಪೂತ ಮಾಡಿದರು.
ಈ ವ್ಯವಹಾರಗಳಲ್ಲಿ ನಗರ ಶಾಸಕರ ಪಾತ್ರವಿದೆ ಎಂಬ ತಮ್ಮ ಆರೋಪದ ಕುರಿತು ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
“ಎಲ್ಬಿಎಸ್ ಮಾರುಕಟ್ಟೆ ಪ್ರಾಂಗಣ ಮತ್ತು ಜಲನಗರದ ವಾಣಿಜ್ಯ ಸಂಕೀರ್ಣಗಳ ಲೀಜ್ ನವೀಕರಣದ ಕುರಿತು ಸಮಗ್ರ ಎಸ್ಐಟಿ ತನಿಖೆ ನಡೆದರೆ ಎಲ್ಲ ಸತ್ಯಾಂಶವೂ ಹೊರಬರಲಿದೆ. ದಾಖಲೆಗಳು ಹಾಗೂ ಹಣಕಾಸಿನ ವ್ಯವಹಾರಗಳನ್ನು ಪರಿಶೀಲಿಸಿದರೆ ವಾಸ್ತವ ಏನೆಂಬುದು ಸ್ಪಷ್ಟವಾಗುತ್ತದೆ” ಎಂದು ಅವರು ಹೇಳಿದರು.
ಯುವಕರಿಗೆ ಎಚ್ಚರಿಕೆ
ಶಾಸಕರ ರಾಜಕೀಯ ಹೋರಾಟದಲ್ಲಿ ಯುವಕರು ಕಾನೂನು ಪ್ರಕರಣಗಳಿಗೆ ಸಿಲುಕಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ರಜಪೂತ ಸಲಹೆ ನೀಡಿದರು.
“ಯುವಕರು ಯಾರದ್ದೋ ಮಾತು ಕೇಳಿ ಕೇಸು ಹಾಕಿಸಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು. ನಾವು ಅವರ ಹಿಂದೆ ಹೋಗಿ ಸಾಕಷ್ಟು ಹೈರಾಣಾಗಿದ್ದೇವೆ. ಕರೆ ನೀಡುವವರು ನಂತರ ಸ್ಥಳದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಿಂದಿನ ವಿಜಯೋತ್ಸವದ ಸಂದರ್ಭದಲ್ಲಿಯೂ ನಮ್ಮ ಮೇಲೆ ಪ್ರಕರಣಗಳು ದಾಖಲಾಗಿದ್ದವು. ನಂತರ ಅವರು ಕೊಲ್ಹಾಪುರಕ್ಕೆ ತೆರಳಿದ್ದರು” ಎಂದು ಆರೋಪಿಸಿದರು.
ತಂದೆಗೆ ಗೌರವ ನೀಡದ ವ್ಯಕ್ತಿಗೆ ವಿಜಯೇಂದ್ರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕುರಿತು ಶಾಸಕ ಯತ್ನಾಳ ಅವರು ಮಾಡುತ್ತಿರುವ ಟೀಕೆಗಳಿಗೂ ರಜಪೂತ ತೀವ್ರವಾಗಿ ಪ್ರತಿಕ್ರಿಯಿಸಿದರು.
“ತಮ್ಮ ತಂದೆಯವರ ಸೇವೆ ಹಾಗೂ ಗೌರವದ ವಿಚಾರದಲ್ಲಿ ನಗರ ಶಾಸಕರ ನಡೆ ಏನು ಎಂಬುದು ವಿಜಯಪುರದ ಜನರಿಗೆ ಗೊತ್ತಿದೆ. ಯಡಿಯೂರಪ್ಪ ಅವರನ್ನು ಬಿ.ವೈ. ವಿಜಯೇಂದ್ರ ಹಾಗೂ ಬಿ.ವೈ. ರಾಘವೇಂದ್ರ ಅವರು ಯಾವ ರೀತಿಯಲ್ಲಿ ಗೌರವದಿಂದ ನಡೆಸಿಕೊಳ್ಳುತ್ತಾರೆ ಎಂಬುದೂ ನಾಡಿನ ಜನತೆಗೆ ತಿಳಿದಿದೆ. ಹೀಗಿರುವಾಗ ವಿಜಯೇಂದ್ರ ಅವರಿಗೆ ಯತ್ನಾಳರಿಂದ ಪಾಠದ ಅಗತ್ಯವಿಲ್ಲ” ಎಂದು ಅವರು ಹೇಳಿದರು.
ಈ ವೇಳೆ ಯತ್ನಾಳ ಕುಟುಂಬದ ವೈಯಕ್ತಿಕ ವಿಚಾರಗಳ ಕುರಿತು ಕೂಡ ರಜಪೂತ ಆರೋಪಗಳನ್ನು ಮಾಡಿದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿದರು.
ಗಾಣಿಗ ಸಮಾಜದ ಬಗ್ಗೆ ಶಾಸಕ ಯತ್ನಾಳರಿಂದ ಅಗೌರವ:
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಮುಖಂಡ ನಂದು ಗಡಗಿ, ಗಾಣಿಗ ಸಮುದಾಯದ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅಗೌರವದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.
“ಒಬ್ಬ ವ್ಯಕ್ತಿ ಹೋದರೆ ಏನಾಗುತ್ತದೆ ಎಂಬ ರೀತಿಯಲ್ಲಿ ಸಮಾಜವನ್ನು ಕೀಳಾಗಿ ಕಾಣುವ ಹೇಳಿಕೆ ನೀಡಿರುವುದು ಅಕ್ಷಮ್ಯ. ಒಂದು ಸಮುದಾಯದ ಕುರಿತು ಸಾರ್ವಜನಿಕವಾಗಿ ಈ ರೀತಿಯ ಪದಪ್ರಯೋಗ ಮಾಡುವುದು ಸರಿಯಲ್ಲ. ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಯಾರೇ ನೀಡಿದರೂ ನಾವು ಖಂಡಿಸುತ್ತೇವೆ” ಎಂದು ಗಡಗಿ ಹೇಳಿದರು.
ಹಿಂದೆ ಶಾಸಕ ಯತ್ನಾಳ ಅವರ ವಿರುದ್ಧ ಕೆಲವು ಮುಖಂಡರು ಮಾತನಾಡಿದಾಗ ಅವರ ಬೆಂಬಲಿಗರು ಮೌನವಾಗಿದ್ದರು. ಆದರೆ ತಾವು ಅಂದೇ ಆ ವಿಚಾರವನ್ನು ವಿರೋಧಿಸಿದ್ದೆ ಎಂದು ಹೇಳಿದ ಅವರು, ಈಗ ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ವರ್ತನೆಯನ್ನೂ ಪ್ರಶ್ನಿಸಿದರು.“ಯುವಕರು ಹಾಗೂ ಹಿಂದೂ ಸಮಾಜದ ಹೆಸರಿನಲ್ಲಿ ರಾಜಕೀಯ ಮಾಡುವವರು ಮೊದಲು ಯುವಕರ ಭವಿಷ್ಯದ ಬಗ್ಗೆ ಯೋಚಿಸಬೇಕು. ಯುವಕರನ್ನು ದಾರಿ ತಪ್ಪಿಸುವ ಕೆಲಸವಾಗಬಾರದು” ಎಂದು ಅವರು ಹೇಳಿದರು.
ಶಾಸಕರ ಸುತ್ತಮುತ್ತ ಕಮಿಷನ್ ಏಜೆಂಟರು ಇದ್ದಾರೆ ಎಂಬ ಆರೋಪವನ್ನೂ ಗಡಗಿ ಮಾಡಿದರು. ಈ ಆರೋಪಗಳ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande