ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಕರ್ನಾಟಕ ಪೊಲೀಸ್ ಮೋಟಾರ್ಸೈಕಲ್ ರ್ಯಾಲಿ
ಬೆಂಗಳೂರು: ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ವಿಧಾನಸೌಧದಲ್ಲಿ ರ್ಯಾಲಿಗೆ ಚಾಲನೆ
Karnataka-Police-Motorcycle-Rally-for-Drug-Free-India-National-Unity-Day-2026


ಬೆಂಗಳೂರು, 15 ಅಕ್ಟೋಬರ್ (ಹಿ.ಸ.):

ರಾಷ್ಟ್ರೀಯ ಏಕತಾ ದಿವಸ್–2026ರ ಉಪಕ್ರಮದ ಭಾಗವಾಗಿ, ಮಾದಕ ವಸ್ತುಗಳ ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಇಲಾಖೆಯ ರಾಷ್ಟ್ರೀಯ ಮೋಟಾರ್ಸೈಕಲ್ ರ್ಯಾಲಿಗೆ ಅಕ್ಟೋಬರ್ 15ರಂದು ವಿಧಾನಸೌಧದಲ್ಲಿ ಚಾಲನೆ ನೀಡಲಾಯಿತು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರ್ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ (ಡಿಜಿ ಮತ್ತು ಐಜಿಪಿ) ಡಾ. ಎಂ. ಎ. ಸಲೀಂ, ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ಕಟಾರಿಯಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ನಗರ ಪೊಲೀಸ್, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್ಪಿ), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಸೇರಿದಂತೆ ವಿವಿಧ ಪೊಲೀಸ್ ಘಟಕಗಳನ್ನು ಪ್ರತಿನಿಧಿಸುವ ಕರ್ನಾಟಕದ 200 ಪೊಲೀಸ್ ಸಿಬ್ಬಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಇವರೊಂದಿಗೆ 'ಬೈಕರ್ಸ್ ಯೂನಿಟಿ ಕಾಲ್ಸ್ ಇಂಡಿಯಾ' ಸಂಸ್ಥೆಯ ಸದಸ್ಯರೂ ಭಾಗವಹಿಸಿದ್ದಾರೆ.

ಮಾದಕ ವಸ್ತುಗಳ ವಿರುದ್ಧ ಜಾಗೃತಿ

ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸುವುದು ರ್ಯಾಲಿಯ ಪ್ರಮುಖ ಉದ್ದೇಶವಾಗಿದೆ. ಮಾದಕ ವಸ್ತುಗಳ ದುರ್ಬಳಕೆ ಹಾಗೂ ಕಳ್ಳಸಾಗಣೆಯಿಂದ ಉಂಟಾಗುವ ಅಪಾಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಯುವಜನತೆಯನ್ನು ಮಾದಕ ವಸ್ತುಗಳ ವ್ಯಸನದಿಂದ ರಕ್ಷಿಸುವುದು ಮತ್ತು ಸುರಕ್ಷಿತ, ಆರೋಗ್ಯಕರ ಹಾಗೂ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಭಾಗಿತ್ವವನ್ನು ಉತ್ತೇಜಿಸುವುದು ಈ ಅಭಿಯಾನದ ಆಶಯವಾಗಿದೆ.

ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಲು ಕರ್ನಾಟಕ ಪೊಲೀಸ್ ತಂಡವು ಗುಜರಾತ್ನ ಏಕ್ತಾ ನಗರದತ್ತ ಪ್ರಯಾಣ ಬೆಳೆಸಿದೆ. ಈ ರ್ಯಾಲಿಯು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದರ ಜೊತೆಗೆ ಮಾದಕ ವಸ್ತುಗಳ ನಿರ್ಮೂಲನೆಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ.

ಒಂದು ರಾಷ್ಟ್ರ, ಒಂದು ಅಭಿಯಾನ, ಮಾದಕ ವಸ್ತು ಮುಕ್ತ ಭವಿಷ್ಯ ಎಂಬ ಸಂದೇಶದೊಂದಿಗೆ ಕರ್ನಾಟಕ ಪೊಲೀಸ್ ಇಲಾಖೆ ರಾಷ್ಟ್ರೀಯ ಏಕತೆ ಮತ್ತು ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ತನ್ನ ಬದ್ಧತೆಯನ್ನು ಸಾರಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande