ಸಮಗ್ರ ನಗರ ರಸ್ತೆ ವಿನ್ಯಾಸ: ಜಿಬಿಎ ಎಂಜಿನಿಯರ್ಗಳಿಗೆ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರ
ಡಿಸೆಂಬರ್ ವೇಳೆಗೆ 150 ಎಂಜಿನಿಯರ್ಗಳಿಗೆ ತರಬೇತಿ ನೀಡುವ ಗುರಿ
GBA-Capacity-Building-Workshop-Integrated-Urban-Roads-Bengaluru


ಬೆಂಗಳೂರು, 15 ಅಕ್ಟೋಬರ್ (ಹಿ.ಸ.):

ಬೆಂಗಳೂರಿನಲ್ಲಿ ಸಮಗ್ರ, ಸುರಕ್ಷಿತ ಹಾಗೂ ಸುಗಮ ರಸ್ತೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಜನಾಗ್ರಹ ಮತ್ತು ಜನ ಅರ್ಬನ್ ಸ್ಪೇಸ್ ಫೌಂಡೇಶನ್ ಸಹಯೋಗದಲ್ಲಿ ಎಂಜಿನಿಯರ್ಗಳಿಗಾಗಿ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.

ಬೆಂಗಳೂರಿನ ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಹಾಗೂ ಜಿಬಿಎ ವ್ಯಾಪ್ತಿಯ ಎಂಜಿನಿಯರ್ಗಳ ತಾಂತ್ರಿಕ ಪರಿಣತಿಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಪ್ರಮಾಣಪತ್ರ ಆಧಾರಿತ ವಾರ್ಷಿಕ ತರಬೇತಿ ಕಾರ್ಯಕ್ರಮದಡಿ ತರಗತಿ ಬೋಧನೆ, ತಾಂತ್ರಿಕ ಮಾರ್ಗದರ್ಶನ, ಸ್ಥಳ ಪರಿಶೀಲನೆ ಹಾಗೂ ಪ್ರಾಯೋಗಿಕ ವಿನ್ಯಾಸ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.

ಸಮಗ್ರ ನಗರ ರಸ್ತೆ ವಿನ್ಯಾಸ ಮತ್ತು ಅನುಷ್ಠಾನ ವಿಷಯದ ಕುರಿತು ಅ.13 ಮತ್ತು 14ರಂದು ಮೊದಲ ಕಾರ್ಯಾಗಾರ ಹಾಗೂ ಅ.15 ಮತ್ತು 16ರಂದು ಮತ್ತೊಂದು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಮೂಲಕ 2026ರ ಡಿಸೆಂಬರ್ ವೇಳೆಗೆ ಒಟ್ಟು 150 ಎಂಜಿನಿಯರ್ಗಳಿಗೆ ತರಬೇತಿ ನೀಡುವ ಗುರಿಯನ್ನು ಜಿಬಿಎ ಹೊಂದಿದೆ.

ರಸ್ತೆ ಎಂಜಿನಿಯರಿಂಗ್ಗೆ ಸಂಬಂಧಿಸಿದ ವಿಶೇಷ ತರಬೇತಿ ಘಟಕಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮತ್ತು ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸಿಆರ್ಆರ್ಐ) ಸೇರಿದಂತೆ ಪ್ರಮುಖ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ನಗರ ರಸ್ತೆ ಯೋಜನೆ, ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಉತ್ತಮ ತಾಂತ್ರಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿದೆ.

ನಗರ ವಿನ್ಯಾಸ ತಜ್ಞ ಪ್ರಸನ್ನ ದೇಸಾಯಿ, ಮುಖ್ಯ ಎಂಜಿನಿಯರ್ (ಯೋಜನೆ ಮತ್ತು ಸಮನ್ವಯ) ಹೇಮಲತಾ, ಮುಖ್ಯ ಎಂಜಿನಿಯರ್ ಲೋಕೇಶ್ ಸೇರಿದಂತೆ ಬೆಂಗಳೂರಿನ ಐದು ನಗರ ಪಾಲಿಕೆಗಳ ಸಂಬಂಧಪಟ್ಟ ಎಂಜಿನಿಯರ್ಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಸಮಗ್ರ ರಸ್ತೆ ಅಭಿವೃದ್ಧಿಗೆ ಒತ್ತು

ನಗರದ ರಸ್ತೆಗಳನ್ನು ಹೆಚ್ಚು ಸುರಕ್ಷಿತ, ಸಮರ್ಥ ಹಾಗೂ ಸುಗಮವಾಗಿಸಲು ಎಂಜಿನಿಯರ್ಗಳ ತಾಂತ್ರಿಕ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕ ತರಬೇತಿ ಮತ್ತು ತಜ್ಞರ ಮಾರ್ಗದರ್ಶನಕ್ಕೆ ಆದ್ಯತೆ ನೀಡಲಾಗುತ್ತಿದೆ.

ಈ ಉಪಕ್ರಮದ ಮೂಲಕ ಬೆಂಗಳೂರಿನಲ್ಲಿ ಸಮಗ್ರ ನಗರ ರಸ್ತೆ ವಿನ್ಯಾಸ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಂಜಿನಿಯರ್ಗಳ ವೃತ್ತಿಪರ ಸಾಮರ್ಥ್ಯವನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande