ರೈತ ಗೀತೆ ಹಾಡಿ ರೈತ ಸಂತೆ ಆರಂಭಿಸಿದ ಅನ್ನದಾತರು
ಬಾಗಲಕೋಟೆ, 15 ಅಕ್ಟೋಬರ್ (ಹಿ.ಸ.) ರೈತರು ನೈಸರ್ಗಿಕವಾಗಿ ಬೆಳೆದ ತರಕಾರಿ ಸೇರಿದಂತೆ ವಿವಿಧ ಗೃಹಬಳಕೆಯ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಪ್ರತಿ ಗುರುವಾರ ನಡೆಯುವ ರೈತ ಸಂತೆ ಗಮನ ಸೆಳೆಯುತ್ತಿದೆ. ರೈತ ಸಂತೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ತಾಜಾ ತರಕಾರಿ, ಸೊಪ
ರೈತ ಸಂತೆ


ಬಾಗಲಕೋಟೆ, 15 ಅಕ್ಟೋಬರ್ (ಹಿ.ಸ.)

ರೈತರು ನೈಸರ್ಗಿಕವಾಗಿ ಬೆಳೆದ ತರಕಾರಿ ಸೇರಿದಂತೆ ವಿವಿಧ ಗೃಹಬಳಕೆಯ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಪ್ರತಿ ಗುರುವಾರ ನಡೆಯುವ ರೈತ ಸಂತೆ ಗಮನ ಸೆಳೆಯುತ್ತಿದೆ.

ರೈತ ಸಂತೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ತಾಜಾ ತರಕಾರಿ, ಸೊಪ್ಪು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳು ಹಾಗೂ ಗೃಹಬಳಕೆಯ ವಸ್ತುಗಳನ್ನು ಮಾರಾಟಕ್ಕೆ ತಂದರು. ಮಧ್ಯವರ್ತಿಗಳ ಹಾವಳಿಯಿಂದ ಮುಕ್ತವಾಗಿ ರೈತರಿಂದಲೇ ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳು ತಲುಪುವಂತಾಗಿರುವುದು ರೈತ ಸಂತೆ ವಿಶೇಷತೆಯಾಗಿದೆ.

ಸಂತೆ ಆರಂಭಕ್ಕೂ ಮುನ್ನ ರೈತರು ಒಗ್ಗೂಡಿ ರೈತ ಗೀತೆಯನ್ನು ಪ್ರಾರ್ಥಿಸಿ, ಸಾಂಪ್ರದಾಯಿಕವಾಗಿ ಮಾರಾಟಕ್ಕೆ ಚಾಲನೆ ನೀಡಿದರು. ರೈತರ ಶ್ರಮ, ಕೃಷಿಯ ಮಹತ್ವ ಹಾಗೂ ಅನ್ನದಾತರ ಗೌರವವನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು.

ಈ ಕುರಿತು ರೈತ ಸಹದೇವಪ್ಪ ಹಿಂದಿನಮನಿ ಮಾತನಾಡಿ, ನೈಸರ್ಗಿಕವಾಗಿ ಬೆಳೆದ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವುದು ರೈತ ಸಂತೆಯ ಪ್ರಮುಖ ಉದ್ದೇಶವಾಗಿದೆ. ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಪಡೆಯುವುದರ ಜೊತೆಗೆ ಗ್ರಾಹಕರಿಗೂ ತಾಜಾ ಹಾಗೂ ಗುಣಮಟ್ಟದ ವಸ್ತುಗಳು ದೊರೆಯುವಂತಾಗಬೇಕು ಎಂದು ಹೇಳಿದರು.

ಪ್ರತಿ ಗುರುವಾರ ನಡೆಯುವ ರೈತ ಸಂತೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅನ್ನದಾತರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.

ರೈತ ಗೀತೆಯೊಂದಿಗೆ ಸಂತೆ ಆರಂಭಿಸುವ ಮೂಲಕ ಕೃಷಿ ಮತ್ತು ರೈತರ ಶ್ರಮಕ್ಕೆ ಗೌರವ ಸಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ನೈಸರ್ಗಿಕ ಕೃಷಿ ಹಾಗೂ ಸ್ಥಳೀಯ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡಲಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande