ಹಬ್ಬದ ಹಿನ್ನೆಲೆ: ಸಿಹಿತಿಂಡಿ ತಯಾರಿಕಾ ಘಟಕಗಳ ಮೇಲೆ ಎಫ್ಎಸ್ಎಸ್ಎಐ ದಾಳಿ
ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು; ರಾಜ್ಯಾದ್ಯಂತ ವಿಶೇಷ ತಪಾಸಣಾ ಅಭಿಯಾನ
FSSAI-Raids-Sweets-Manufacturing-Units-Across-Karnataka-Ahead-of-Festivals


ಬೆಂಗಳೂರು, 15 ಅಕ್ಟೋಬರ್ (ಹಿ.ಸ.):

ಸಾಲುಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಸಿಹಿತಿಂಡಿಗಳು ದೊರೆಯುವುದನ್ನು ಖಚಿತಪಡಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ರಾಜ್ಯಾದ್ಯಂತ ಸಿಹಿತಿಂಡಿ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳ ಮೇಲೆ ವಿಶೇಷ ತಪಾಸಣಾ ಅಭಿಯಾನ ಕೈಗೊಂಡಿದೆ.

ದಸರಾ, ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಸಿಹಿತಿಂಡಿಗಳಿಗೆ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ, ತಯಾರಿಕಾ ಘಟಕಗಳ ಸ್ವಚ್ಛತೆ, ಬಳಸುವ ಕಚ್ಚಾ ಪದಾರ್ಥಗಳ ಗುಣಮಟ್ಟ, ಕೃತಕ ಬಣ್ಣಗಳ ಬಳಕೆ ಹಾಗೂ ಕಲಬೆರಕೆಯ ಕುರಿತು ಅಧಿಕಾರಿಗಳು ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಿದ್ದಾರೆ. ಆಹಾರ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ಅಗತ್ಯವಿದ್ದಲ್ಲಿ ಪರವಾನಗಿ ರದ್ದುಗೊಳಿಸುವ ಕ್ರಮವನ್ನೂ ಕೈಗೊಳ್ಳಲಾಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ ಈ ವಿಶೇಷ ತಪಾಸಣಾ ಅಭಿಯಾನ ಕೈಗೊಳ್ಳಲಾಗಿದೆ. ಹಬ್ಬಗಳ ಅವಧಿಯುದ್ದಕ್ಕೂ ಸಿಹಿತಿಂಡಿ ತಯಾರಿಕಾ ಘಟಕಗಳು ಮತ್ತು ಮಾರಾಟ ಮಳಿಗೆಗಳ ಮೇಲೆ ನಿಗಾ ಇರಿಸುವಂತೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ನಿಯಮ ಉಲ್ಲಂಘನೆಗೆ ಕಠಿಣ ಕ್ರಮ

ಸಿಹಿತಿಂಡಿಗಳ ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ಪದಾರ್ಥಗಳ ಬಳಕೆ, ನಿಷೇಧಿತ ಅಥವಾ ಅನುಮತಿ ಇಲ್ಲದ ಕೃತಕ ಬಣ್ಣಗಳ ಬಳಕೆ, ಕಲಬೆರಕೆ ಹಾಗೂ ನೈರ್ಮಲ್ಯದ ಕೊರತೆಯಂತಹ ಅಂಶಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಹಕರ ಆರೋಗ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದಂತೆ ತಪಾಸಣೆ ನಡೆಸಲು ನಿರ್ದೇಶನ ನೀಡಲಾಗಿದೆ.

ಸಾರ್ವಜನಿಕರಿಂದಲೂ ದೂರು ಸಲ್ಲಿಕೆಗೆ ಅವಕಾಶ

ಅಸ್ವಚ್ಛ ಆಹಾರ ಮಳಿಗೆಗಳು, ಸಿಹಿತಿಂಡಿಗಳಲ್ಲಿ ಕಲಬೆರಕೆ ಅಥವಾ ಕೃತಕ ಬಣ್ಣಗಳ ಬಳಕೆ ಕಂಡುಬಂದಲ್ಲಿ ಸಾರ್ವಜನಿಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೇರವಾಗಿ ದೂರು ದಾಖಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande