ತುಂಗಭದ್ರಾ ಕಾಲುವೆಗಳಿಗೆ ನೀರು ಹರಿಸಲು ಹಸಿರು ಸೇನೆ ಆಗ್ರಹ
ಬಳ್ಳಾರಿ, 15 ಅಕ್ಟೋಬರ್ (ಹಿ.ಸ.) ಅಕ್ಟೋಬರ್ 19ರಂದು ನಡೆಯಲಿರುವ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಬೆಳೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತುಂಗಭದ್ರಾ ಎಡದಂಡೆ - ಬಲದಂಡೆ ಮತ್ತು ಮೇಲ್ಮಟ್ಟದ ಕಾಲುವೆಗಳಿಗೆ ಡಿಸೆಂಬರ್ 15ರವರೆಗೆ ನೀರು ಪೂರೈಸಲು ನಿರ್ಧಾರ
ಬಳ್ಳಾರಿ : ಬೆಳೆಗಳನ್ನು ಸಂರಕ್ಷಿ ರೈತರನ್ನು ಕಾಪಾಡಲು ಡಿಸೆಂಬರ್ 19ರವರೆಗೆ ನೀರು ಪೂರೈಸಲು ಆಗ್ರಹ


ಬಳ್ಳಾರಿ, 15 ಅಕ್ಟೋಬರ್ (ಹಿ.ಸ.)

ಅಕ್ಟೋಬರ್ 19ರಂದು ನಡೆಯಲಿರುವ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಬೆಳೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತುಂಗಭದ್ರಾ ಎಡದಂಡೆ - ಬಲದಂಡೆ ಮತ್ತು ಮೇಲ್ಮಟ್ಟದ ಕಾಲುವೆಗಳಿಗೆ ಡಿಸೆಂಬರ್ 15ರವರೆಗೆ ನೀರು ಪೂರೈಸಲು ನಿರ್ಧಾರ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಆರ್. ಮಾಧವರೆಡ್ಡಿ ಕರೂರು ಅವರು ಪತ್ರಕರ್ತರ ಜೊತೆ ಗುರುವಾರ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಪ್ರಮಾಣ ಶೇ.50ರಿಂದ 60ರಷ್ಟು ಕುಸಿದಿದೆ. ರೈತರು ಬಿತ್ತನೆ ಮಾಡಿದ್ದ ಜೋಳ, ಹತ್ತಿ, ಮೆಕ್ಕೆಜೋಳ, ತೊಗರಿ ಹಾಗೂ ಕಡಲೆ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಪ್ರತಿ ಎಕರೆಗೆ ರೂ.30

ಸಾವಿರದಿಂದ ರೂ.40 ಸಾವಿರದವರೆಗೆ ಬಂಡವಾಳ ಹೂಡಿರುವ ರೈತರು ಬೆಳೆ ಕೈಗೆ ಬಾರದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸುಮಾರು 2.81 ಲಕ್ಷ ಎಕರೆ ಕೃಷಿ ಪ್ರದೇಶದಲ್ಲಿ ರೈತರು ಎಚ್ಎಲ್ಸಿ ಮತ್ತು ಎಲ್ಎಲ್ಸಿ ಕಾಲುವೆಗಳ

ನೀರಾವರಿಯನ್ನು ಅವಲಂಬಿಸಿದ್ದಾರೆ. ತುಂಗಭದ್ರಾ ನೀರಾವರಿ ಸಲಹಾ ಸಮಿತಿಯು ಆಗಸ್ಟ್ 11ರಂದು ಕೈಗೊಂಡ ನಿರ್ಣಯದಂತೆ

ಆಗಸ್ಟ್ 13ರಿಂದ ನವೆಂಬರ್ 10ರವರೆಗೆ ನೀರು ಹರಿಸಲು ನಿರ್ಧರಿಸಿತ್ತು. ಆದರೆ, ಅಕ್ಟೋಬರ್ 13ರಂದು ಅವಧಿಗೂ ಮುನ್ನವೇ ನೀರು ಸ್ಥಗಿತಗೊಳಿಸುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರ ಬರೆಯಲಾಗಿದೆ.

ಈ ನಿರ್ಣಯವನ್ನು ಪುನರ್ ಪರಿಶೀಲಿಸಿ ಎಚ್ಎಲ್ಸಿ ವ್ಯಾಪ್ತಿಯ ಸುಮಾರು 1.80 ಲಕ್ಷ ಎಕರೆ ಕೃಷಿ ಪ್ರದೇಶದಲ್ಲಿ ಒಂದು ಲಕ್ಷ

ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ಈ ಬೆಳೆಗೆ ಕನಿಷ್ಠ 160 ದಿನಗಳವರೆಗೆ ನೀರು ಅಗತ್ಯವಿದ್ದು, ಪ್ರತಿ ಎಕರೆಗೆ ಸುಮಾರು ರೂ.1.50 ಲಕ್ಷ ವೆಚ್ಚ ಮಾಡಲಾಗಿದೆ. ಉಳಿದ ಪ್ರದೇಶದ ಭತ್ತ, ಜೋಳ ಹಾಗೂ ಮೆಕ್ಕೆಜೋಳ ಬೆಳೆಗಳಿಗೂ

ಸಮರ್ಪಕ ನೀರು ಪೂರೈಕೆಯಾಗದಿದ್ದರೆ ರೈತರಿಗೆ ಭಾರಿ ನಷ್ಟ ಉಂಟಾಗಲಿದೆ ಎಂದು ಹೇಳಿದರು.

ವಣೆನೂರು ಸದಾಶಿವ ರೆಡ್ಡಿ, ಮಸೀದಿಪುರ ಬಸವನಗೌಡ, ಪ್ರಭಾಕರ್ ರೆಡ್ಡಿ, ಉಮಾಪತಿ, ತಿಮ್ಮಾರೆಡ್ಡಿ, ಬಸವರಾಜ್ ಸ್ವಾಮಿ,ರಾಮು ಗೌಡ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande