
ನವದೆಹಲಿ, 15 ಅಕ್ಟೋಬರ್ (ಹಿ.ಸ.):
ಭಾರತದ ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಹಾಗೂ ಭಾರತ ರತ್ನ ಪುರಸ್ಕೃತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು ಹಾಗೂ ವಿರೋಧ ಪಕ್ಷಗಳ ನಾಯಕರು ಗುರುವಾರ ಗೌರವ ನಮನ ಸಲ್ಲಿಸಿದರು. ವಿಜ್ಞಾನ, ರಕ್ಷಣಾ ಮತ್ತು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ ನಾಯಕರು, ಅವರ ಜೀವನ, ಚಿಂತನೆಗಳು ಹಾಗೂ ರಾಷ್ಟ್ರದ ಬಗೆಗಿನ ಸಮರ್ಪಣಾ ಮನೋಭಾವ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿರಲಿದೆ ಎಂದು ಹೇಳಿದರು.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಡಾ. ಕಲಾಂ ಅವರನ್ನು ಸ್ಮರಿಸಿ, ವಿಜ್ಞಾನ ಕ್ಷೇತ್ರದಲ್ಲಿನ ಅವರ ಅಸಾಧಾರಣ ಸಾಧನೆಗಳು, ರಾಷ್ಟ್ರದ ಬಗೆಗಿನ ಸಮರ್ಪಣೆ, ಸರಳ ಜೀವನ ಹಾಗೂ ಯುವಜನರ ಮೇಲಿನ ಅಚಲ ವಿಶ್ವಾಸವು ಅವರನ್ನು ದೇಶವಾಸಿಗಳ ಹೃದಯದಲ್ಲಿ ವಿಶೇಷ ಸ್ಥಾನಕ್ಕೇರಿಸಿದೆ ಎಂದು ತಿಳಿಸಿದರು.
ಪ್ರಯೋಗಾಲಯದಿಂದ ರಾಷ್ಟ್ರಪತಿ ಭವನದವರೆಗೆ ದೇಶದ ಪ್ರಗತಿ ಮತ್ತು ಜನಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಪರೂಪದ ರಾಷ್ಟ್ರನಿರ್ಮಾತೃಗಳಲ್ಲಿ ಡಾ. ಕಲಾಂ ಪ್ರಮುಖರು ಎಂದು ಬಿರ್ಲಾ ಹೇಳಿದರು. ವ್ಯಕ್ತಿಯ ಕನಸುಗಳಿಗೆ ಪರಿಸ್ಥಿತಿಗಳು ಮಿತಿಯನ್ನು ವಿಧಿಸಲಾರವು ಎಂಬುದಕ್ಕೆ ಅವರ ಜೀವನವೇ ಸಾಕ್ಷಿ. ದೃಢ ಸಂಕಲ್ಪ, ನಿರಂತರ ಪರಿಶ್ರಮ ಮತ್ತು ಕಲಿಯುವ ಹಂಬಲದಿಂದ ಉನ್ನತ ಸಾಧನೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಡಾ. ಕಲಾಂ ನೀಡಿದ ಕೊಡುಗೆ ಐತಿಹಾಸಿಕವಾಗಿದೆ ಎಂದು ಬಿರ್ಲಾ ಸ್ಮರಿಸಿದರು. ಶಿಕ್ಷಣವೆಂದರೆ ಕೇವಲ ಪದವಿ ಅಥವಾ ಉದ್ಯೋಗ ಪಡೆಯುವುದಲ್ಲ. ವೈಜ್ಞಾನಿಕ ಚಿಂತನೆ, ಸೃಜನಶೀಲತೆ, ನೈತಿಕ ಮೌಲ್ಯಗಳು ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬೆಳೆಸುವುದೂ ಶಿಕ್ಷಣದ ಉದ್ದೇಶವಾಗಿದೆ ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಭಾರತದ ರಕ್ಷಣಾ ಕ್ಷೇತ್ರದ ಸ್ವಾವಲಂಬನೆಯನ್ನು ಬಲಪಡಿಸುವಲ್ಲಿ ಡಾ. ಕಲಾಂ ಅವರ ಕೊಡುಗೆ ಮರೆಯಲಾಗದು ಎಂದು ತಿಳಿಸಿದರು. ಅಭಿವೃದ್ಧಿ ಹೊಂದಿದ ಭಾರತದ ಕುರಿತ ಅವರ ದೃಷ್ಟಿಕೋನ ಹಾಗೂ ಯುವಜನರಲ್ಲಿ ವೈಜ್ಞಾನಿಕ ಮನೋಭಾವ, ಆತ್ಮವಿಶ್ವಾಸ ಮತ್ತು ರಾಷ್ಟ್ರನಿರ್ಮಾಣದ ಸಂಕಲ್ಪ ಬೆಳೆಸಲು ನಡೆಸಿದ ಪ್ರಯತ್ನಗಳು ಸದಾ ಪ್ರೇರಣೆ ನೀಡಲಿವೆ ಎಂದರು.
ರಾಷ್ಟ್ರಪತಿಯ ಉನ್ನತ ಹುದ್ದೆಗೇರಿದ ಬಳಿಕವೂ ಡಾ. ಕಲಾಂ ತಮ್ಮ ಸರಳತೆ ಮತ್ತು ಸಹಜತೆಯನ್ನು ಉಳಿಸಿಕೊಂಡಿದ್ದರು. ಮಕ್ಕಳು ಮತ್ತು ಯುವಜನರೊಂದಿಗೆ ಬೆರೆತು, ಸಂವಾದ ನಡೆಸಿ ಅವರನ್ನು ಪ್ರೋತ್ಸಾಹಿಸುತ್ತಿದ್ದ ಅವರ ಗುಣಗಳು ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಕಲ್ಪಿಸಿವೆ ಎಂದು ರಾಜನಾಥ್ ಸಿಂಗ್ ಸ್ಮರಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು, ಡಾ. ಕಲಾಂ ತಮ್ಮ ಅಸಾಧಾರಣ ವೈಜ್ಞಾನಿಕ ಪ್ರತಿಭೆಯನ್ನು ಭಾರತವನ್ನು ಪ್ರಮುಖ ಕಾರ್ಯತಂತ್ರದ ಶಕ್ತಿಯನ್ನಾಗಿ ರೂಪಿಸುವುದಕ್ಕಾಗಿ ಸಮರ್ಪಿಸಿದ್ದರು ಎಂದು ಹೇಳಿದರು. ರಾಷ್ಟ್ರಪತಿಯಾಗಿ ಅವರು ಅತ್ಯುನ್ನತ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದಿದ್ದರು. 'ಭಾರತದ ಕ್ಷಿಪಣಿ ಮಾನವ' ಎಂದೇ ಗುರುತಿಸಲ್ಪಡುವ ಅವರು, ಯುವಜನರನ್ನು ರಾಷ್ಟ್ರಸೇವೆಗೆ ಪ್ರೇರೇಪಿಸುವ ಆದರ್ಶ ವ್ಯಕ್ತಿಯಾಗಿ ಸದಾ ಉಳಿಯಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಡಾ. ಕಲಾಂ ಜ್ಞಾನ ಮತ್ತು ಕಾರ್ಯದಕ್ಷತೆಯ ಪ್ರತೀಕವಾಗಿದ್ದರು. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ಅವರು ತಮ್ಮ ಇಡೀ ಜೀವನವನ್ನು ಸಮರ್ಪಿಸಿದ್ದರು. ಅವರ ಚಿಂತನೆಗಳು ಮುಂದಿನ ಪೀಳಿಗೆಗೆ ನಿರಂತರವಾಗಿ ಪ್ರೇರಣೆ ನೀಡಲಿವೆ ಎಂದು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ರಕ್ಷಣಾ ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಗಳಲ್ಲಿ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ತಂದುಕೊಡುವುದರ ಜತೆಗೆ, ದೇಶವನ್ನು ಪರಮಾಣು ಶಕ್ತಿಯನ್ನಾಗಿ ರೂಪಿಸುವಲ್ಲಿ ಡಾ. ಕಲಾಂ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು. ಅವರ ಅಮೂಲ್ಯ ವಿಚಾರಗಳು ಮತ್ತು ಆದರ್ಶ ಜೀವನ ಯುವಜನರಿಗೆ ಮಾರ್ಗದರ್ಶನ ನೀಡಲಿದ್ದು, ರಾಷ್ಟ್ರನಿರ್ಮಾಣ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಈಡೇರಿಸಲು ಪ್ರೇರಣೆ ನೀಡಲಿವೆ ಎಂದರು.
ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಅವರು, ದೇಶದ ಅಭಿವೃದ್ಧಿ ಮತ್ತು ಯುವಜನರ ಉನ್ನತಿಗೆ ಡಾ. ಕಲಾಂ ನೀಡಿದ ಅಮೂಲ್ಯ ಕೊಡುಗೆ ಸದಾ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿರಲಿದೆ ಎಂದು ಗೌರವ ನಮನ ಸಲ್ಲಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಡಾ. ಕಲಾಂ ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತದ ಕ್ಷಿಪಣಿ ಮಾನವ ಎಂದೇ ಸ್ಮರಿಸಲ್ಪಡುವ ಅವರ ವಿಜ್ಞಾನ, ತಂತ್ರಜ್ಞಾನ ಮತ್ತು ರಾಷ್ಟ್ರನಿರ್ಮಾಣ ಕ್ಷೇತ್ರಗಳಲ್ಲಿನ ಅಸಾಧಾರಣ ಕೊಡುಗೆ ಇಂದಿಗೂ ಹಲವು ಪೀಳಿಗೆಗಳಿಗೆ ದೊಡ್ಡ ಕನಸುಗಳನ್ನು ಕಾಣಲು, ಶ್ರೇಷ್ಠ ಸಾಧನೆಯತ್ತ ಮುನ್ನಡೆಯಲು ಹಾಗೂ ಪೂರ್ಣ ಸಮರ್ಪಣಾ ಭಾವದಿಂದ ದೇಶದ ಸೇವೆ ಮಾಡಲು ಪ್ರೇರಣೆ ನೀಡುತ್ತಿದೆ ಎಂದು ಹೇಳಿದರು.
-------
ಹಿಂದೂಸ್ತಾನ್ ಸಮಾಚಾರ್ / Rakesh.M.B.