
ನವದೆಹಲಿ, 14 ಅಕ್ಟೋಬರ್ (ಹಿ.ಸ.):
ಲಕ್ಷ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಸುಮಾರು 2,009.61 ಕೋಟಿ ರೂ. ವೆಚ್ಚವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸುವ ರೈಲ್ವೆ ಉದ್ಯೋಗಿಗಳಿಗೆ ಇದು ದೀಪಾವಳಿಯ ಉಡುಗೊರೆಯಾಗಿದೆ. ಜನರು ಹಬ್ಬ ಆಚರಿಸುವ ಸಂದರ್ಭದಲ್ಲಿ ರೈಲ್ವೆ ಸಿಬ್ಬಂದಿ ರೈಲು ಹಳಿಗಳಲ್ಲಿ, ಎಂಜಿನ್ಗಳಲ್ಲಿ, ಕಾರ್ಯಾಗಾರಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅಂತಹ ಉದ್ಯೋಗಿಗಳಿಗೆ ಬೋನಸ್ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
2014ರಿಂದ ಈವರೆಗೆ ರೈಲ್ವೆಯಲ್ಲಿ ಸುಮಾರು 5.5 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಸ್ತುತ 1.65 ಲಕ್ಷ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಪರೀಕ್ಷೆಗಳು ನಡೆಯುತ್ತಿವೆ. ಇತ್ತೀಚೆಗೆ ಸುಮಾರು 37 ಸಾವಿರ ಜನರಿಗೆ ಕಾಯಂ ಉದ್ಯೋಗ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ರೈಲ್ವೆಯ ಒಟ್ಟು 12 ಲಕ್ಷ ಉದ್ಯೋಗಿಗಳ ಪೈಕಿ ಸುಮಾರು ಅರ್ಧದಷ್ಟು ಮಂದಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಆಡಳಿತಾವಧಿಯಲ್ಲಿ ನೇಮಕಗೊಂಡಿದ್ದಾರೆ ಎಂದು ಅವರು ಹೇಳಿದರು.
ಪ್ರತಿ ವರ್ಷ ದುರ್ಗಾಪೂಜೆ ಮತ್ತು ದಸರಾ ಸಂದರ್ಭದಲ್ಲಿ ರೈಲ್ವೆ ಉದ್ಯೋಗಿಗಳಿಗೆ ಉತ್ಪಾದಕತೆ ಆಧಾರಿತ ಬೋನಸ್ ನೀಡಲಾಗುತ್ತದೆ. ಈ ಬಾರಿ ಅರ್ಹ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ದೊರೆಯಲಿದೆ. ಪ್ರತಿ ಅರ್ಹ ಉದ್ಯೋಗಿಗೆ ಗರಿಷ್ಠ 17,951 ರೂ. ಬೋನಸ್ ನಿಗದಿಪಡಿಸಲಾಗಿದೆ.
ಈ ಸೌಲಭ್ಯದಿಂದ ಹಳಿ ನಿರ್ವಹಣಾ ಸಿಬ್ಬಂದಿ, ಲೋಕೋ ಪೈಲಟ್ಗಳು, ರೈಲು ವ್ಯವಸ್ಥಾಪಕರು, ನಿಲ್ದಾಣದ ಮುಖ್ಯಸ್ಥರು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞರ ಸಹಾಯಕರು, ಪಾಯಿಂಟ್ಸ್ಮನ್ಗಳು, ಸಚಿವಾಲಯದ ಸಿಬ್ಬಂದಿ ಸೇರಿದಂತೆ ಇತರ 'ಸಿ' ವರ್ಗದ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.
2025-26ನೇ ಹಣಕಾಸು ವರ್ಷದಲ್ಲಿ ರೈಲ್ವೆ 167 ಕೋಟಿ ಟನ್ ಸರಕು ಸಾಗಣೆ ನಡೆಸಿದ್ದು, ಇದು ಈವರೆಗಿನ ದಾಖಲೆಯಾಗಿದೆ. ಇದೇ ಅವಧಿಯಲ್ಲಿ ರೈಲ್ವೆ ಮೂಲಕ ಸುಮಾರು 741 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ರೈಲ್ವೆ ಕಾರ್ಯಾಚರಣೆ ಹಾಗೂ ಸರಕು ಮತ್ತು ಪ್ರಯಾಣಿಕರ ಸಾರಿಗೆ ನಿರ್ವಹಣೆಯಲ್ಲಿ ಉದ್ಯೋಗಿಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಸರ್ಕಾರ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.