
ನವದೆಹಲಿ, 14 ಅಕ್ಟೋಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 15ರಂದು ಗುರುವಾರ ನವದೆಹಲಿಯ ಮೇಜರ್ ಧ್ಯಾನ್ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯನ್ ಕ್ರೀಡಾಕೂಟ 2026ರಲ್ಲಿ ಪಾಲ್ಗೊಂಡ ಭಾರತೀಯ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಗುರುವಾರ ಸಂಜೆ ಸುಮಾರು 4.30ಕ್ಕೆ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ, ಕಾರ್ಯಕ್ರಮದಲ್ಲಿ ನೆರೆದಿರುವವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಭಾರತೀಯ ಕ್ರೀಡಾ ತಂಡದ ಸದಸ್ಯರು, ತರಬೇತುದಾರರು, ಸಹಾಯಕ ಸಿಬ್ಬಂದಿ, ಭಾರತೀಯ ಒಲಿಂಪಿಕ್ ಸಂಸ್ಥೆಯ ಪದಾಧಿಕಾರಿಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಜಪಾನ್ನ ಐಚಿ-ನಗೋಯಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು. ಭಾರತೀಯ ಕ್ರೀಡಾಪಟುಗಳು 21 ಚಿನ್ನ, 27 ಬೆಳ್ಳಿ ಮತ್ತು 37 ಕಂಚು ಸೇರಿದಂತೆ ಒಟ್ಟು 85 ಪದಕಗಳನ್ನು ಗೆದ್ದಿದ್ದರು. ಸತತ ಎರಡನೇ ಬಾರಿಗೆ ಭಾರತ ಏಷ್ಯನ್ ಕ್ರೀಡಾಕೂಟದಲ್ಲಿ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ವಿವಿಧ ಕ್ರೀಡೆಗಳಲ್ಲಿ ದೇಶದ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚುತ್ತಿರುವುದನ್ನು ಈ ಸಾಧನೆ ಪ್ರತಿಬಿಂಬಿಸಿದೆ.
ಈ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಹಲವು ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಬಿಲ್ಲುಗಾರಿಕೆಯ ರಿಕರ್ವ್ ವಿಭಾಗದಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ಭಾರತ, ಪುರುಷರ ಮತ್ತು ಮಹಿಳೆಯರ ಹಾಕಿ ವಿಭಾಗಗಳಲ್ಲಿಯೂ ಚಿನ್ನದ ಪದಕಗಳನ್ನು ಗೆದ್ದಿತ್ತು. ಸಾಫ್ಟ್ ಟೆನಿಸ್ ಮತ್ತು ಮಿಶ್ರ ಸಮರ ಕಲೆಗಳಲ್ಲಿಯೂ ಭಾರತ ಮೊದಲ ಬಾರಿಗೆ ಪದಕಗಳನ್ನು ಗಳಿಸಿತ್ತು.
ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ಭಾರತ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದುಕೊಂಡಿತ್ತು. ಭಾರ ಎತ್ತುವ ಸ್ಪರ್ಧೆಯಲ್ಲಿ 28 ವರ್ಷಗಳ ಅಂತರದ ಬಳಿಕ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಲಭಿಸಿತ್ತು. ಗ್ರೀಕೊ-ರೋಮನ್ ಕುಸ್ತಿಯಲ್ಲಿಯೂ ಭಾರತೀಯ ಆಟಗಾರ ಬೆಳ್ಳಿ ಪದಕ ಗೆದ್ದಿದ್ದು, ಈ ವಿಭಾಗದಲ್ಲಿ 64 ವರ್ಷಗಳ ಬಳಿಕ ಭಾರತೀಯ ಕುಸ್ತಿಪಟು ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರು.
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಸಾಧನೆ ಮತ್ತು ಕ್ರೀಡಾಪಟುಗಳ ಗಮನಾರ್ಹ ಪ್ರದರ್ಶನವನ್ನು ಗುರುತಿಸುವ ಉದ್ದೇಶದಿಂದ ಪ್ರಧಾನಿ ಅವರೊಂದಿಗಿನ ಈ ಸಂವಾದ ಆಯೋಜಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.