
ನವದೆಹಲಿ, 12 ಅಕ್ಟೋಬರ್ (ಹಿ.ಸ.):
ಕೊಚ್ಚಿಯ ಕೊಚ್ಚಿನ್ ಹಡಗು ನಿರ್ಮಾಣ ಘಟಕದಲ್ಲಿ ನಿರ್ಮಿಸಲಾದ ಮೂರನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ‘ಮಂಗ್ರೋಲ್’ ಸೋಮವಾರ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.
ಮುಂಬೈನ ನೌಕಾ ಹಡಗುಕಟ್ಟೆಯಲ್ಲಿ ನಡೆದ ಸೇರ್ಪಡೆ ಸಮಾರಂಭದಲ್ಲಿ ಈ ಯುದ್ಧನೌಕೆಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು. ಪಶ್ಚಿಮ ನೌಕಾ ಕಮಾಂಡ್‌ನ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕರಾವಳಿಯ ಆಳ ಕಡಿಮೆ ಇರುವ ನೀರಿನಲ್ಲಿ ದೊಡ್ಡ ಯುದ್ಧನೌಕೆಗಳ ಕಾರ್ಯಾಚರಣೆಗೆ ಎದುರಾಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಇದರ ಸೇರ್ಪಡೆಯಿಂದ ಬಂದರುಗಳು, ನೌಕಾ ನೆಲೆಗಳು ಹಾಗೂ ಕರಾವಳಿ ಮಾರ್ಗಗಳ ಭದ್ರತಾ ಸಾಮರ್ಥ್ಯ ಹೆಚ್ಚಲಿದ್ದು, ಬೃಹತ್ ನೌಕಾಪಡೆಯ ಕಾರ್ಯಾಚರಣೆಗಳಿಗೂ ನೆರವಾಗಲಿದೆ.
ಸಮಾರಂಭದಲ್ಲಿ ಹಿರಿಯ ನೌಕಾಪಡೆ ಮತ್ತು ರಕ್ಷಣಾ ಅಧಿಕಾರಿಗಳು, ರಕ್ಷಣಾ ಸಚಿವಾಲಯ ಹಾಗೂ ಕೊಚ್ಚಿನ್ ಹಡಗು ನಿರ್ಮಾಣ ಘಟಕದ ಪ್ರತಿನಿಧಿಗಳು ಮತ್ತು ದೇಶೀಯ ಶಸ್ತ್ರಾಸ್ತ್ರ ಹಾಗೂ ಸಂವೇದಕಗಳ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಹಿಂದಿನ ಯುದ್ಧನೌಕೆಯ ಪರಂಪರೆ ಮುಂದುವರಿಕೆ
ಗುಜರಾತ್‌ನ ಜುನಾಗಢ ಜಿಲ್ಲೆಯ ಕರಾವಳಿ ಪಟ್ಟಣ ಹಾಗೂ ಪ್ರಮುಖ ಮೀನುಗಾರಿಕಾ ಬಂದರು ಮಂಗ್ರೋಲ್ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ. ಈ ಮೂಲಕ ಹಿಂದಿನ ಐಎನ್‌ಎಸ್ ಮಂಗ್ರೋಲ್ (ಎಂ-85) ನೌಕೆಯ ಪರಂಪರೆಯನ್ನು ಮುಂದುವರಿಸಲಾಗಿದೆ. ಹಿಂದಿನ ನೌಕೆಯು 2004ರ ಏಪ್ರಿಲ್ 7ರವರೆಗೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿತ್ತು.
ಶೇ. 80ಕ್ಕೂ ಹೆಚ್ಚು ಸ್ವದೇಶಿ ತಂತ್ರಜ್ಞಾನ ಬಳಕೆ
ರಕ್ಷಣಾ ಸಚಿವಾಲಯದ ಪ್ರಕಾರ, ಮಂಗ್ರೋಲ್ ಯುದ್ಧನೌಕೆಯಲ್ಲಿ ಶೇ. 80ಕ್ಕೂ ಹೆಚ್ಚು ಸ್ವದೇಶಿ ಪರಿಕರಗಳನ್ನು ಬಳಸಲಾಗಿದೆ. ಯುದ್ಧನೌಕೆಗಳ ವಿನ್ಯಾಸ, ನಿರ್ಮಾಣ ಹಾಗೂ ಸುಧಾರಿತ ಶಸ್ತ್ರಾಸ್ತ್ರ ಮತ್ತು ಸಂವೇದಕಗಳ ಸಂಯೋಜನೆಯಲ್ಲಿ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯಕ್ಕೆ ಇದು ಸಾಕ್ಷಿಯಾಗಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಉಪಕ್ರಮಗಳ ಅಡಿಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಕರಾವಳಿ ಮತ್ತು ಆಳ ಕಡಿಮೆ ಇರುವ ಸಮುದ್ರ ಪ್ರದೇಶಗಳಲ್ಲಿ ಜಲಾಂತರ್ಗಾಮಿ ನೌಕೆಗಳಿಂದ ಎದುರಾಗುವ ಅಪಾಯಗಳನ್ನು ಪತ್ತೆಹಚ್ಚಿ ಎದುರಿಸಲು ಮಂಗ್ರೋಲ್‌ನಲ್ಲಿ ಆಧುನಿಕ ಶಸ್ತ್ರಾಸ್ತ್ರ ಹಾಗೂ ಸಂವೇದಕಗಳನ್ನು ಅಳವಡಿಸಲಾಗಿದೆ. ಇದರಲ್ಲಿ ‘ಅಭಯ್’ ಹಲ್-ಮೌಂಟೆಡ್ ಸೋನಾರ್, ಹಗುರ ತೂಕದ ಟಾರ್ಪಿಡೊಗಳು, ಸ್ವದೇಶಿ ಜಲಾಂತರ್ಗಾಮಿ ನಿಗ್ರಹ ರಾಕೆಟ್ ಉಡಾವಣಾ ವ್ಯವಸ್ಥೆ ಹಾಗೂ ‘ಮಾರೀಚ್’ ಸುಧಾರಿತ ಟಾರ್ಪಿಡೊ ದಿಕ್ಕು ತಪ್ಪಿಸುವ ವ್ಯವಸ್ಥೆ ಸೇರಿವೆ.
ಆಳ ಕಡಿಮೆ ಇರುವ ಸಮುದ್ರದಲ್ಲಿ ಕಾರ್ಯಾಚರಣೆ ಸಾಮರ್ಥ್ಯ
ಕೊಚ್ಚಿನ್ ಹಡಗು ನಿರ್ಮಾಣ ಘಟಕದ ಪ್ರಕಾರ, ಮೂರು ಡೀಸೆಲ್ ಎಂಜಿನ್‌ಗಳಿಂದ ಚಾಲಿತವಾಗುವ ಈ ಯುದ್ಧನೌಕೆಯಲ್ಲಿ ಜಲಧಾರೆ ಆಧಾರಿತ ಚಾಲನಾ ವ್ಯವಸ್ಥೆ ಅಳವಡಿಸಲಾಗಿದೆ. ಇದು ಆಳ ಕಡಿಮೆ ಇರುವ ಸಮುದ್ರ ಪ್ರದೇಶಗಳಲ್ಲಿ ವೇಗವಾಗಿ ದಿಕ್ಕು ಬದಲಿಸಿ ಕಾರ್ಯಾಚರಣೆ ನಡೆಸಲು ನೆರವಾಗುತ್ತದೆ.
ಜಲಾಂತರ್ಗಾಮಿ ನೌಕೆಗಳ ಪತ್ತೆ ಮತ್ತು ನಿಗ್ರಹದ ಜತೆಗೆ ನೀರಿನೊಳಗಿನ ಕಣ್ಗಾವಲು, ಕಡಿಮೆ ತೀವ್ರತೆಯ ಸಮುದ್ರ ಕಾರ್ಯಾಚರಣೆಗಳು ಹಾಗೂ ಸಮುದ್ರಗುಂಡುಗಳ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನೂ ಈ ನೌಕೆ ಹೊಂದಿದೆ.
ಸಮುದ್ರ ಗಸ್ತು ವಿಮಾನಗಳು, ಹೆಲಿಕಾಪ್ಟರ್‌ಗಳು ಹಾಗೂ ಇತರ ಯುದ್ಧನೌಕೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬಲ್ಲ ಮಂಗ್ರೋಲ್, ಬದಲಾಗುತ್ತಿರುವ ಸಮುದ್ರ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.