
ಬೆಂಗಳೂರು, 11 ಅಕ್ಟೋಬರ್ (ಹಿ.ಸ.):
ತಮಿಳುನಾಡು ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈನ ಐಐಟಿ ಮದ್ರಾಸ್ ಆವರಣದಲ್ಲಿರುವ ಶ್ರೀ ಜಲಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ರಾಜ್ಯಪಾಲ ಆರ್.ಎನ್. ರವಿ ಅರ್ಲೇಕರ್ (ಅಧಿಕೃತವಾಗಿ ಆರ್.ಎನ್. ರವಿ ಬದಲು ಆರ್.ವಿ. ಅರ್ಲೇಕರ್) ಉಪಸ್ಥಿತರಿದ್ದು, ಪ್ರಧಾನಿಯೊಂದಿಗೆ ದೇವರ ದರ್ಶನ ಪಡೆದರು.
ನವ ರಾತ್ರಿಯ ಆರಂಭದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಶಿವನ ಸನ್ನಿಧಿ ಹಾಗೂ ಶ್ರೀರಾಮನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಜಲಕಂಠೇಶ್ವರ ಸ್ವಾಮಿಗೆ ಕಮಲದ ಹೂವುಗಳನ್ನು ಅರ್ಪಿಸಿ ವಿಶೇಷ ಪೂಜೆ ನೆರವೇರಿಸಿದರು. ದೇವಸ್ಥಾನದ ಧಾರ್ಮಿಕ ಮಹತ್ವ ಹಾಗೂ ವಿಶೇಷತೆಗಳ ಕುರಿತು ಐಐಟಿ ಮದ್ರಾಸ್ ನಿರ್ದೇಶಕ ಕಾಮಕೋಟಿ ಅವರು ಪ್ರಧಾನಿಗೆ ಮಾಹಿತಿ ನೀಡಿದರು.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಸಂಗೀತದೊಂದಿಗೆ ಸ್ವಾಗತಿಸಲಾಯಿತು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯು ಗಣ್ಯರನ್ನು ಬರಮಾಡಿಕೊಂಡಿತು.
ಚೆನ್ನೈನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ವಿಜಯ್ ಅವರು ಐಐಟಿ ಮದ್ರಾಸ್ ಆವರಣಕ್ಕೆ ತೆರಳಿದ್ದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ವಿಜಯ್ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ್ದರು. ಬಳಿಕ ಇಬ್ಬರೂ ಚೆನ್ನೈ ಮೆಟ್ರೋ ರೈಲಿನ ಪೂನಮಲ್ಲಿ–ವಡಪಳನಿ ಮಾರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ₹13,000 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮಗಳಲ್ಲಿಯೂ ಪ್ರಧಾನಿ ಭಾಗವಹಿಸಿದರು.
ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು: ಚೆನ್ನೈ ಪ್ರವಾಸದ ವೇಳೆ ಮೆಟ್ರೋ ರೈಲು ಸೇವೆ, ರಸ್ತೆ ಹಾಗೂ ರೈಲ್ವೆ ಮೂಲಸೌಕರ್ಯ ಯೋಜನೆಗಳ ಜೊತೆಗೆ ಐಐಟಿ ಮದ್ರಾಸ್ನ ಬ್ರೇನ್ ಸೆಂಟರ್ಗೂ ಪ್ರಧಾನಿ ಭೇಟಿ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R