
ಬೆಂಗಳೂರು, 10 ಅಕ್ಟೋಬರ್ (ಹಿ.ಸ.):
ನಾಡಹಬ್ಬ ದಸರಾ ಸಂಭ್ರಮವನ್ನು ಪ್ರಯಾಣಿಕರಿಗೆ ಪರಿಚಯಿಸುವ ಉದ್ದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 12ರಿಂದ 17ರವರೆಗೆ ಆರು ದಿನಗಳ ವಿಶೇಷ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ.
ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2ರ ವಿವಿಧ ಸ್ಥಳಗಳಲ್ಲಿ ಕರ್ನಾಟಕದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ನಡೆಯಲಿವೆ. ಟರ್ಮಿನಲ್ 2ರ ಆಗಮನ ಪ್ರದೇಶದಲ್ಲಿ ದಸರಾ ಗೊಂಬೆಗಳ ವಿಶೇಷ ಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆಯಾಗಿರಲಿದೆ.
ಅಕ್ಟೋಬರ್ 12ರಂದು ಡೊಳ್ಳು ಕುಣಿತ, ಪಟ ಕುಣಿತ ಹಾಗೂ ಕರ್ನಾಟಕ ಶಾಸ್ತ್ರೀಯ ಗಾಯನದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಅಕ್ಟೋಬರ್ 13ರಂದು ಗಾಯನ ಕಛೇರಿ, ವಾದ್ಯವೃಂದ, ಕಂಸಾಳೆ, ಗಾರುಡಿ ಗೊಂಬೆ ಪ್ರದರ್ಶನ ಹಾಗೂ ‘ಒಡೆಯರ್ ವೈಭವ’ ಕಲಾ ಪ್ರದರ್ಶನ ನಡೆಯಲಿದೆ.
ಅಕ್ಟೋಬರ್ 14ರಂದು ಭರತನಾಟ್ಯ ಮತ್ತು ತೊಗಲು ಗೊಂಬೆಯಾಟ, 15ರಂದು ಶಾಸ್ತ್ರೀಯ ಪಿಟೀಲು ಹಾಗೂ ಮೃದಂಗ ವಾದನ, 16ರಂದು ವೀಣೆ ಯುಗಲ ವಾದನ ಸೇರಿದಂತೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಕ್ಟೋಬರ್ 17ರಂದು ಕೊಳಲು ವಾದನ, ಭರತನಾಟ್ಯ, ಯಕ್ಷಗಾನ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ.
ಕರ್ನಾಟಕದ ಸಂಸ್ಕೃತಿಗೆ ಜಾಗತಿಕ ವೇದಿಕೆ
ವಿಮಾನ ನಿಲ್ದಾಣಕ್ಕೆ ಆಗಮಿಸುವ ದೇಶೀಯ ಹಾಗೂ ವಿದೇಶಿ ಪ್ರಯಾಣಿಕರಿಗೆ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದು ಉತ್ಸವದ ಉದ್ದೇಶವಾಗಿದೆ. ಜಾನಪದ ಕಲೆ, ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ಕರಾವಳಿಯ ಯಕ್ಷಗಾನ ಸೇರಿದಂತೆ ನಾಡಿನ ವೈವಿಧ್ಯಮಯ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಲು ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣವು ಕೇವಲ ಪ್ರಯಾಣದ ಕೇಂದ್ರವಾಗಿರದೆ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಸಾಂಸ್ಕೃತಿಕ ವೇದಿಕೆಯಾಗಿಯೂ ಗುರುತಿಸಿಕೊಳ್ಳುವ ಪ್ರಯತ್ನ ಇದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R