
ಜೋಧಪುರ, 10 ಅಕ್ಟೋಬರ್ (ಹಿ.ಸ.):
ಬದಲಾಗುತ್ತಿರುವ ಆಧುನಿಕ ಯುದ್ಧದ ಸ್ವರೂಪಕ್ಕೆ ಅನುಗುಣವಾಗಿ ತಾಂತ್ರಿಕ ಸಾಮರ್ಥ್ಯ, ತ್ವರಿತ ನಿರ್ಧಾರ ಮತ್ತು ನಿಖರ ಕಾರ್ಯಾಚರಣೆಗಳು ಸೇನಾ ಬಲದ ಪ್ರಮುಖ ಆಧಾರಗಳಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಿತ್ರ ರಾಷ್ಟ್ರಗಳೊಂದಿಗೆ ರಕ್ಷಣಾ ತಂತ್ರಜ್ಞಾನ, ಜಂಟಿ ಅಭಿವೃದ್ಧಿ ಮತ್ತು ಜಂಟಿ ಉತ್ಪಾದನಾ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಅಗತ್ಯವಿದೆ. ಭವಿಷ್ಯದ ರಕ್ಷಣಾ ಪಾಲುದಾರಿಕೆಯಲ್ಲಿ ತಂತ್ರಜ್ಞಾನ ಮತ್ತು ಪರಸ್ಪರ ವಿಶ್ವಾಸ ಪ್ರಮುಖ ಪಾತ್ರ ವಹಿಸಲಿವೆ ಎಂದು ಅವರು ತಿಳಿಸಿದರು.
ಶನಿವಾರ ಜೋಧಪುರ ವಾಯುಪಡೆ ನಿಲ್ದಾಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಾಯುಸೇನಾ ಸಮರಾಭ್ಯಾಸ ‘ತರಂಗ ಶಕ್ತಿ-2026’ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಳಿಗ್ಗೆ 10.55ಕ್ಕೆ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದ ರಕ್ಷಣಾ ಸಚಿವರು ಭಾರತೀಯ ವಾಯುಪಡೆಯ ಯೋಧರು, ಮಿತ್ರ ರಾಷ್ಟ್ರಗಳ ವಾಯುಪಡೆ ಮುಖ್ಯಸ್ಥರು, ಸೇನಾಧಿಕಾರಿಗಳು, ಪೈಲಟ್‌ಗಳು ಮತ್ತು ವಿವಿಧ ನಿಯೋಗಗಳ ಪ್ರತಿನಿಧಿಗಳನ್ನು ಭೇಟಿಯಾದರು. ಸಮರಾಭ್ಯಾಸದ ಯಶಸ್ವಿ ಆಯೋಜನೆಗಾಗಿ ಭಾರತೀಯ ವಾಯುಪಡೆ ಸೇರಿದಂತೆ ಇದರಲ್ಲಿ ಭಾಗವಹಿಸಿದ ಎಲ್ಲ ಸಂಸ್ಥೆಗಳು ಮತ್ತು ಸಂಘಟನೆಗಳನ್ನು ಅಭಿನಂದಿಸಿದರು.
ಬಹುರಾಷ್ಟ್ರೀಯ ಸೇನಾ ಸಮರಾಭ್ಯಾಸಗಳು ವಿವಿಧ ದೇಶಗಳ ವಾಯುಪಡೆಗಳಿಗೆ ಪರಸ್ಪರರ ಅನುಭವ, ತಂತ್ರಜ್ಞಾನ ಮತ್ತು ಕಾರ್ಯತಂತ್ರಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತವೆ. ಇದರಿಂದ ಪರಸ್ಪರ ವಿಶ್ವಾಸ ಹೆಚ್ಚುವುದರ ಜತೆಗೆ ಕಾರ್ಯಾಚರಣೆಯ ಸಮನ್ವಯವೂ ಬಲಗೊಳ್ಳುತ್ತದೆ ಎಂದು ಹೇಳಿದರು.
ಆಧುನಿಕ ಯುದ್ಧದ ಸ್ವರೂಪ ಬದಲು
ಆಧುನಿಕ ಯುದ್ಧದ ಸ್ವರೂಪ ವೇಗವಾಗಿ ಬದಲಾಗುತ್ತಿದೆ. ಯುದ್ಧವು ಈಗ ಭೂಮಿ, ಸಮುದ್ರ ಮತ್ತು ವಾಯು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಾಹ್ಯಾಕಾಶ, ಗಣಕ ಜಾಲ ಕ್ಷೇತ್ರ, ವಿದ್ಯುತ್ಕಾಂತೀಯ ತರಂಗಗಳ ವಲಯ ಮತ್ತು ಮಾಹಿತಿ ಕ್ಷೇತ್ರಗಳೂ ಯುದ್ಧದ ಪ್ರಮುಖ ಭಾಗಗಳಾಗಿವೆ. ಕೃತಕ ಬುದ್ಧಿಮತ್ತೆ, ವಿದ್ಯುನ್ಮಾನ ಯುದ್ಧ ವ್ಯವಸ್ಥೆಗಳು ಹಾಗೂ ದೂರದ ಗುರಿಗಳ ಮೇಲೆ ನಿಖರ ದಾಳಿ ನಡೆಸುವ ಶಸ್ತ್ರಾಸ್ತ್ರಗಳು ಯುದ್ಧದ ಸ್ವರೂಪ ಮತ್ತು ವೇಗವನ್ನು ಬದಲಿಸಿವೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಭವಿಷ್ಯದಲ್ಲಿ ಸೇನಾ ಸಾಮರ್ಥ್ಯವನ್ನು ಕೇವಲ ಶಸ್ತ್ರಾಸ್ತ್ರಗಳ ಸಂಖ್ಯೆಯ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ. ಶತ್ರುಗಳ ಚಟುವಟಿಕೆಗಳನ್ನು ಗ್ರಹಿಸುವುದು, ತ್ವರಿತವಾಗಿ ನಿರ್ಧಾರ ಕೈಗೊಳ್ಳುವುದು ಮತ್ತು ನಿಖರವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವೂ ನಿರ್ಣಾಯಕವಾಗಲಿದೆ ಎಂದು ತಿಳಿಸಿದರು.
ಸ್ವಾವಲಂಬಿ ರಕ್ಷಣಾ ಸಾಮರ್ಥ್ಯಕ್ಕೆ ಒತ್ತು
ಜಾಗತಿಕ ಪರಿಸ್ಥಿತಿಗಳು ಮತ್ತು ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ ಪ್ರತಿಯೊಂದು ದೇಶವೂ ಜಾಗರೂಕವಾಗಿರುವುದು ಅಗತ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ರಕ್ಷಣಾ ಕ್ಷೇತ್ರದ ಸ್ವಾವಲಂಬನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಅಳವಡಿಸಿಕೊಂಡಿದೆ. ದೀರ್ಘಕಾಲ ನಡೆಯುವ ಯುದ್ಧಗಳ ಸವಾಲುಗಳನ್ನು ಎದುರಿಸಲು ದೇಶೀಯವಾಗಿ ಶಸ್ತ್ರಾಸ್ತ್ರಗಳು ಮತ್ತು ಪ್ರಮುಖ ತಂತ್ರಜ್ಞಾನಗಳನ್ನು ಉತ್ಪಾದಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಸೀಮಿತ ಸಂಪನ್ಮೂಲಗಳೊಂದಿಗೆ ಆರಂಭವಾದ ಭಾರತೀಯ ವಾಯುಪಡೆಯು ಇಂದು ಆಧುನಿಕ ವಿಮಾನಗಳು, ನಿಖರ ದಾಳಿ ನಡೆಸುವ ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ಸಂವೇದಕಗಳು ಮತ್ತು ಸಮಗ್ರ ಜಾಲ ವ್ಯವಸ್ಥೆಗಳನ್ನು ಹೊಂದಿರುವ ಸಮರ್ಥ ಸೇನಾ ಶಕ್ತಿಯಾಗಿ ಬೆಳೆದಿದೆ ಎಂದು ತಿಳಿಸಿದರು.
ತೇಜಸ್ ಯುದ್ಧವಿಮಾನ, ಧ್ರುವ ಮತ್ತು ಪ್ರಚಂಡ ಹೆಲಿಕಾಪ್ಟರ್‌ಗಳು, ಲಘು ಬಳಕೆಯ ಹೆಲಿಕಾಪ್ಟರ್, ಆಕಾಶ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಸುಧಾರಿತ ರೇಡಾರ್ ತಂತ್ರಜ್ಞಾನಗಳು ಭಾರತದ ಸ್ವದೇಶಿ ರಕ್ಷಣಾ ಸಾಮರ್ಥ್ಯಕ್ಕೆ ಪ್ರಮುಖ ಉದಾಹರಣೆಗಳಾಗಿವೆ ಎಂದರು.
ಸುಧಾರಿತ ಮಧ್ಯಮ ಯುದ್ಧವಿಮಾನ ಯೋಜನೆಯಡಿ ಐದನೇ ತಲೆಮಾರಿನ ಶತ್ರು ರೇಡಾರ್‌ಗಳಿಗೆ ಸುಲಭವಾಗಿ ಪತ್ತೆಯಾಗದ ಯುದ್ಧವಿಮಾನದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಮಿತ್ರ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಕಾರ ವಿಸ್ತರಣೆ
ರಕ್ಷಣಾ ಸಂಶೋಧನೆ, ಜಂಟಿ ತಂತ್ರಜ್ಞಾನ ಅಭಿವೃದ್ಧಿ, ಜಂಟಿ ಉತ್ಪಾದನೆ, ನಿರ್ವಹಣೆ, ತರಬೇತಿ ಮತ್ತು ತಾಂತ್ರಿಕ ಆವಿಷ್ಕಾರಗಳ ಕ್ಷೇತ್ರಗಳಲ್ಲಿ ಮಿತ್ರ ರಾಷ್ಟ್ರಗಳೊಂದಿಗೆ ಸಹಕಾರ ವಿಸ್ತರಿಸಲು ವ್ಯಾಪಕ ಅವಕಾಶಗಳಿವೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಭವಿಷ್ಯದಲ್ಲಿ ರಕ್ಷಣಾ ಸಂಬಂಧಗಳು ಶಸ್ತ್ರಾಸ್ತ್ರಗಳು ಮತ್ತು ಸೇನಾ ಉಪಕರಣಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ತಂತ್ರಜ್ಞಾನ ಮತ್ತು ಪರಸ್ಪರ ವಿಶ್ವಾಸವೇ ಇಂತಹ ಸಂಬಂಧಗಳ ಪ್ರಮುಖ ಶಕ್ತಿಯಾಗಲಿವೆ. ಭಾರತವು ತನ್ನ ಸ್ವದೇಶಿ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವುದರ ಜತೆಗೆ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರಗಳೊಂದಿಗೆ ಸಹಕಾರ ಹೆಚ್ಚಿಸಲು ಸಿದ್ಧವಿದೆ ಎಂದು ತಿಳಿಸಿದರು.
‘ತರಂಗ ಶಕ್ತಿ-2026’ ಇಂತಹ ಸಹಕಾರವನ್ನು ಬಲಪಡಿಸುವ ಪ್ರಮುಖ ಉಪಕ್ರಮವಾಗಿದೆ. ಬಹುರಾಷ್ಟ್ರೀಯ ಸೇನಾ ಸಮರಾಭ್ಯಾಸಗಳು ವಿವಿಧ ದೇಶಗಳ ವಾಯುಪಡೆಗಳಿಗೆ ತಮ್ಮ ತಂತ್ರಜ್ಞಾನ, ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತವೆ. ಇದರಿಂದ ಜಂಟಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹಾಗೂ ಪರಸ್ಪರ ಸಮನ್ವಯ ಹೆಚ್ಚುವುದರ ಜತೆಗೆ ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸುವ ಸಿದ್ಧತೆಯೂ ಉತ್ತಮಗೊಳ್ಳುತ್ತದೆ ಎಂದು ಹೇಳಿದರು.
‘ತರಂಗ ಶಕ್ತಿ-2026’ರ ಮೂಲಕ ಅಂತರರಾಷ್ಟ್ರೀಯ ರಕ್ಷಣಾ ಸಹಕಾರ, ಸ್ವದೇಶಿ ತಂತ್ರಜ್ಞಾನ, ಸಾಮರಿಕ ಪಾಲುದಾರಿಕೆ ಮತ್ತು ಮಿತ್ರ ರಾಷ್ಟ್ರಗಳೊಂದಿಗಿನ ಪರಸ್ಪರ ವಿಶ್ವಾಸವನ್ನು ಬಲಪಡಿಸುವ ಬದ್ಧತೆಯನ್ನು ಭಾರತ ಪುನರುಚ್ಚರಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.