ವಿಹಿಂಪ ಮುಖಂಡ ವಿಕಾಸ್ ಪ್ರಭಾಕರ್ ಹತ್ಯೆ ಪ್ರಕರಣ: ಯುಎಇಯಿಂದ ಗಡಿಪಾರುಗೊಂಡ ಆರೋಪಿ ಬಂಧನ
ನವದೆಹಲಿ, 01 ಅಕ್ಟೋಬರ್ (ಹಿ.ಸ.): ವಿಶ್ವ ಹಿಂದೂ ಪರಿಷತ್‌ ಮುಖಂಡ ವಿಕಾಸ್ ಪ್ರಭಾಕರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹರವಿಂದರ್ ಕುಮಾರ್ ಅಲಿಯಾಸ್ ಸೋನು ಎಂಬ ಆರೋಪಿಯನ್ನು ಬಂಧಿಸಿದೆ. ಯುಎಇಯಲ್ಲಿ ನೆಲೆಸಿದ್ದ ಆರೋಪಿಯನ್ನು ರಾಜತಾಂತ್ರಿಕ ಪ್ರಯತ್ನಗಳ ಬ
एनआईए की ओर से जारी तस्वीर


ನವದೆಹಲಿ, 01 ಅಕ್ಟೋಬರ್ (ಹಿ.ಸ.):

ವಿಶ್ವ ಹಿಂದೂ ಪರಿಷತ್‌ ಮುಖಂಡ ವಿಕಾಸ್ ಪ್ರಭಾಕರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹರವಿಂದರ್ ಕುಮಾರ್ ಅಲಿಯಾಸ್ ಸೋನು ಎಂಬ ಆರೋಪಿಯನ್ನು ಬಂಧಿಸಿದೆ. ಯುಎಇಯಲ್ಲಿ ನೆಲೆಸಿದ್ದ ಆರೋಪಿಯನ್ನು ರಾಜತಾಂತ್ರಿಕ ಪ್ರಯತ್ನಗಳ ಬಳಿಕ ಭಾರತಕ್ಕೆ ಗಡಿಪಾರು ಮಾಡಲಾಗಿದ್ದು, ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಎನ್‌ಐಎ ಬಂಧಿಸಿದೆ.

ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ವಿಕಾಸ್ ಪ್ರಭಾಕರ್ ಅವರನ್ನು ಪೂರ್ವಯೋಜಿತವಾಗಿ ಹತ್ಯೆ ಮಾಡಲಾಗಿತ್ತು. ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ (ಬಿಕೆಐ) ಸಂಘಟನೆಯ ಸದಸ್ಯರು ಈ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣವನ್ನು ಎನ್‌ಐಎ 2024ರ ಮೇ 9ರಂದು ದಾಖಲಿಸಿಕೊಂಡಿದ್ದು, ಇದುವರೆಗೆ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಿದೆ.

ಈ ಬಂಧನವು ಯುಎಇಯಲ್ಲಿದ್ದ ಮತ್ತೊಬ್ಬ ಆರೋಪಿ ಮನ್ವೀರ್ ರಾಮ್‌ನನ್ನು ಆಗಸ್ಟ್ 13ರಂದು ಬಂಧಿಸಿದ ಬಳಿಕ ನಡೆದಿದೆ. ಅಪರಾಧದಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ಮನ್ವೀರ್ ರಾಮ್ ಭಾಗಿಯಾಗಿದ್ದ ಎಂದು ಆರೋಪಿಸಲಾಗಿದೆ. ಅಮೃತಸರ ವಿಮಾನ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದು ಬಳಿಕ ಎನ್‌ಐಎ ಬಂಧಿಸಿತ್ತು.

ಎನ್‌ಐಎ ತನಿಖೆಯ ಪ್ರಕಾರ, ವಿಕಾಸ್ ಪ್ರಭಾಕರ್ ಅವರನ್ನು ಹತ್ಯೆ ಮಾಡುವ ಸಂಚನ್ನು ಜರ್ಮನಿಯಲ್ಲಿದ್ದ ಬಿಕೆಐ ಕಾರ್ಯಕರ್ತರಾದ ಹರ್ಜೀತ್ ಸಿಂಗ್ ಅಲಿಯಾಸ್ ಲಾಡಿ ಮತ್ತು ಕುಲ್ಬೀರ್ ಸಿಂಗ್ ಅಲಿಯಾಸ್ ಸಿದ್ದು ರೂಪಿಸಿದ್ದರು ಎನ್ನಲಾಗಿದೆ.

ಯುಎಇಯಿಂದ ಕಾರ್ಯನಿರ್ವಹಿಸುತ್ತಿದ್ದ ಹರವಿಂದರ್ ಕುಮಾರ್ ಅಲಿಯಾಸ್ ಸೋನು, ವಿದೇಶದಲ್ಲಿದ್ದ ಬಿಕೆಐ ಕಾರ್ಯಕರ್ತರಿಗೆ ಸಂಪನ್ಮೂಲಗಳು ಮತ್ತು ಹಣಕಾಸಿನ ನೆರವು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸಂಚಿನಲ್ಲಿ ಭಾಗಿಯಾಗಲು ವ್ಯಕ್ತಿಗಳನ್ನು ನೇಮಕ ಮಾಡುವುದು, ಅವರಿಗೆ ನಿರ್ದೇಶನ ನೀಡುವುದು, ಶಸ್ತ್ರಾಸ್ತ್ರಗಳ ವ್ಯವಸ್ಥೆ ಮಾಡುವುದು ಮತ್ತು ಅವುಗಳನ್ನು ವಿಕಾಸ್ ಪ್ರಭಾಕರ್ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್‌ಗಳಿಗೆ ತಲುಪಿಸಲು ನೆರವು ನೀಡಿದ್ದಾನೆ ಎಂದು ಎನ್‌ಐಎ ಹೇಳಿದೆ.

ಹರ್ಜೀತ್ ಸಿಂಗ್ ಮತ್ತು ಕುಲ್ಬೀರ್ ಸಿಂಗ್ ಅವರ ಸೂಚನೆಯಂತೆ ಸಂಚಿಗೆ ಸಂಬಂಧಿಸಿದಂತೆ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸಿನ ನೆರವು ಪಡೆದಿದ್ದಾನೆ ಮತ್ತು ಒದಗಿಸಿದ್ದಾನೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಹರವಿಂದರ್ ಕುಮಾರ್‌ನನ್ನು ಯುಎಇಯಿಂದ ಭಾರತಕ್ಕೆ ಗಡಿಪಾರು ಮಾಡಿಸಿ ಬಳಿಕ ಬಂಧಿಸಿರುವುದು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ತಲೆಮರೆಸಿಕೊಂಡ ಆರೋಪಿಗಳನ್ನು ಪತ್ತೆಹಚ್ಚಿ, ಕಾನೂನು ಪ್ರಕ್ರಿಯೆ ಎದುರಿಸಲು ಭಾರತಕ್ಕೆ ಕರೆತರುವ ಎನ್‌ಐಎಯ ಬದ್ಧತೆಯನ್ನು ತೋರಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ತಲೆಮರೆಸಿಕೊಂಡ ಆರೋಪಿಗಳನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಯಲ್ಲಿ ವಿವಿಧ ತನಿಖಾ ಮತ್ತು ಸಂಬಂಧಿತ ಸಂಸ್ಥೆಗಳ ಸಂಯೋಜಿತ ಪ್ರಯತ್ನಗಳ ಫಲವಾಗಿ ಈ ಬೆಳವಣಿಗೆ ನಡೆದಿದೆ ಎಂದು ಎನ್‌ಐಎ ತಿಳಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande