ಸಕ್ಕರೆ ದಾಸ್ತಾನು ಮಿತಿ 1,000 ಕ್ವಿಂಟಲ್ಗೆ ಇಳಿಕೆ: 15 ದಿನಗಳ ಕಾಲಮಿತಿ:ಕೇಂದ್ರ
ಹಬ್ಬದ ಋತುವಿನಲ್ಲಿ ಪರಿಷ್ಕೃತ ಮಾನದಂಡ ಇಂದಿನಿಂದಲೇ ಜಾರಿ; ಅಕ್ರಮ ದಾಸ್ತಾನು, ಕೃತಕ ಅಭಾವ ತಡೆಗೆ ಕೇಂದ್ರದ ಕ್ರಮ
ಪ್ರಹ್ಲಾದ ಜೋಶಿ ಸಂಗ್ರಹ ಚಿತ್ರ


ನವದೆಹಲಿ, 01 ಅಕ್ಟೋಬರ್ (ಹಿ.ಸ.):

ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಸಕ್ಕರೆ ಸುಗಮವಾಗಿ ಲಭ್ಯವಾಗುವಂತೆ ಕೇಂದ್ರ ಸರ್ಕಾರ ಸಕ್ಕರೆ ದಾಸ್ತಾನು ಮತ್ತು ಸಂಗ್ರಹಣೆ ಮಾನದಂಡವನ್ನು ಪರಿಷ್ಕರಿಸಿದೆ. ಪರಿಷ್ಕೃತ ಮಾನದಂಡದಂತೆ ಸಕ್ಕರೆ ವಿತರಕರು ಗರಿಷ್ಠ 1,000 ಕ್ವಿಂಟಲ್‌ ಸಕ್ಕರೆಯನ್ನು ಮಾತ್ರ ದಾಸ್ತಾನು ಮಾಡಬಹುದಾಗಿದ್ದು, ದಾಸ್ತಾನು ಅವಧಿಯನ್ನು 15 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಈ ಮಾನದಂಡ ಇಂದಿನಿಂದಲೇ ಅನ್ವಯವಾಗಲಿದೆ.

ಹಬ್ಬದ ಋತು ಹಾಗೂ ಹೊಸ ಸಕ್ಕರೆ ಋತುವಿನ ಆರಂಭದ ಸಂದರ್ಭದಲ್ಲಿ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸಂಗ್ರಹಿಸುವುದು ಮತ್ತು ಬೆಲೆ ಏರಿಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಹಕ ವ್ಯವಹಾರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಕ್ಕರೆ ವ್ಯಾಪಾರಿಗಳು ದಾಸ್ತಾನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳಿಗಿಂತ ಹೆಚ್ಚು ಕಾಲ ಸಕ್ಕರೆಯನ್ನು ಸಂಗ್ರಹಿಸಿಡುವಂತಿಲ್ಲ. ದೇಶದ ಯಾವುದೇ ಸ್ಥಳದಲ್ಲಿ ಯಾವುದೇ ಸಮಯದಲ್ಲೂ 1,000 ಕ್ವಿಂಟಲ್‌ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಹೊಂದುವಂತಿಲ್ಲ ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋಲ್ಕತ್ತಾ ಮತ್ತು ಅದರ ವಿಸ್ತೃತ ಮಹಾನಗರ ಪ್ರದೇಶ ಹಾಗೂ ಅಸ್ಸಾಂ ರಾಜ್ಯಕ್ಕೆ ಮಾತ್ರ 2,000 ಕ್ವಿಂಟಲ್‌ಗಳ ದಾಸ್ತಾನು ಮಿತಿ ನಿಗದಿಪಡಿಸಲಾಗಿದೆ. ಕೋಲ್ಕತ್ತಾ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಸಕ್ಕರೆ ಪಡೆಯುವುದರ ಜೊತೆಗೆ ಈಶಾನ್ಯ ಪ್ರದೇಶ ಸೇರಿದಂತೆ ದೇಶದ ಪೂರ್ವ ಭಾಗಕ್ಕೆ ಪೂರೈಕೆ ಮಾಡುತ್ತದೆ. ಭೌಗೋಳಿಕ ನಿರ್ಬಂಧಗಳು, ಸಾರಿಗೆ ವ್ಯವಸ್ಥೆ ಹಾಗೂ ಈಶಾನ್ಯ ಪ್ರದೇಶದ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಸ್ಸಾಂಗೆ ಹೆಚ್ಚಿನ ದಾಸ್ತಾನು ಮಿತಿ ನಿಗದಿಪಡಿಸಲಾಗಿದೆ ಎಂದು ಪ್ರಲ್ಹಾದ ಜೋಶಿ ವಿವರಿಸಿದ್ದಾರೆ.

ಚಿಲ್ಲರೆ ಬೆಲೆ ಶೇ.15ರಷ್ಟು ಇಳಿಕೆ

ಕೇಂದ್ರ ಸರ್ಕಾರ ಕೈಗೊಂಡ ಸಮಯೋಚಿತ ಕ್ರಮಗಳಿಂದ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆಯಲ್ಲಿ ಶೇ.15ರಷ್ಟು ಇಳಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಸಕ್ಕರೆಯ ಕಾರ್ಖಾನೆ ದರದಲ್ಲಿಯೂ ಶೇ.28ರಷ್ಟು ಇಳಿಕೆ ಕಂಡುಬಂದಿದೆ. ಕಳೆದ ಮೂರು ವಾರಗಳಿಂದ ದೇಶಾದ್ಯಂತ ಸಕ್ಕರೆ ಬೆಲೆ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.

ಸಕ್ಕರೆ ಕಾರ್ಖಾನೆಗಳು, ವಿತರಕರು, ಸಗಟು ವ್ಯಾಪಾರಿಗಳು ಹಾಗೂ ಮಾರುಕಟ್ಟೆಯ ಇತರ ವರ್ತಕರು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ದಾಸ್ತಾನು ಮಾಡುವುದು, ಕೃತಕ ಅಭಾವ ಸೃಷ್ಟಿಸುವುದು ಹಾಗೂ ಊಹಾತ್ಮಕ ವಹಿವಾಟು ನಡೆಸುವುದನ್ನು ತಡೆಯುವಂತೆ ಪ್ರಲ್ಹಾದ ಜೋಶಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಸಕ್ಕರೆ ಉತ್ಪಾದನೆ ಆರಂಭಿಸಲು ಸೂಚನೆ

ತಮ್ಮ ವ್ಯಾಪ್ತಿಯ ಕೃಷಿ ಹಾಗೂ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಸಕ್ಕರೆ ಕಾರ್ಖಾನೆಗಳು ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಆಯಾ ರಾಜ್ಯ ಸರ್ಕಾರಗಳು ಕೂಡ ಕ್ಷೇತ್ರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಎಲ್ ನಿನೊ ಪರಿಣಾಮದ ಮೇಲ್ವಿಚಾರಣೆ

ಕೆಲವು ಸಕ್ಕರೆ ಉತ್ಪಾದನಾ ಪ್ರದೇಶಗಳಲ್ಲಿ ಎಲ್ ನಿನೊ ಪರಿಣಾಮವನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ, ಗ್ರಾಹಕರ ಹಿತಾಸಕ್ತಿ ಹಾಗೂ ಕಬ್ಬು ಬೆಳೆಗಾರರ ಹಿತಾಸಕ್ತಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳಲಾಗುವುದು ಎಂದು ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ಕಬ್ಬು ಬೆಳೆಗಾರರು ಮತ್ತು ಗ್ರಾಹಕರು ಭಾರತದ ಸಕ್ಕರೆ ನೀತಿಯ ಎರಡು ಪ್ರಮುಖ ಆಧಾರಸ್ತಂಭಗಳಾಗಿದ್ದು, ಕಬ್ಬು ಬೆಳೆಗಾರರಿಗೆ ಲಾಭದಾಯಕ ಆದಾಯ ದೊರಕಿಸುವುದರೊಂದಿಗೆ ಬೆಲೆ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಲು ಮತ್ತು ದೇಶಾದ್ಯಂತ ಸಾಕಷ್ಟು ಸಕ್ಕರೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande