
ಬೆಂಗಳೂರು, 01 ಅಕ್ಟೋಬರ್ (ಹಿ.ಸ.):
ಹೊಸ ಯೋಜನೆಗಳನ್ನು ಘೋಷಿಸುವ ಹಾಗೂ ಸಾಲ ಪಡೆಯುವ ಸಾಮರ್ಥ್ಯ ತಮಗಿಲ್ಲ ಎಂದು ಆರ್ಥಿಕ ಇಲಾಖೆ ಪತ್ರ ಬರೆದಿರುವ ಮಾಹಿತಿಯನ್ನು ವಿಶೇಷ ಅಧಿವೇಶನದಲ್ಲಿ ತಾನು ಬಹಿರಂಗಪಡಿಸಿದ್ದೆ. ಇದರಿಂದ ಮುಜುಗರಕ್ಕೊಳಗಾದ ಕಾಂಗ್ರೆಸ್ ಸರ್ಕಾರ, ಈ ವಿಚಾರಕ್ಕೆ ಸರಿಯಾಗಿ ಉತ್ತರ ನೀಡಲು ಪರದಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್ಥಿಕ ಇಲಾಖೆಯ ಪತ್ರದ ವಿಚಾರಕ್ಕೂ ಬಿಜೆಪಿಯೇ ಕಾರಣ ಎಂದು ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ.
“ಮುಖ್ಯಮಂತ್ರಿಗಳೇ, ಈ ರಾಜ್ಯದಲ್ಲಿ ಆರ್ಥಿಕ ಇಲಾಖೆಯ ಸಚಿವರು ಯಾರು? ಈ ಇಲಾಖೆಯನ್ನು ಬಿಜೆಪಿಗೆ ನೀಡಲಾಗಿದೆಯೇ?” ಎಂದು ಅಶೋಕ ಪ್ರಶ್ನಿಸಿದ್ದಾರೆ.
ಬಜೆಟ್ ಮೀರಿ ಯೋಜನೆಗಳನ್ನು ನೀಡಿದ್ದು ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ಬಾಯಿ ತಪ್ಪಿ ಹೇಳಿದ್ದಾರೆ ಎಂದು ಅಶೋಕ ಆರೋಪಿಸಿದ್ದಾರೆ.
ಕಳೆದ ಬಜೆಟ್‌ನಲ್ಲಿ ರಾಜ್ಯಕ್ಕೆ 8,34,677 ಲಕ್ಷ ಕೋಟಿ ರೂ. ಸಾಲವಿದ್ದು, ಈವರೆಗೆ ರಾಜ್ಯ ಸರ್ಕಾರಗಳು ಮಾಡಿರುವ ಒಟ್ಟು ಸಾಲದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲು ಶೇ.52.33ರಷ್ಟಿದೆ ಎಂದು ಅಶೋಕ ಹೇಳಿದ್ದಾರೆ. ಸಿದ್ದರಾಮಯ್ಯ ಒಬ್ಬರೇ ಪ್ರತಿ ವ್ಯಕ್ತಿಯ ತಲೆಯ ಮೇಲೆ 4,36,803 ರೂ. ಸಾಲದ ಹೊರೆ ಹಾಕಿ ರಾಜ್ಯದ ಆರ್ಥಿಕ ಸ್ಥಿತಿಯನ್ನು ಪಾತಾಳಕ್ಕೆ ಕೊಂಡೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮುನ್ನ ಹೊಸ ಯೋಜನೆಗಳನ್ನು ಘೋಷಿಸದಂತೆ ಆರ್ಥಿಕ ಇಲಾಖೆ ಪತ್ರ ಬರೆದಿದೆ. ಹಾಗಿದ್ದಾಗ ಈ ವಿಚಾರದಲ್ಲಿ ಬಿಜೆಪಿ ಎಲ್ಲಿಂದ ಬಂತು ಎಂದು ಅಶೋಕ ಪ್ರಶ್ನಿಸಿದ್ದಾರೆ.
“ಸಿದ್ದರಾಮಯ್ಯನವರೇ ಹೇಳುವಂತೆ ‘ಕೊಟ್ಟ ಕುದುರೆ ಏರದವ ವೀರನೂ ಅಲ್ಲ ಶೂರನೂ ಅಲ್ಲ’ ಎಂಬಂತೆ, ನಿಮ್ಮ ಶೂರತ್ವವನ್ನು ಆರ್ಥಿಕ ಇಲಾಖೆಯ ಸ್ಥಿತಿ ಸರಿಪಡಿಸುವಲ್ಲಿ ತೋರಿಸಿ. ಅರ್ಥವಿಲ್ಲದ ಆರೋಪ ಮಾಡಿ ಇರುವ ಮರ್ಯಾದೆಯನ್ನೂ ಕಳೆದುಕೊಳ್ಳಬೇಡಿ” ಎಂದು ಅಶೋಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.