
ಮುಂಬಯಿ, 06 ಜನವರಿ (ಹಿ.ಸ.) :
ಆ್ಯಂಕರ್ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ (82) ಅವರು ಇಂದು ಮುಂಜಾನೆ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಲ್ಮಾಡಿ ಅವರು ಪತ್ನಿ, ಮಗ, ಸೊಸೆ, ಇಬ್ಬರು ವಿವಾಹಿತ ಪುತ್ರಿಯರು, ಅಳಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಪುಣೆಯಲ್ಲಿನ ಕಲ್ಮಾಡಿ ಹೌಸ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಅಂತ್ಯಕ್ರಿಯೆಯನ್ನು ಇಂದು ಸಂಜೆ ಪುಣೆಯ ನವಿ ಪೇತ್‌ನಲ್ಲಿರುವ ವೈಕುಂಠ ಚಿತಾಗಾರದಲ್ಲಿ ನೆರವೇರಿಸಲಾಗುವುದು.
ಮೇ 1, 1944ರಂದು ಜನಿಸಿದ ಸುರೇಶ್ ಕಲ್ಮಾಡಿ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಭಾರತೀಯ ವಾಯುಪಡೆಯ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ರಾಜಕೀಯ ಜೀವನ ಆರಂಭಿಸಿದ ಅವರು 1982ರಿಂದ 1996ರವರೆಗೆ ರಾಜ್ಯ ಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದರು. 1996 ಹಾಗೂ 2004ರಲ್ಲಿ ಲೋಕ ಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಪುಣೆಯಿಂದ ದೀರ್ಘಕಾಲ ಸಂಸದರಾಗಿದ್ದ ಅವರು ರೈಲ್ವೆ ರಾಜ್ಯ ಸಚಿವ ಹುದ್ದೆಯನ್ನೂ ಅಲಂಕರಿಸಿದ್ದರು.
ರಾಜಕೀಯದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಕಲ್ಮಾಡಿ ತಮ್ಮದೇ ಆದ ಗುರುತು ಮೂಡಿಸಿದ್ದರು. ಪುಣೆ ಉತ್ಸವ ಹಾಗೂ ಪುಣೆ ಮ್ಯಾರಥಾನ್ ಮೂಲಕ ಪುಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದಿದ್ದರು. ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಅವರ ಅವಧಿಯಲ್ಲಿ ಭಾರತ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು.
ಆದರೆ, ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಹಣ ದುರುಪಯೋಗದ ಆರೋಪಗಳು ಅವರ ರಾಜಕೀಯ ಬದುಕಿಗೆ ಭಾರೀ ಆಘಾತ ನೀಡಿದವು. ಈ ಪ್ರಕರಣದಲ್ಲಿ 2011ರಲ್ಲಿ ಬಂಧನಕ್ಕೆ ಒಳಗಾಗಿದ್ದ ಕಲ್ಮಾಡಿಯನ್ನು ನಂತರ ಕಾಂಗ್ರೆಸ್ ಪಕ್ಷ ಅಮಾನತುಗೊಳಿಸಿತು. ಇದರಿಂದ ಪುಣೆಯ ‘ಸರ್ವಶಕ್ತ ನಾಯಕ’ ಎಂದೇ ಪರಿಗಣಿಸಲ್ಪಟ್ಟಿದ್ದ ಅವರ ರಾಜಕೀಯ ಜೀವನಕ್ಕೆ ತೆರೆ ಬಿದ್ದಿತು.
ಸುಮಾರು 15 ವರ್ಷಗಳ ನಂತರ, ಜಾರಿ ನಿರ್ದೇಶನಾಲಯ ಪ್ರಕರಣದ ಮುಕ್ತಾಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕಲ್ಮಾಡಿಗೆ ಕ್ಲೀನ್ ಚಿಟ್ ನೀಡಿತು. ಈ ತೀರ್ಪಿನ ಬಳಿಕ ಪುಣೆಯಲ್ಲಿ ಅವರ ಬೆಂಬಲಿಗರು ಸಂಭ್ರಮಿಸಿದರೂ, ಆ ವೇಳೆಗೆ ಕಲ್ಮಾಡಿಯ ರಾಜಕೀಯ ಜೀವನ ಸಂಪೂರ್ಣವಾಗಿ ಮುಗಿದಿತ್ತು.
ಕಳೆದ ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಮಾಡಿಯವರ ನಿಧನವು ಪುಣೆಯ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa