
ಚಂಡೀಗಢ, 06 ಜನವರಿ (ಹಿ.ಸ.) :
ಆ್ಯಂಕರ್ : ಪಂಜಾಬ್ ಪೊಲೀಸರು ಹಾಗೂ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಂಯುಕ್ತವಾಗಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತ–ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಸಮೀಪ ಸುಮಾರು 19.980 ಕಿಲೋಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನಾಲ್ವರು ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡಿರುವ ಹೆರಾಯಿನ್‌ನ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯವು ಸುಮಾರು ₹100 ಕೋಟಿ ಎಂದು ಅಂದಾಜಿಸಲಾಗಿದೆ.
ಈ ಕುರಿತು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರು ಇಂದು ಬೆಳಿಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಈ ವರ್ಷದೊಳಗೆ ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ನಡೆಸಲಾದ ಅತಿದೊಡ್ಡ ಕಾರ್ಯಾಚರಣೆಯಾಗಿದ್ದು, ಗಡಿಯಾಚೆಗಿನ ಡ್ರಗ್ ಜಾಲಕ್ಕೆ ಭಾರೀ ಹೊಡೆತ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಆರೋಪಿಗಳಿಗೆ ಪಾಕಿಸ್ತಾನದಲ್ಲಿರುವ ಕಳ್ಳಸಾಗಣೆದಾರರೊಂದಿಗೆ ನೇರ ಸಂಪರ್ಕ ಇರುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಗಡಿಯಾಚೆಯಲ್ಲಿರುವ ಪ್ರಮುಖ ಡೀಲರ್‌ಗಳನ್ನು ಗುರುತಿಸುವುದು, ಅವರ ಪೂರೈಕೆ ಮಾರ್ಗಗಳನ್ನು ಪತ್ತೆಹಚ್ಚುವುದು ಹಾಗೂ ಸಂಪೂರ್ಣ ಕಳ್ಳಸಾಗಣೆ ಜಾಲವನ್ನು ಧ್ವಂಸಗೊಳಿಸುವ ದಿಸೆಯಲ್ಲಿ ತನಿಖೆ ಮುಂದುವರಿದಿದೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.
ಮಾದಕವಸ್ತುಗಳ ಅಕ್ರಮ ಸಾಗಣೆ ತಡೆಗೆ ಪಂಜಾಬ್ ಪೊಲೀಸರು ಮತ್ತು ಬಿಎಸ್‌ಎಫ್ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಿದ್ದು, ಗಡಿ ಪ್ರದೇಶಗಳಲ್ಲಿ ನಿಗಾವನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa