ಪೂರ್ವ ಚಂಪಾರಣ್ ತಲುಪಿದ ವಿಶ್ವದ ಅತಿದೊಡ್ಡ ಶಿವಲಿಂಗ
ಪೂರ್ವ ಚಂಪಾರಣ್, 06 ಜನವರಿ (ಹಿ.ಸ.) : ಆ್ಯಂಕರ್ : ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕಲ್ಯಾಣಪುರ ಬ್ಲಾಕ್‌ನ ಕೈತ್ವಾಲಿಯಾದಲ್ಲಿ ನಿರ್ಮಾಣ ಹಂತದಲ್ಲಿರುವ ವಿರಾಟ್ ರಾಮಾಯಣ ಮಂದಿರದಲ್ಲಿ ಪ್ರತಿಷ್ಠಾಪಿಸಲಿರುವ ವಿಶ್ವದ ಅತಿದೊಡ್ಡ ಶಿವಲಿಂಗವು ಗಂಡಕ್ ನದಿಯ ಮೇಲೆ ನಿರ್ಮಿತ ದುಮಾರಿಯಾಘಾಟ್ ಸೇತುವೆಯ ಮೂಲಕ
Worlds largest shiva


ಪೂರ್ವ ಚಂಪಾರಣ್, 06 ಜನವರಿ (ಹಿ.ಸ.) :

ಆ್ಯಂಕರ್ : ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕಲ್ಯಾಣಪುರ ಬ್ಲಾಕ್‌ನ ಕೈತ್ವಾಲಿಯಾದಲ್ಲಿ ನಿರ್ಮಾಣ ಹಂತದಲ್ಲಿರುವ ವಿರಾಟ್ ರಾಮಾಯಣ ಮಂದಿರದಲ್ಲಿ ಪ್ರತಿಷ್ಠಾಪಿಸಲಿರುವ ವಿಶ್ವದ ಅತಿದೊಡ್ಡ ಶಿವಲಿಂಗವು ಗಂಡಕ್ ನದಿಯ ಮೇಲೆ ನಿರ್ಮಿತ ದುಮಾರಿಯಾಘಾಟ್ ಸೇತುವೆಯ ಮೂಲಕ ಸೋಮವಾರ ಜಿಲ್ಲೆಯ ಗಡಿಯನ್ನು ಪ್ರವೇಶಿಸಿತು.

ತೀವ್ರ ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು “ಹರ ಹರ ಮಹಾದೇವ” ಎಂಬ ಘೋಷಣೆಯೊಂದಿಗೆ ಶಿವಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಶಿವಲಿಂಗವು ದುಮಾರಿಯಾಘಾಟ್ ಸೇತುವೆಯಿಂದ ಮುಂದುವರಿದಂತೆ, ನರಸಿಂಗ್ ಬಾಬಾ ಮಂದಿರ, ದುಬೌಲಿ ಚೌಕ್, ರಾಂಪುರ ಖಜುರಿಯಾ ಚೌಕ್ ಹಾಗೂ ಹುಸೇನಿ ಬಜಾರ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತು ಬಾಬಾ ಭೋಲೆನಾಥನನ್ನು ಹೂವಿನ ಹಾರಗಳೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಮಹಿಳೆಯರು, ವೃದ್ಧರು ಮತ್ತು ಯುವಕರು ಎಲ್ಲೆಡೆ ಅಪಾರ ಉತ್ಸಾಹದಿಂದ ಭಾಗವಹಿಸಿದರು.

ಸೋಮವಾರ ತಡ ರಾತ್ರಿ ಶಿವಲಿಂಗವು ದುಮಾರಿಯಾಘಾಟ್ ಸೇತುವೆ ಬಳಿ ತಲುಪುತ್ತಿದ್ದಂತೆ, ದರ್ಶನಾರ್ಥಿಗಳ ಮಹಾಪೂರವೇ ನೆರೆದಿತು.

ಬಳಿಕ ದುಬೌಲಿ ಚೌಕ್ ಹಾಗೂ ರಾಂಪುರ ಖಜುರಿಯಾ ಚೌಕ್ ಪ್ರದೇಶಗಳಲ್ಲಿ ಭಕ್ತರ ಅಪಾರ ಜನಸಂದಣಿ ಕಂಡು ಬಂದಿತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಆಡಳಿತವು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಯಿತು. ಭಕ್ತರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ–27ರಲ್ಲಿ ಏಕಮುಖ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಈ ಸಂದರ್ಭಕ್ಕೆ ಸಂಬಂಧಿಸಿದಂತೆ NHAI ತಂಡದೊಂದಿಗೆ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಐತಿಹಾಸಿಕ ಕ್ಷಣವನ್ನು ಸೆರೆಹಿಡಿಯಲು ಭಕ್ತರು ಹಾಗೂ ಸಾರ್ವಜನಿಕರು ಫೋಟೋ ಮತ್ತು ವೀಡಿಯೊಗಳನ್ನು ದಾಖಲಿಸುವಲ್ಲಿ ತೊಡಗಿದ್ದರು.

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಿರ್ಮಿಸಲಾದ ಈ ವಿಶ್ವದ ಅತಿದೊಡ್ಡ ಶಿವಲಿಂಗವು ಸುಮಾರು 210 ಮೆಟ್ರಿಕ್ ಟನ್ ತೂಕ ಮತ್ತು 33 ಅಡಿ ಎತ್ತರ ಹೊಂದಿದೆ. ಶಿವಲಿಂಗವನ್ನು ಸಾಗಿಸಲು 96 ಚಕ್ರಗಳ ವಿಶೇಷ ಟ್ರಕ್ ಅನ್ನು ಬಳಸಲಾಗಿದೆ. ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆಯ ಬಳಿಕ ಈ ಶಿವಲಿಂಗವನ್ನು ವಿರಾಟ್ ರಾಮಾಯಣ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande