
ಬೆಂಗಳೂರು, 06 ಜನವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಇಂದು ಸೇರಿದೆ. ರಾಜ್ಯದಲ್ಲಿ ಅತಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದೇವರಾಜ ಅರಸು ಅವರ ದಾಖಲೆಯನ್ನು ಮುರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜನವರಿ 6 ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಐತಿಹಾಸಿಕ ದಿನವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಾಧನೆಯನ್ನು ಅವರು ತಮ್ಮ ಹೆಸರಿಗೆ ಬರಮಾಡಿಕೊಂಡಿದ್ದಾರೆ.
ಇಂದಿನ ದಿನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು 7 ವರ್ಷ 239 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ 2,789 ದಿನಗಳ ಕಾಲ ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಮಗೊಳಿಸಿ ನಂತರ ಮುರಿದ ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಸಿದ್ದರಾಮಯ್ಯ ಅವರನ್ನು ಈಗ ‘ದಾಖಲೆ ರಾಮಯ್ಯ’ ಎಂದು ಕರೆಯಲಾಗುತ್ತಿದೆ.
2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ
ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕನಾಗಿರುವ ಸಿದ್ದರಾಮಯ್ಯ ಅವರು ತಮ್ಮದೇ ಆದ ರಾಜಕೀಯ ಚಾತುರ್ಯ ಮತ್ತು ಜನಬೆಂಬಲದ ಮೂಲಕ ನಾಯಕತ್ವಕ್ಕೆ ಏರಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಅವರು 2013ರಿಂದ 2018ರವರೆಗೆ ಪೂರ್ಣ ಐದು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಈ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರು 1,829 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
2023ರಲ್ಲಿ ಎರಡನೇ ಅವಧಿ, ಹೊಸ ದಾಖಲೆ
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಗಳಿಸಿದ ಬಳಿಕ, ಮೇ 20, 2023ರಂದು ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಿದರು. ಇದೀಗ ಎರಡನೇ ಅವಧಿಯ ಆಡಳಿತದೊಂದಿಗೆ ಒಟ್ಟು ಅವಧಿಯಲ್ಲಿ ದೇವರಾಜ ಅರಸು ಅವರ ದಾಖಲೆಯನ್ನು ಮುರಿದು ರಾಜ್ಯದ ದೀರ್ಘಕಾಲದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲೋಕದಳದಿಂದ ಕಾಂಗ್ರೆಸ್‌ವರೆಗೆ ರಾಜಕೀಯ ಪಯಣ
ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಲೋಕದಳದಿಂದ ಆರಂಭವಾಯಿತು. ಬಳಿಕ ಜನತಾದಳ ಸೇರಿ ರಾಜ್ಯ ರಾಜಕೀಯದಲ್ಲಿ ಪ್ರಭಾವಶಾಲಿ ನಾಯಕರಾಗಿ ಬೆಳೆದ ಅವರು, ಜೆಡಿಎಸ್ ಪಕ್ಷವನ್ನು ತೊರೆದು 2006ರಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆಗೆ ಶ್ರಮಿಸಿ, ಪಕ್ಷದ ಬಲಿಷ್ಠ ನಾಯಕನಾಗಿ ಹೊರಹೊಮ್ಮಿದ ಸಿದ್ದರಾಮಯ್ಯ ಇದೀಗ ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಅಪೂರ್ವ ದಾಖಲೆ ನಿರ್ಮಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಅವಧಿ ಸೇವೆ ಸಲ್ಲಿಸಿರುವವರ ಪಟ್ಟಿಯಲ್ಲಿ ದೇವರಾಜ ಅರಸು (7 ವರ್ಷ 239 ದಿನ) ಮೊದಲ ಸ್ಥಾನದಲ್ಲಿದ್ದರೆ, ಎಸ್. ನಿಜಲಿಂಗಪ್ಪ (7 ವರ್ಷ 175 ದಿನ), ರಾಮಕೃಷ್ಣ ಹೆಗಡೆ (5 ವರ್ಷ 216 ದಿನ) ಮತ್ತು ಬಿ.ಎಸ್. ಯಡಿಯೂರಪ್ಪ (5 ವರ್ಷ 82 ದಿನ) ಮುಂದಿನ ಸ್ಥಾನಗಳಲ್ಲಿ ಇದ್ದರು. ಇದೀಗ ಸಿದ್ದರಾಮಯ್ಯ ಅವರು ಅರಸು ಅವರ ದಾಖಲೆಯನ್ನು ಮುರಿದು ಮೊದಲ ಸ್ಥಾನಕ್ಕೇರಿದ್ದಾರೆ.
ಇದೇ ವೇಳೆ ರಾಜ್ಯ ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಹೊಸ ದಾಖಲೆ ಬರೆದಿದ್ದಾರೆ. ಇದುವರೆಗೂ ಅವರು ಒಟ್ಟು 16 ಬಜೆಟ್ ಮಂಡಿಸಿದ್ದು, ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa