
ಕೃಷಿ ಇಲಾಖೆಯಿಂದ ಸಿರಿಧಾನ್ಯಗಳ ಪಾಕ ಸ್ಪರ್ಧೆ
ಕೋಲಾರ, ೦೩ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಇತ್ತೀಚಿನ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಉಂಟಾಗುತ್ತಿರುವ ಮಧುಮೇಹ ಹಾಗೂ ರಕ್ತದೊತ್ತಡದಂತಹ ಕಾಯಿಲೆಗಳನ್ನು ತಡೆಗಟ್ಟಲು ಸಾರ್ವಜನಿಕರು ಸಿರಿಧಾನ್ಯಗಳ ಬಳಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಕರೆ ನೀಡಿದರು.
ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ದತಿಯ ಉತ್ಕೃಷ್ಟ ಕೇಂದ್ರ ಸಭಾಂಗಣದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಠಿಕ ಅಭೀಯಾನ ಕಾರ್ಯಕ್ರವದಡಿ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ-೨೦೨೬ ಪ್ರಯುಕ್ತ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕಸ್ಪರ್ಧೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪೌಷ್ಟಿಕಾಂಶಗಳ ಆಗರ ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿರಿಧಾನ್ಯಗಳು ಕೇವಲ ಆಹಾರವಲ್ಲ, ಅವು ಪೌಷ್ಟಿಕಾಂಶಗಳ ಆಗರವಾಗಿದ್ದು, ಅಕ್ಕಿ ಮತ್ತು ಗೋಧಿಗೆ ಹೋಲಿಸಿದರೆ ಇವುಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಶ, ವಿಟಮಿನ್ ಹಾಗೂ ನಾರಿನಂಶ ಹೇರಳವಾಗಿದೆ. ಸಿರಿಧಾನ್ಯಗಳ ಅರಿವು ಮೂಡಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ದೆಹಲಿಯಂತಹ ಕಡೆಗಳಲ್ಲಿ ಸಿರಿಧಾನ್ಯಗಳ ಮಳಿಗೆಗಳನ್ನು ತೆರೆದು ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಂಕ್ ಫುಡ್, ಬೇಕರಿ ಪದಾರ್ಥಗಳ ವ್ಯಾಮೋಹದಿಂದ ಇಂದಿನ ಪೀಳಿಗೆಯ ಮಕ್ಕಳು ಪಿಜ್ಜಾ, ಬರ್ಗರ್ ಮತ್ತು ಚಾಕೊಲೇಟ್‌ಗಳಂತಹ ಜಂಕ್ ಫುಡ್‌ಗಳಿಗೆ ಮಾರುಹೋಗುತ್ತಿರುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದು ಕೇವಲ ಕಂಪನಿಗಳ ಆದಾಯ ಹೆಚ್ಚಿಸುವುದಕ್ಕಷ್ಟೇ ಸೀಮಿತ. ತಾವು ಬಾಲ್ಯದಲ್ಲಿ ಸೇವಿಸುತ್ತಿದ್ದ ಆರ್ಕದ ಅನ್ನ ಮತ್ತು ಮಜ್ಜಿಗೆಯ ರುಚಿಯನ್ನು ಸ್ಮರಿಸಿದ ಅವರು, ಅಂದಿನ ಪೌಷ್ಟಿಕ ಆಹಾರವೇ ಹಿರಿಯರ ದೀರ್ಘಾಯುಷದ ರಹಸ್ಯವಾಗಿತ್ತು ಎಂದರು.
ಜಿಲ್ಲೆಯಲ್ಲಿ ಸುಮಾರು ೧೦,೦೦೦ ಸ್ವಸಹಾಯ ಗುಂಪುಗಳಿದ್ದು, ಸುಮಾರು ೧ ಲಕ್ಷ ಸದಸ್ಯರಿದ್ದಾರೆ. ಇವರ ಮೂಲಕ ಸಿರಿಧಾನ್ಯಗಳ ಮಹತ್ವವನ್ನು ಮನೆ ಮನೆಗೆ ತಲುಪಿಸುವುದು ಸುಲಭ ಎಂದು ಅವರು ಅಭಿಪ್ರಾಯಪಟ್ಟರು. ಪಾಕಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾರ್ಥಿಗಳಿಗೆ ಶುಭ ಕೋರಿದ ಅವರು ಈ ಕಲಿಕೆಯನ್ನು ಕೇವಲ ಸ್ಪರ್ಧೆಗೆ ಸೀಮಿತಗೊಳಿಸದೆ ದೈನಂದಿನ ಜೀವನದಲ್ಲಿ ಅಳವಳಡಿಕೊಳ್ಳಲು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕಿ ಜಾವೇದಾ ನಸೀಮಾ ಖಾನಮ್ ಅವರು ಮಾತನಾಡಿ ಸಿರಿಧಾನ್ಯಗಳಲ್ಲಿ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ರಾಗಿ ಎಂದರೆ ಕೇವಲ ಮುದ್ದೆ ಅಥವಾ ರೊಟ್ಟಿಯಷ್ಟೇ ಅಲ್ಲದೆ, ಅದರಿಂದ ಶಾಮಿಗೆ, ಚಕ್ಕುಲಿ, ಕೋಡುಬಳೆ ಹಾಗೂ ವಿವಿಧ ಸಿಹಿ ತಿಂಡಿಗಳನ್ನು ತಯಾರಿಸಬಹುದು. ಇಂತಹ ವೈವಿಧ್ಯಮಯ ಹಾಗೂ ರುಚಿಯಾದ ಅಡುಗೆಗಳನ್ನು ತಯಾರಿಸುವುದರಿಂದ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಕೃಷಿ ಉಪನಿರ್ದೇಶಕ ನಾಗರಾಜ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ. ಕೆ. ಎನ್. ಕವನ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಚಿತ್ರ - ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ ಪ್ರಯುಕ್ತ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕಸ್ಪರ್ಧೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್