
ಗದಗ, 03 ಜನವರಿ (ಹಿ.ಸ.) :
ಆ್ಯಂಕರ್ : ನಾಡಿನ ಶಕ್ತಿದೇವತೆ ಬಾದಾಮಿಯ ಬನಶಂಕರಿ ದೇವಿಯ ಜಾತ್ರೆಯ ಸಡಗರ–ಸಂಭ್ರಮ ನಡೆಯಿತು. ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ರಥೋತ್ಸವಕ್ಕೆ ಅಗತ್ಯವಿರುವ ಹಗ್ಗವನ್ನು ಕೊಂಡೊಯ್ಯುವ ವಿಧಿ ವಿಧಾನಗಳು ಇಂದು ಅದ್ಧೂರಿಯಾಗಿ ನೆರವೇರಿದವು.
ರಥೋತ್ಸವದ ಹಗ್ಗ ಸಾಗಿಸುವ ಚಕ್ಕಡಿಗೆ ಬಾಳೆಗಿಡಗಳು, ತಳಿರು ತೋರಣ, ಬಣ್ಣಬಣ್ಣದ ಹೂವಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಬಳಿಕ ಎತ್ತುಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಸುಮಾರು ನಾಲ್ಕು ಕ್ವಿಂಟಾಲ್ ಬಾರದ ಹಗ್ಗವನ್ನು ಹೊತ್ತು ಎತ್ತುಗಳು ಹರಿಯುವ ಮಲಪ್ರಭಾ ನದಿಯನ್ನು ದಾಟಿದ ದೃಶ್ಯಗಳು ಕಣ್ಮುಂಬಿಕೊಳ್ಳುತ್ತಿದ್ದಂತೆ ಸಾವಿರಾರು ಭಕ್ತರು ಜಯಘೋಷ, ಸಿಳ್ಳೆ, ಚಪ್ಪಾಳೆಗಳೊಂದಿಗೆ ಸಂಭ್ರಮಿಸಿದರು.
ಗ್ರಾಮದ ಆರು ಗೌಡರ ಕುಟುಂಬಗಳಿಂದ ಎತ್ತುಗಳನ್ನು ಕಟ್ಟುವ ಸಂಪ್ರದಾಯವಿದ್ದು, ರಥೋತ್ಸವಕ್ಕಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಎತ್ತುಗಳನ್ನು ಖರೀದಿಸಿ, ನದಿ ದಾಟುವ ಅಭ್ಯಾಸಕ್ಕಾಗಿ 15 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಹಗ್ಗ ಹೊತ್ತ ರಥಚಕ್ಕಡಿ ನದಿ ದಾಟುತ್ತಿದ್ದಂತೆ ನೆರೆದ ಭಕ್ತಸಮೂಹ ಭಕ್ತಿಭಾವದಿಂದ ಬರಮಾಡಿಕೊಂಡ ದೃಶ್ಯ ಮನಸೂರೆಗೊಂಡಿತು.
ತವರೂರಿನಿಂದ ಹಗ್ಗ ಬನಶಂಕರಿಗೆ ತಲುಪುತ್ತಿದ್ದಂತೆ ಸಂಜೆ ಅದ್ಧೂರಿ ರಥೋತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡವು. ತಲೆತಲೆಮಾರಿನಿಂದ ನಡೆದುಬಂದ ಈ ಸಂಪ್ರದಾಯದಂತೆ ಮಾಡಲಗೇರಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಎತ್ತುಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಜಾತ್ರೆಗೆ ತೆರಳಿ ದೇವಿಯ ದರ್ಶನ ಪಡೆದರು. ಮಳೆ–ಬೆಳೆ ಸಮೃದ್ಧಿಯಾಗಲೆಂದು ಭಕ್ತರು ದೇವಿಯ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹರಿಯುವ ಮಲಪ್ರಭಾ ನದಿಯನ್ನು ದಾಟಿ ಹಗ್ಗವನ್ನು ಹೊತ್ತು ಸಾಗುವ ಎತ್ತುಗಳ ದೃಶ್ಯಗಳು ಮೈ ಜುಮ್ಮ ಎನ್ನುವಂತೆ ಇದ್ದು, ಇದನ್ನು ದೇವಿಯ ಮಹಿಮೆ ಹಾಗೂ ಪವಾಡವೆಂದು ಭಕ್ತರು ನಂಬಿದ್ದಾರೆ. ಬನಶಂಕರಿ ದೇವಿಯ ಜಾತ್ರೆ ಭಕ್ತಿಭಾವ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು
ಹಿಂದೂಸ್ತಾನ್ ಸಮಾಚಾರ್ / lalita MP