
ಸುಣ್ಣಕಲ್ಲುಗೂಡು ಗ್ರಾಮದಲ್ಲಿ ಓಂ ಶಕ್ತಿಯ ಮೊದಲನೇ ವರ್ಷದ ವಾರ್ಷಿಕೋತ್ಸವ
ಕೋಲಾರ, ೦೩ ಡಿಸೆಂಬರ್ (ಹಿ.ಸ) :
ಆ್ಯಂಕರ್ : ತಾಲೂಕಿನ ವೇಮಗಲ್ ಪಟ್ಟಣದ ಸುಣ್ಣಕಲ್ಲುಗೂಡು ಗ್ರಾಮದಲ್ಲಿ ಓಂ ಶಕ್ತಿ ಅಮ್ಮನವರ ಮೊದಲನೇ ವರ್ಷದ ವಾರ್ಷಿಕೋತ್ಸವನ್ನು ವಿಜೃಂಭಣೆಯಿಂದ ಮಾಡಲಾಯಿತು.
ಓಂ ಶಕ್ತಿ ಅಮ್ಮನವರ ಮೊದಲನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿತ್ತು, ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಮದ ಹೆಣ್ಣು ಮಕ್ಕಳು ಹಾಗೂ ಮುತ್ತೈದೆಯರು ಪ್ರತಿಯೊಬ್ಬರು ಕೆಂಪು ವಸ್ತ್ರಗಳನ್ನು ಹಾಗೂ ಕೆಂಪು ಸೀರೆಗಳನ್ನು ಉಟ್ಟು ಸ್ಟಿಲ್ ಬಿಂದಿಗೆಗಳಿಗೆ ಅರಿಶಿನ ಧಾರವನ್ನು ಪೂರ್ತಿಯಾಗಿ ಸುತ್ತಿ ಅದರ ಮೇಲೆ ತೆಂಗಿನಕಾಯಿಯನ್ನು ಇಟ್ಟು ಹೂವಗಳನ್ನು ಹಾಕಿ ಕಳಸದಂತೆ ತಯಾರಿಸಿ ಶ್ರದ್ಧಾಪೂರ್ವಕವಾಗಿ ಓಂ ಶಕ್ತಿ ಅಮ್ಮನವರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಓಂ ಶಕ್ತಿ ಅಮ್ಮನವರ ಮೂರ್ತಿಯನ್ನು ಯುವಕರು ತಮ್ಮ ಹೆಗಲ ಮೇಲೆ ಹೊತ್ತು ಮುತ್ತೈದೆಯರು ಹೊತ್ತಂತಹ ಕಳಶಗಳೊಂದಿಗೆ ಓಂ ಶಕ್ತಿ ಅಮ್ಮನವರ ಭಕ್ತಿ ಭಜನೆ ಗೀತೆಗಳನ್ನು ಹಾಡುತ್ತಾ ತಮಿಳುನಾಡಿನ ಹೆಸರುವಾಸಿ ಪೊಂಬು ವಾದ್ಯಗಳೊಂದಿಗೆ ಪಟ್ಟಣದ ದೇವಾಲಯಗಳನ್ನು ಪ್ರದಕ್ಷಿಣೆಯನ್ನು ಹಾಕಿ ಪೂಜೆ ನೇರವೇರಿಸಲಾಯಿತು.
ವಾರ್ಷಿಕೋತ್ಸವದ ಕಾರ್ಯಕ್ರಮ ಪ್ರಯುಕ್ತ ಹೋಮ ಅವನ ಶಾಂತಿ ಪೂಜೆ, ವೇಲ್ ವೇ ಪೂಜೆ, ವಿಶೇಷ ಅಲಂಕಾರ, ದೀಪಾಲಂಕಾರ, ತೀರ್ಥ ಪ್ರಸಾದ ವಿತರಿಸಿ ಸಹಸ್ರಾರು ಜನರಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು.
ಭಾನುವಾರ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯಗಳೊಂದಿಗೆ ಓಂ ಶಕ್ತಿ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಮಾಡಲಾಗುವುದು ಎಂದು ದೇವಾಲಯದ ಪೂಜಾರಿ ಓಂ ಶಕ್ತಿ ನಾಗರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಪೂಜಾರಿ ಓಂ ಶಕ್ತಿ ನಾಗರಾಜ್, ಆನಂದ್, ಲಕ್ಷ್ಮಿಕಾಂತ್, ಕಾಂತರಾಜ್, ಮದನ್, ರಾಮಾಂಜಿ, ತಿಮ್ಮರಾಜು, ನಿರ್ಮಿತ್, ಪ್ರವೀಣ್ ಸೇರಿದಂತೆ ಓಂ ಶಕ್ತಿ ಅಮ್ಮನವರ ಭಕ್ತ ಮಂಡಳಿಯವರು ಗ್ರಾಮಸ್ಥರು ಯುವಕರು ಸಾರ್ವಜನಿಕರು ಉಪಸ್ಥಿತರಿದ್ದರು.
ಚಿತ್ರ- ಕೋಲಾರ ತಾಲೂಕಿನ ವೇಮಗಲ್ ಪಟ್ಟಣದ ಸುಣ್ಣಕಲ್ಲುಗೂಡು ಗ್ರಾಮದಲ್ಲಿ ಓಂ ಶಕ್ತಿ ಅಮ್ಮನವರ ಮೊದಲನೇ ವರ್ಷದ ವಾರ್ಷಿಕೋತ್ಸವ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್