ಬಳ್ಳಾರಿ ಪ್ರಕರಣ ; ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸರಕಾರ ಯತ್ನ : ವಿಜಯೇಂದ್ರ
ಬೆಂಗಳೂರು, 03 ಜನವರಿ (ಹಿ.ಸ.) : ಆ್ಯಂಕರ್ : ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ನಿರ್ಲಜ್ಜ ಗೂಂಡಾಗಿರಿ, ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರ ಮೇಲೆ ನಡೆದ ಹತ್ಯೆ ಪ್ರಯತ್ನ, ಹಲ್ಲೆ ಹಾಗೂ ಕಾನೂನು ಸುವ್ಯವಸ್ಥೆಯ ಸಂಪೂರ್ಣ ಕುಸಿತಕ್ಕೆ ನೇರ ಹೊಣೆಗಾರರಾದವರು ಕಾಂಗ್ರೆಸ್ ಸರ್ಕಾರವೇ ಎಂದು ಬ
ಬಳ್ಳಾರಿ ಪ್ರಕರಣ ; ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸರಕಾರ ಯತ್ನ : ವಿಜಯೇಂದ್ರ


ಬೆಂಗಳೂರು, 03 ಜನವರಿ (ಹಿ.ಸ.) :

ಆ್ಯಂಕರ್ : ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ನಿರ್ಲಜ್ಜ ಗೂಂಡಾಗಿರಿ, ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರ ಮೇಲೆ ನಡೆದ ಹತ್ಯೆ ಪ್ರಯತ್ನ, ಹಲ್ಲೆ ಹಾಗೂ ಕಾನೂನು ಸುವ್ಯವಸ್ಥೆಯ ಸಂಪೂರ್ಣ ಕುಸಿತಕ್ಕೆ ನೇರ ಹೊಣೆಗಾರರಾದವರು ಕಾಂಗ್ರೆಸ್ ಸರ್ಕಾರವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಘಟನೆಯಲ್ಲಿ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿರುವಂತಹ ಗಂಭೀರ ಸ್ಥಿತಿಯಲ್ಲೂ ರಾಜಕೀಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು, ಕೇವಲ ಒಂದು ದಿನದ ಹಿಂದಷ್ಟೇ ಅಧಿಕಾರ ಸ್ವೀಕರಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಿರುವುದು ಸರ್ಕಾರದ ಅಪ್ರಬುದ್ಧತೆ ಹಾಗೂ ವೈಫಲ್ಯವನ್ನು ಮುಚ್ಚಿಕೊಳ್ಳುವ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಆಡಳಿತ ಪಕ್ಷದ ಶಾಸಕರ ಪ್ರಚೋದನಕಾರಿ ನಡವಳಿಕೆ ಹಾಗೂ ಆಡಳಿತ ಪಕ್ಷದ ಕಾರ್ಯಕರ್ತರ ಪುಂಡಾಟಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಜಯೇಂದ್ರ ಟೀಕಿಸಿದ್ದು, ಅಧಿಕಾರಿಗೆ ಕನಿಷ್ಠ ಪರಿಸ್ಥಿತಿಯನ್ನು ಅವಲೋಕಿಸಲು ಅವಕಾಶವನ್ನೂ ನೀಡದೆ ಅಮಾನತು ಮಾಡಿರುವುದು ಆಡಳಿತದ ದಿವಾಳಿತನವನ್ನು ತೋರಿಸುತ್ತದೆ ಎಂದಿದ್ದಾರೆ.

ಸಾರ್ವಜನಿಕವಾಗಿ ಗುಂಡು ಹಾರಿಸಿ ಭಯೋತ್ಪಾದನೆ ನಡೆಸಿದ ಶಾಸಕರ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಸರ್ಕಾರಕ್ಕಿದೆಯೇ ಎಂದು ಪ್ರಶ್ನಿಸಿರುವ ಅವರು, ಕೇವಲ ಅಧಿಕಾರಿಗಳ ತಲೆದಂಡದಿಂದ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.

ಬಳ್ಳಾರಿಯಲ್ಲಿ ಗುಂಡು ಹಾರಿಸಿದ್ದು ಯಾರು, ಯಾರ ಪ್ರಚೋದನೆಯಿಂದ ಈ ಘಟನೆ ನಡೆದಿದೆ ಎಂಬ ಸತ್ಯ ಸರ್ಕಾರದ ಮುಲಾಜಿನ ತನಿಖೆಯಿಂದ ಹೊರಬರುವುದಿಲ್ಲ ಎಂದು ಆರೋಪಿಸಿದ ವಿಜಯೇಂದ್ರ, ಸ್ವಲ್ಪವಾದರೂ ನೈತಿಕತೆ ಇದ್ದರೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯವೇ ತಲೆತಗ್ಗಿಸುವಂತಹ ಈ ಗೂಂಡಾ ವರ್ತನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ವಿಜಯೇಂದ್ರ, ಸರಕಾರ ತಮ್ಮ ವೈಫಲ್ಯವನ್ನು ಮರೆಮಾಚಲು ಪ್ರಾಮಾಣಿಕ ಅಧಿಕಾರಿಗಳನ್ನು ಬಲಿಪಶು ಮಾಡಿ ಅವರ ಸ್ಥೈರ್ಯ ಕುಗ್ಗಿಸುವ ಕಾಂಗ್ರೆಸ್‌ನ ಕೆಟ್ಟ ಪ್ರವೃತ್ತಿ ಕೂಡಲೇ ನಿಲ್ಲಬೇಕು ಎಂದು ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande