
ಬೆಂಗಳೂರು, 03 ಜನವರಿ (ಹಿ.ಸ.) :
ಆ್ಯಂಕರ್ : ಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ರಾಜ್ಯ ಸರ್ಕಾರ ಸುಳ್ಳು ಮಾಹಿತಿ ನೀಡುವ ಮೂಲಕ ಬಡವರು ಹಾಗೂ ಕೂಲಿಕಾರರನ್ನು ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಹಿಂದಿನ ನರೇಗಾ ಯೋಜನೆಯಲ್ಲಿ ವರ್ಷಕ್ಕೆ 100 ದಿನಗಳ ಉದ್ಯೋಗ ಖಾತರಿ ಇತ್ತು. ಇದೀಗ ಕೇಂದ್ರ ಸರ್ಕಾರ ಅದನ್ನು 125 ದಿನಗಳಿಗೆ ಹೆಚ್ಚಿಸಿದ್ದು, ಈ ದಿನಗಳ ಹಂಚಿಕೆಯನ್ನು ಗ್ರಾಮ ಪಂಚಾಯತಿಗಳೇ ನಿರ್ಧರಿಸಬಹುದಾಗಿದೆ. ಆದರೆ ಕೇಂದ್ರ ಸರ್ಕಾರವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂಬ ಭೀತಿಯನ್ನು ಕಾರ್ಮಿಕರಲ್ಲಿ ರಾಜ್ಯ ಸರ್ಕಾರ ಉಂಟು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಹಾಗೂ ರೈತರಿಗೆ ಅನುಕೂಲವಾಗುವಂತೆ ವರ್ಷದಲ್ಲಿ ಎರಡು ಬಾರಿ ಒಟ್ಟು 60 ದಿನಗಳ ಕಾಲ ಕೃಷಿ ಕೆಲಸಗಳಿಗೆ ಉದ್ಯೋಗ ಖಾತರಿ ಕೆಲಸಗಳಿಂದ ರಜೆ ನೀಡಲಾಗಿದೆ. ಇದು ದೇಶದಾದ್ಯಂತ ರೈತರ ಬೇಡಿಕೆಯ ಮೇರೆಗೆ ತೆಗೆದುಕೊಂಡ ನಿರ್ಧಾರವಾಗಿದ್ದು, ಇದನ್ನು ವಿರೋಧಿಸುವ ಮೂಲಕ ರಾಜ್ಯ ಸರ್ಕಾರ ರೈತ ವಿರೋಧಿ ಮತ್ತು ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ. ವರ್ಷದಲ್ಲಿ 125 ದಿನಗಳ ನಂತರ ಕಾರ್ಮಿಕರು ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಅನಿವಾರ್ಯವೆಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಭ್ರಷ್ಟಾಚಾರ ತಡೆ ಕ್ರಮಗಳು
ಜಿ ರಾಮ್ ಜಿ ಯೋಜನೆಯಲ್ಲಿ ಕಾರ್ಮಿಕರ ವೇತನವನ್ನು ಒಂದು ವಾರದಿಂದ 15 ದಿನಗಳೊಳಗೆ ಕಡ್ಡಾಯವಾಗಿ ಪಾವತಿಸುವ ವ್ಯವಸ್ಥೆ ಇದೆ. ಆದರೂ ಅನುದಾನ ಸಿಗುವುದಿಲ್ಲ ಎಂಬ ನೆಪ ಹೇಳಿ ರಾಜ್ಯ ಸರ್ಕಾರ ಕಾರ್ಮಿಕರನ್ನು ಯೋಜನೆಯಿಂದ ದೂರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಸುಳ್ಳು ಕೂಲಿಕಾರರ ಹೆಸರಿನಲ್ಲಿ ವೇತನ ಪಡೆಯುವಂತಹ ದುರ್ಬಳಕೆಯನ್ನು ತಡೆಗಟ್ಟಲು ಬಯೋಮೆಟ್ರಿಕ್ ತಂತ್ರಜ್ಞಾನ ಅಳವಡಿಸಲಾಗಿದೆ. ಆದರೆ ಇದರಿಂದ ಕಾರ್ಮಿಕರಿಗೆ ವಂಚನೆ ಆಗುತ್ತದೆ ಎಂಬ ಸುಳ್ಳು ಪ್ರಚಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60:40 ಅನುದಾನ ಹಂಚಿಕೆ ವ್ಯವಸ್ಥೆ ಇರುವುದರಿಂದ ಹೆಚ್ಚು ದಿನಗಳು ಮತ್ತು ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ಅವಕಾಶವಿದೆ. ರಾಜ್ಯ ಸರ್ಕಾರಗಳು ಧುಂದು ವೆಚ್ಚ ಹಾಗೂ ಭ್ರಷ್ಟಾಚಾರವನ್ನು ಕಡಿಮೆ ಮಾಡಿ ರೈತರು ಮತ್ತು ಕೂಲಿಕಾರರಿಗೆ ನೆರವಾಗುವತ್ತ ಗಮನ ಹರಿಸಬೇಕಿದೆ. ಅದನ್ನು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ನಿರುದ್ಯೋಗ ನಿವಾರಣೆಗೆ ಸಹಕಾರಿ
ವರ್ಷಕ್ಕೆ 125 ದಿನಗಳ ಉದ್ಯೋಗ ಖಾತರಿ ಗ್ರಾಮೀಣ ಪ್ರದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ. ಯೋಜನೆಯಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ಕಡಿಮೆಯಾಗಲಿದ್ದು, ಬಡವರು, ಕಾರ್ಮಿಕರು ಮತ್ತು ದೀನ ದಲಿತರಿಗೆ ನ್ಯಾಯಸಮ್ಮತ ಕೆಲಸ ಹಾಗೂ ಸಮಯಕ್ಕೆ ಸರಿಯಾದ ವೇತನ ಸಿಗಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯೋಜನೆ ರೂಪಣೆ ಮತ್ತು ಅನುಷ್ಠಾನದಲ್ಲಿ ಪಂಚಾಯತಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆಯಲಿದ್ದು, ಗ್ರಾಮೀಣ ಅಗತ್ಯಗಳಿಗೆ ತಕ್ಕಂತೆ ಆಸ್ತಿ ನಿರ್ಮಾಣವಾಗಲಿದೆ. ಇದರಿಂದ ವಿಕಸಿತ ಭಾರತದ ಗುರಿ ಸಾಧನೆಗೆ ಗ್ರಾಮೀಣ ವಿಕಾಸ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa