ಜಾನಪದ ಸಂಗೀತ ಕ್ಷೇತ್ರಕ್ಕೆ ಡಾ. ಚಂದ್ರಶೇಖರ ಕಂಬಾರ ಕೊಡುಗೆ ಅಪಾರ : ಡಾ. ಶಿವಾನಂದ ವಿರಕ್ತಮಠ
ಹಂಪಿ, 03 ಜನವರಿ (ಹಿ.ಸ.) : ಆ್ಯಂಕರ್ : ಡಾ.ಚಂದ್ರಶೇಖರ ಕಂಬಾರ ಅವರ ವ್ಯಕ್ತಿತ್ವ, ಬರವಣಿಗೆ, ನಾಟಕ. ಜಾನಪದ ಗೀತೆಗಳು ಇಂದಿಗೂ ಕನ್ನಡ ವಿಶ್ವವಿದ್ಯಾಲಯದ ಹಿರಿಮೆಯನ್ನು ಹೆಚ್ಚಿಸಿವೆ. ಜಾನಪದ ಸಂಗೀತ ಕ್ಷೇತ್ರಕ್ಕೆ ಡಾ. ಚಂದ್ರಶೇಖರ ಕಂಬಾರ ಅವರ ಕೊಡುಗೆ ಅಪಾರವಾದದ್ದು ಎಂದು ವಿಶ್ವವಿದ್ಯಾಲಯದ ಲಲಿತಕಲಾ
ಡಾ. ಚಂದ್ರಶೇಖರ ಕಂಬಾರ ಅವರ ಕೊಡುಗೆ ಅಪಾರ


ಹಂಪಿ, 03 ಜನವರಿ (ಹಿ.ಸ.) :

ಆ್ಯಂಕರ್ : ಡಾ.ಚಂದ್ರಶೇಖರ ಕಂಬಾರ ಅವರ ವ್ಯಕ್ತಿತ್ವ, ಬರವಣಿಗೆ, ನಾಟಕ. ಜಾನಪದ ಗೀತೆಗಳು ಇಂದಿಗೂ ಕನ್ನಡ ವಿಶ್ವವಿದ್ಯಾಲಯದ ಹಿರಿಮೆಯನ್ನು ಹೆಚ್ಚಿಸಿವೆ. ಜಾನಪದ ಸಂಗೀತ ಕ್ಷೇತ್ರಕ್ಕೆ ಡಾ. ಚಂದ್ರಶೇಖರ ಕಂಬಾರ ಅವರ ಕೊಡುಗೆ ಅಪಾರವಾದದ್ದು ಎಂದು ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನ್‍ರಾದ ಡಾ. ಶಿವಾನಂದ ವಿರಕ್ತಮಠ ಅವರು ಹೇಳಿದ್ದಾರೆ.

ಡಾ. ಚಂದ್ರಶೇಖರ ಕಂಬಾರ ಅವರ 89ನೇ ಹುಟ್ಟುಹಬ್ಬದ ಪ್ರಯುಕ್ತ ಗೀತ ಸಂತಸ ಮತ್ತು ಕಂಬಾರರ ಕವನಗಳ ವಾಚನ ಹಾಗೂ 2025-26ನೇ ಸಾಲಿನ ಬಿ.ಪಿ.ಎ. ಮತ್ತು ಎಂ.ಪಿ.ಎ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಡಾ. ಶಿವಾನಂದ ವಿರಕ್ತಮಠ ಅವರು ಮುಂದುವರೆದು ಮಾತನಾಡುತ್ತ, ಕನ್ನಡ ವಿಶ್ವವಿದ್ಯಾಲಯದ ಹಲವು ವಿಭಾಗಗಳಿಗೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಬರಬೇಕು. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕಾಗಿದೆ ಎಂದರು.

ಸಂಶೋಧನಾ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ.ಎಸ್.ವೈ. ಸೋಮಶೇಖರ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಸ್ತಂಭಗಳೆಂದು ಕಂಬಾರರು ಕರೆಯುತ್ತಿದ್ದರು. 1993-94ರಲ್ಲಿ ಕಲ್ಲು, ಮರಳು, ಬಂಡೆ ಮತ್ತು ಕುರುಚಲು ಗಿಡಗಳಿಂದ ಕೂಡಿದ್ದ ಭೂಮಿಯಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ವಿದ್ಯೆಯ ಅರಣ್ಯವನ್ನಾಗಿ ಮಾರ್ಪಡಿಸಿದ ಸಂಸ್ಥಾಪಕರಾದ ಡಾ. ಚಂದ್ರಶೇಖರ ಕಂಬಾರ ಅವರು ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು, ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರರು ನನ್ನ ಗುರುಗಳು ಎಂದು ಹೇಳಲು ಹೆಮ್ಮೆಯಾಗುತ್ತದೆ. ಕಂಬಾರರು ಸ್ಥಾಪಿಸಿದ ವಿಶ್ವವಿದ್ಯಾಲಯದಲ್ಲೇ ನಾನು ಕುಲಪತಿಯಾಗಿ ನೇಮಕವಾಗಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ವಿಶ್ವವಿದ್ಯಾಲಯದ ಬಹುತೇಕ ವಿಭಾಗಗಳು ಬೌದ್ಧಿಕ ಮತ್ತು ವಿಮರ್ಶಾತ್ಮಕ ಚಟುವಟಿಕೆಗಳಿಂದ ಕೂಡಿದ್ದರೆ ಸಂಗೀತ, ನಾಟಕ, ದೃಶ್ಯಕಲಾ ವಿಭಾಗಗಳು ಭಾವನಾತ್ಮಕ ವಿಚಾರಗಳಿಂದ ಕೂಡಿರುತ್ತವೆ. ಇಂತಹ ವಿಚಾರಗಳು ಮನುಷತ್ವವನ್ನು ಬೆಳೆಸುತ್ತದೆ. ಯಾರಿಗೆ ಕಲೆಯ ಸಂಪರ್ಕವಿರುತ್ತದೆಯೋ ಅವನು ಸದಕಾಲ ಮನುಷ್ಯನಾಗಿರಲು ಪ್ರಯತ್ನಿಸುತ್ತಾನೆ. ಕಲೆ ಮತ್ತು ನಾಟಕವು ನಮ್ಮನ್ನು ಮನುಷ್ಯರಾಗುವ ಕಡೆಗೆ ಪ್ರೇರೇಪಿಸುತ್ತದೆ. ನೀವೆಲ್ಲ ಸತ್ಪ್ರಜೆಗಳಾಗಿ ನಿಮ್ಮ ಜೀವನ ಪ್ರೀತಿಯಿಂದ ಕೂಡಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮರಿಯಮ್ಮನಹಳ್ಳಿಯ ರಂಗಭೂಮಿ ಕಲಾವಿದರಾದ ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾದ ಡಾ.ನಾಗರತ್ನಮ್ಮ ಅವರು ಕಂಬಾರರು ನಡೆಸಿದ್ದ ಮಹಾನ್ ದಿಗ್ಗಜರ ನಾಟಕಕಾರರ ವರ್ಕ್‍ಶಾಪ್‍ನಲ್ಲಿ ಭಾಗವಹಿಸಿದ್ದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಕಂಬಾರರ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ನಾನು ವಿಶ್ವವಿದ್ಯಾಲಯದಲ್ಲಿ ಓದಿಲ್ಲ, ನನಗೆ ಜೀವನವೇ ಒಂದು ವಿಶ್ವವಿದ್ಯಾಲಯವಾಗಿದೆ. ಇಂತಹ ವಿಶ್ವವಿದ್ಯಾಲಯದಲ್ಲಿ ಓದುವ ಅವಕಾಶ ನಿಮಗೆ ಸಿಕ್ಕಿದೆ ಅದರ ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಡಾ. ಚಂದ್ರಶೇಖರ್ ಕಂಬಾರ ಅವರಿಗೆ ಅವರ ಜನ್ಮದಿನದಂದೇ ಮದರಾಸಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗೊಯೆಂಕಾ ಪ್ರಶಸ್ತಿ ಲಭಿಸಿರುವುದು ಕನ್ನಡ ವಿಶ್ವವಿದ್ಯಾಲಯಕ್ಕೆ ಮತ್ತೊಂದು ಖುಷಿ ವಿಚಾರವಾಗಿದೆ. ಸಂಗೀತ ಮತ್ತು ದೃಶ್ಯಕಲೆ ವಿಭಾಗಗಳಿಗೆ ಭಾಷೆ ಹಾಗೂ ಗಡಿಯ ಮಿತಿಯಲ್ಲ. ಆದ್ದರಿಂದ ಕನ್ನಡ ವಿಶ್ವವಿದ್ಯಾಲಯವು ಈ ಎರಡು ವಿಭಾಗದ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಹಾಗೂ ಬೆಳೆಯಬೇಕು ಎಂಬ ಕನಸು ಡಾ. ಚಂದ್ರಶೇಖರ ಕಂಬಾರ ಅವರದಾಗಿತ್ತು. ಈ ನಿಟ್ಟಿನಲ್ಲಿ ದೇಶದಲ್ಲಿ ಮೊದಲ ಬಾರಿಗೆ ಸಂಗೀತ ವಿಶ್ವಕೋಶವನ್ನು ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯಕಲಾ ವಿಭಾಗದಿಂದ ಹೊರತರಬೇಕೆಂದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಡಾ. ಚಂದ್ರಶೇಖರ್ ಕಂಬಾರ ಅವರ 89ನೇ ಹುಟ್ಟುಹಬ್ಬದ ಪ್ರಯುಕ್ತ ಕನ್ನಡ ವಿಶ್ವವಿದ್ಯಾಲಯದ ವಿಭಾಗದ ವಿದ್ಯಾರ್ಥಿಗಳು ಸಂಶೋಧನಾರ್ಥಿಗಳು ಕವನ ವಾಚನಗಳನ್ನು ಮಾಡಿದರು. ಕನ್ನಡ ವಿಶ್ವವಿದ್ಯಾಲಯದ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರು, ಅಧಿಕಾರಿಗಳು, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande