
ವಿಜಯಪುರ, 03 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಶನಿವಾರ ನಗರದ ಜ್ಞಾನಯೋಗಾಶ್ರಮದಲ್ಲಿ ಆಯೋಜಿಸಲಾದ ಸಿರಿಧಾನ್ಯ ನಡಿಗೆ (ವಾಕಥಾನ್) ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಆನಂದ ಕೆ. ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಿರಿಧಾನ್ಯಗಳ ಬಳಕೆ ಅತ್ಯಗತ್ಯವಾಗಿದೆ. ಸಿರಿಧಾನ್ಯ ಆಹಾರ ಬಳಕೆಮಾಡಬೇಕು.
ಮಧುಮೇಹ, ರಕ್ತದೊತ್ತಡದಂತಹ ರೋಗಗಳಿಗೆ ಒಳಗಾಗುವುದನ್ನು ಕಾಣುತ್ತಿದ್ದೇವೆ ಇಂತಹ ರೋಗಗಳಿಂದ ದೂರ ಉಳಿಯಲು ಸಿರಿಧಾನ್ಯಗಳು ಅತ್ಯಂತ ಸಹಕಾರಿ ಆಗಿವೆ ಎಂದು ಹೇಳಿದರು.
ನಮ್ಮ ಹಿರಿಯರ ಆಹಾರ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಸಿರಿಧಾನ್ಯಗಳನ್ನು ಪುನಃ ದಿನನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಆರೋಗ್ಯಕರ ಆಹಾರ ಪದ್ಧತಿ ಹಾಗೂ ಸಿರಿಧಾನ್ಯಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ನಡಿಗೆಯನ್ನು ಆಯೋಜಿಸಲಾಗಿದೆ.
ಸಿರಿಧಾನ್ಯಗಳು ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು,ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳಾಗಿವೆ.ಹವಾಮಾನ ಬದಲಾವಣೆ ಸವಾಲುಗಳನ್ನು ಎದುರಿಸುವಲ್ಲಿ ಸಿರಿಧಾನ್ಯಗಳು ರೈತರಿಗೆ ವರದಾನವಾಗಿವೆ. ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರು ಸಿರಿಧಾನ್ಯಗಳ ಪೌಷ್ಟಿಕ ಮಹತ್ವ, ಉಪಯೋಗ ಹಾಗೂ ಸಿರಿಧಾನ್ಯಗಳ ಬಳಕೆ ಹೆಚ್ಚಿದರೆ ರೈತರ ಆದಾಯವೂ ಹೆಚ್ಚುವುದರ ಜೊತೆಗೆ ಜನರ ಆರೋಗ್ಯವೂ ಉತ್ತಮವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಿರಿ ಧಾನ್ಯ ನಡಿಗೆಯಲ್ಲಿ ವಿವಿಧ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಿರಿಧಾನ್ಯಗಳ ಮಹತ್ವ ಸಾರುವ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಲಾಯಿತು. ನಡಿಗೆ ನಗರ ಪ್ರಮುಖ ರಸ್ತೆಗಳಲ್ಲಿ ಸಾಗಿ, ಸಾರ್ವಜನಿಕರ ಗಮನ ಸೆಳೆಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande