


ಗಂಗಾವತಿ, 03 ಜನವರಿ (ಹಿ.ಸ.) :
ಆ್ಯಂಕರ್ : ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಮನೆ ಬಳಿ ನಡೆದ ಗುಂಡೇಟು ದಾಳಿಯಿಂದ ರೆಡ್ಡಿಯವರು ಪ್ರಾಣಪಾಯದಿಂದ ಪಾರಾಗಿದ್ದು ಆಂಜನೇಯ ಸ್ವಾಮಿಯೇ ಅವರನ್ನು ಕಾಪಾಡಿದ್ದಾರೆ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಶಾಸಕ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ರೆಡ್ಡಿ ಅವರು ಭಾವುಕರಾಗಿ ಹೇಳಿದ್ದಾರೆ.
ಇಂದು ಅವರು ಕಿಷ್ಕಂಧಾ ಅಂಜನಾದ್ರಿ ಬೆಟ್ಟದಲ್ಲಿ ಪಾದಗಟ್ಟಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ, ಶ್ರೀರಾಮಚಂದ್ರನಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿ ಪುತ್ಥಳಿಯ ಅನಾವರಣ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಮತ್ತು ಕೆಲ ಮುಖಂಡರು ಉದ್ದೇಶಪೂರ್ವಕವಾಗಿ ನಮ್ಮ ಮನೆಯ ಮುಂದೆ ಹಾಗೂ ನಡೆದಾಡುವ ದಾರಿಯಲ್ಲಿ ಬ್ಯಾನರ್ ಗಳನ್ನು ಅಡ್ಡಾದಿಡ್ಡಿ ಕಟ್ಟಿದ್ದರಿಂದ ಜನಾರ್ದನ ರೆಡ್ಡಿ ಅವರು ಬ್ಯಾನರ್ ಗಳನ್ನು ದಾರಿಗೆ ಅಡ್ಡವಾಗಿ ಕಟ್ಟದಂತೆ ಮನವಿ ಮಾಡಿದರು ಕೂಡ ಅವರು ಬ್ಯಾನರ್ ಗಳನ್ನು ಅಡ್ಡ ಕಟ್ಟಿ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಗುಂಡಿನ ದಾಳಿ ಮತ್ತು ಮನೆಯ ಮೇಲೆ ಕಲ್ಲು ತೂರಾಟ ಮಾಡಿ ರೆಡ್ಡಿ ಅವರನ್ನು ಮುಗಿಸುವ ನಾರಾ ಭರತ್ ರೆಡ್ಡಿ ಹಾಗೂ ಅವರ ಪಟಲಾಂ ದುರುದ್ದೇಶವನ್ನು ಶ್ರೀ ಆಂಜನೇಯ ಸ್ವಾಮಿಯೇ ತಡೆದು ನಿಲ್ಲಿಸಿದ್ದಾನೆ ಎಂದರು.
ಆಂಜನೇಯ ಸ್ವಾಮಿ, ಮೇಗೋಟಾ ದುರ್ಗಮ್ಮ ದೇವಿಯ ಆಶೀರ್ವಾದದಿಂದ ನಾವು ಉಳಿದಿದ್ದೇವೆ, ಆದ್ದರಿಂದ ಇಂದು ಅಂಜನಾದ್ರಿ ಬಂದು ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಅರುಣಾ ಲಕ್ಷ್ಮಿ ರೆಡ್ಡಿ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್