
ವಿಜಯಪುರ, 03 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಹಂಗಾಮಿ ಕುಲಪತಿ ಡಾ. ಅರುಣ ಚಂ. ಇನಾಮದಾರ ಅವರಿಗೆ ಭಾರತೀಯ ವೈದ್ಯಕೀಯ ಸಂಘ(Indian Medical Association) ರಾಷ್ಟ್ರೀಯ ಅತ್ಯುತ್ತಮ ವೈದ್ಯಕೀಯ ಶಿಕ್ಷಕ(National Best Medical Teacher Award) ನೀಡಿ ಗೌರವಿಸಿದೆ.
ಡಿ. 26 ರಂದು ಗುಜರಾತಿನ ಅಹ್ಮದಾಬಾದಿನಲ್ಲಿ ನಡೆದ ಸಂಘದ 100ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಓಡಿಶಾ ಆರೋಗ್ಯ ಸಚಿವ ಡಾ. ಮುಕೇಶ ಮಹಾಲಿಂಗ ಪ್ರಶಸ್ತಿ ಪ್ರದಾನ ಮಾಡಿದರು.
ಡಾ. ಅರುಣ ಚಂ. ಇನಾಮದಾರ ಅವರು ದೇಶದ ಪ್ರತಿಷ್ಠಿತ 10 ವೈದ್ಯರಲ್ಲಿ ಒಬ್ಬರಾಗಿದ್ದು, ಅವರು ಕಳೆದ 30 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಕರಾಗಿ ಸಲ್ಲಿಸಿರುವ ಸೇವೆ, ವಿದ್ಯಾರ್ಥಿಗಳನ್ನು ಅದರಲ್ಲೂ ಚರ್ಮರೋಗ ವಿಭಾಗದ ವೈದ್ಯಕೀಯ ಭವಿಷ್ಯದ ವೈದ್ಯರನ್ನಾಗಿ ಮಾಡಲು ಪಟ್ಟಿರುವ ಶ್ರಮವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಡಾ. ಅರುಣ ಚಂ. ಇನಾಮದಾರ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಬಿ. ಪಾಟೀಲ, ಡೀಮ್ಡ್ ವಿವಿ ಕುಲಾಧಿಪತಿ ಬಿ. ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande